ಹುಳಿಯಾರು:
ಉದರ ನಿಮಿತ್ತಮ್ ಬಹುಕೃತ ವೇಷಮ್ ಎನ್ನುವಂತೆ ಮನುಷ್ಯ ಹೊಟ್ಟೆಹೊರೆಯಲು ನಾನಾ ತರೇವಾರಿ ಕಾಯಕ ಮಾಡುತ್ತಾನೆ. ಇದರಲ್ಲಿ ಟೂರಿಸ್ಟ್ ಡ್ರೈವರ್ ಕಾಯಕ ಸಹ ಒಂದಾಗಿದ್ದು ರಾಜ್ಯ-ರಾಷ್ಟ್ರದ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪರ್ಯಟನೆ ಮಾಡಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ನೂರಾರು ಚಾಲಕರ ಬದುಕಿನ ಬಂಡಿ ಕೊರೊನಾ ಭೀತಿಯಿಂದ ಉರುಳದೆ ಸಂಕಷ್ಟ ಸೃಷ್ಠಿಯಾಗಿದೆ.
ಹೌದು, ಕೊರೊನಾ ವೈರಸ್ ಭೀತಿಯಿಂದಾಗಿ ಪ್ರಯಾಣ ಮಾಡುವವರ ಸಂಖ್ಯೆ ತೀರಾ ಇಳಿದಿದೆ. ಹೊರರಾಜ್ಯವಿರಲಿ, ರಾಜ್ಯದ ಧಾರ್ಮಿಕ ಸ್ಥಳಕ್ಕೂ ಹೋಗುವವರಿಲ್ಲದಾಗಿದ್ದಾರೆ. ಇದರಿಂದ ವಾಹನ ಚಾಲಕರು ಹೈರಾಣಾಗಿದ್ದು ಪರಿಸ್ಥಿತಿ ಹೀಗೆ ಮುಂದುವರಿದರೆ ಜೀವನ ನಿರ್ವಹಣೆ ಹೇಗೆಂಬುದು ತಿಳಿಯದೆ ಚಿಂತಾಕ್ರಾಂತರಾಗಿದ್ದಾರೆ.
ಹುಳಿಯಾರು ಪಟ್ಟಣವು ಸುತ್ತಮುತ್ತಲ ಮೂರ್ನಲ್ಕು ಜಿಲ್ಲೆಗಳ ಗಡಿಗ್ರಾಮಗಳ ಪ್ರಮುಖ ವ್ಯಾಪಾರ ಸ್ಥಳವಾಗಿದೆ. ಅಲ್ಲದೆ ಸುತ್ತಮುತ್ತಲ 50 ಕಿ.ಮಿ.ವ್ಯಾಪ್ತಿಯಲ್ಲಿ ಎಲ್ಲಿಯೂ ಲಭ್ಯವಾಗದ ಟೂರಿಸ್ಟ್ ವಾಹನಗಳು ಇಲ್ಲಿವೆ. ಸಿಫ್ಟ್, ಟೆಂಪೋ ಟ್ರ್ಯಾವಲರ್, ಇನೋವಾ, ಎರಿಟಿಗ, ವ್ಯಾನ್ ಹೀಗೆ ಪ್ರವಾಸಿಗರ ಆಯ್ಕೆಗೆ ತಕ್ಕಂತೆ ಎಂಭತಕ್ಕೂ ಹೆಚ್ಚು ವಾಹನಗಳು ಪ್ರಾವಸಿಗರ ಸೇವೆಗೆ ಸಿಗಲಿದೆ.
ಹಾಗಾಗಿಯೇ ಸುತ್ತಮುತ್ತ ನೂರಾರು ಗ್ರಾಮಗಳ ಜನರು ಪ್ರವಾಸ ಹೋಗಬೇಕೆಂದು ನಿಶ್ಚಯಿಸಿದ ಕ್ಷಣವೇ ಹುಳಿಯಾರಿನ ಮ್ಯಾಕ್ಸಿಕ್ಯಾಬ್ ಮಾಲೀಕರು ಅಥವಾ ಚಾಲಕರಿಗೆ ಪೋನ್ ಮಾಡಿ ವೆಯಿಕಲ್ ಬುಕ್ ಮಾಡ್ತಾರೆ. ದೊಡ್ಡ ಗಾಡಿಗಳು ವಾರಕ್ಕೆ ಎರಡ್ಮೂರು ಟ್ರಿಪ್ ಬುಕ್ ಆದರೆ ಕಾರುಗಳಂತೂ ನಿತ್ಯ ಒಂದು ಟ್ರಿಪ್ ಬುಕ್ ಆಗುತ್ತವೆ. ಮದುವೆ ಸೀಝನ್‍ನಲ್ಲಂತೂ ವಾಹನಗಳಿಗೆ ಫುಲ್ ಡಿಮ್ಯಾಂಡ್ ಎನ್ನುತ್ತಾರೆ ಚಾಲಕ ವರುಣ್,
ಈ ಭಾಗದಲ್ಲಿ ಸಾಮಾನ್ಯವಾಗಿ ದಕ್ಷಿಣ ಕನ್ನಡದ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೇಸುಬ್ರಹ್ಮಣ್ಯ, ಸಿಂಗಧೂರು, ಹೊರನಾಡು ಹೋಗುವವರ ಸಂಖ್ಯೆ ಹೆಚ್ಚಿದೆ. ಉಳಿದಂತೆ ಬೆಂಗಳೂರು, ಹಂಪೆ, ಮಂತ್ರಾಲಯ ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಹೋಗುವವರಿದ್ದಾರೆ. ಹಾಗಂದ ಮಾತ್ರಕ್ಕೆ ಹೊರರಾಜ್ಯದ ಪ್ರವಾಸಕ್ಕೆ ಹೋಗುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ವಾರಕ್ಕೆ ಹತ್ತನ್ನೆರಡು ಟ್ರಿಪ್ ಹೊರರಾಜ್ಯಗಳಿಗೆ ಇದ್ದೇ ಇರುತ್ತದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಸುಂಧರ್.
ಆದರೆ ಈಗ ಕೊರೊನಾ ವೈರಸ್ ಭೀತಿಯ ಪರಿಣಾಮದಿಂದ ಟ್ರಾವೆಲ್ಸ್ ಏಜೆನ್ಸಿಗಳಿಗೆ ಅತೀವ ನಷ್ಟ ಉಂಟು ಮಾಡಿದೆ. ಇದರ ನೇರ ಪರಿಣಾಮ ವಾಹನ ಚಾಲಕರ ಮೇಲಾಗಿದೆ. ನಿತ್ಯ ಕನಿಷ್ಠ 300 ಬಾಟಾ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಟೂರಿಸ್ಟ್ ಡೈವರ್‍ಗಳು ವಾರದಿಂದ ಕೆಲಸ ಇಲ್ಲದೆ ಬರಿಗೈಯಲ್ಲಿ ಮನೆಗೆ ತೆರಳುತ್ತಿದ್ದಾರೆ. ಇದೀಗ ನಿತ್ಯ ಬದುಕನ್ನು ನಡೆಸುವುದೂ ಕಷ್ಟಕರವಾಗಿ ಪರಿಣಮಿಸಿದೆ.
ಟೂರಿಸ್ಟ್ ಟ್ಯಾಕ್ಸಿ ಉದ್ದಿಮೆಯನ್ನೇ ನೆಚ್ಚಿಕೊಂಡು ಅನೇಕರು ಖಾಸಗಿ ಫೈನಾನ್ಸ್‍ನಲ್ಲಿ ಸಾಲ ಮಾಡಿ ವಾಹನ ತಂದಿದ್ದು ಇದರ ಇಎಂಐ ಕಟ್ಟಲು ಪರದಾಡುತ್ತಿದ್ದಾರೆ. ಡ್ರೈವರ್ ಬಾಟ ನಂಬಿ ಮೈಕ್ರೋ ಫೈನಾಸ್ಸ್‍ಗಳಲ್ಲಿ ಸಾಲ ಮಾಡಿದ ಚಾಲಕರು ವಾರದ ಸಾಲದ ಕಂತು ಕಟ್ಟಲು ಮತ್ತೊಬ್ಬರಿಂದ ಸಾಲ ಮಾಡುವಂತ್ತಾಗಿದೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ತಂದೆ-ತಾಯಿಯ ಆಸ್ಪತ್ರೆ ಖರ್ಚು, ರೇಷನ್, ವಿಮೆ ನವೀಕರಣ, ವಾಹನ ದುರಸ್ತಿ ಸೇರಿದಂತೆ ಹಲವು ಬಗೆಯ ಖರ್ಚುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಮುಂದೇನು ಎಂಬ ಆತಂಕದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಪರಿಸ್ಥಿತಿ ಸುಧಾರಿಸದೆ ಹೋದರೆ ನೂರಾರು ಮಂದಿಯ ಬದುಕು ದುರ್ಬರವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ