ಹುಳಿಯಾರು
ಖೋಟಾ ನೋಟು ಮತ್ತು ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲು ಪ್ರಧಾನಿ ಮೋದಿ ಅವರು ದೇಶವನ್ನು ನೋಟು ರಹಿತ ವಹಿವಾಟು ದೇಶವನ್ನಾಗಿ ಮಾಡುವ ಕನಸು ಕಂಡರು. ಇದಕ್ಕೆ ಸಹಕಾರವಾಗಿ ಬ್ಯಾಂಕ್‍ಗಳು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್‍ಗೆ ವೇಗ ಕೊಟ್ಟರು. ಖಾಸಗಿಯವರು ಮೊಬೈಲ್ ಆಫ್ ಮೂಲಕ ಉತ್ತೇಜನ ನೀಡಿದರು. ರಿಲಿಯನ್ಸ್ ಟೆಲಿಕಾಂ ಕಂಪನಿಯವರು ಕಡಿಮೆ ದರದಲ್ಲಿ ಹಳ್ಳಿಹಳ್ಳಿಗಳಲ್ಲಿ 4 ಜಿ ಇಂಟರ್ ನೆಟ್ ಸೌಲಭ್ಯ ಕಲ್ಪಿಸಿದರು. ಆದರೆ ನೋಟು ರಹಿತ ವಹಿವಾಟಿನ ಸಾಧನೆ ಮಾತ್ರ ನಿರೀಕ್ಷಿತ ಮಟ್ಟ ಇನ್ನೂ ಮುಟ್ಟಿಲ್ಲ.
ಹೌದು, ಇದಕ್ಕೆ ತಾಜಾ ನಿದರ್ಶನವಾಗಿ ಹುಳಿಯಾರು ಬೆಸ್ಕಾಂ ಇದೆ. ಮಾಸಿಕ ಹಣದ ವಹಿವಾಟು ನಡೆಸಲೇ ಬೇಕಿದ್ದ ಬೆಸ್ಕಾಂನಲ್ಲಿ ಇನ್ನೂ ಮಂದಗತಿಯಲ್ಲಿ ನೋಟು ರಹಿತ ವಹಿವಾಟು ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಚಾಲನೆ ಕೊಟ್ಟ ಸೆ.2016 ರಲ್ಲಿ 29 ಮಂದಿಯಿಂದ 25,263 ರೂ. ಸಂಗ್ರಹಿಸಿದ್ದ ಹುಳಿಯಾರು ಬೆಸ್ಕಾಂ ಡಿ.2018 ರಲ್ಲಿ 218 ಮಂದಿಯಿಂದ 1.45,550 ರೂ. ಮಾತ್ರ ಕಟ್ಟಿಸಿಕೊಂಡಿದೆ. ಇದು ಈಗಿನ ಒಟ್ಟಾರೆ ಗ್ರಾಹಕರಲ್ಲಿ ಶೇ.1 ಮಾತ್ರ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಸಾವಿಲ್ಲದ ಮನೆಯಲ್ಲಿ ಸಾಸಿವೆ ತರುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಪೋನ್ ಇಲ್ಲದ ಮನೆ ಹುಡುಕುವುದು. ಅಷ್ಟರಮಟ್ಟಿಗೆ ಮನೆಮನೆಗಳನ್ನು ಮಕ್ಕಳು, ವೃದ್ಧರನ್ನು ಬಿಡದೆ ಸ್ಮಾರ್ಟ್ ಪೋನ್ ಆವರಿಸಿದೆ. ಆನ್‍ಲೈನ್ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀಧಿಸುತ್ತಾರೆ. ಹೊಸಹೊಸ ಫಿಲಂ ಡೌನ್ ಮಾಡಿ ನೋಡ್ತಾರೆ, ಗೇಮ್, ವಾಯ್ಸ್ ಡಬ್ಬಿಂಗ್ ಹೀಗೆ ಅನೇಕ ಚಟುವಟಿಕೆಗಳಿಗೆ ಬಳಸುತ್ತಾರಾದರೂ ಆನ್ ಲೈನ್‍ನಲ್ಲಿ ಬೆಸ್ಕಾಂ ಬಿಲ್ ಮಾತ್ರ ಕಟ್ಟುತ್ತಿಲ್ಲ. ಈ ಬಗ್ಗೆ ಮೀಟರ್ ರೀಡರ್‍ಗಳಿಂದ ಅರಿವು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ನಗದು ಗುಮಾಸ್ತ ಕೆ.ಪಿ.ಮಂಜುನಾಥ್ ಬೇಸರದಿಂದ ನುಡಿಯುತ್ತಾರೆ.
ವಿದ್ಯುತ್ ಬಿಲ್ ಪಾವತಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಸುಲಭವಾಗಿ ಪಾವತಿಸಲು `ಬೆಸ್ಕಾಂ ಮಿತ್ರ’ ಸೇರಿದಂತೆ ಅನೇಕ ಆಪ್‍ಗಳಿವೆ ಪೋನ್ ಪೇ, ಗೂಗಲ್ ಪೇ, ಪೇಟಿಯಂಗಳಲ್ಲಿ ಕ್ಯಾಷ್ ಬ್ಯಾಕ್ ಆಫರ್ ಸಹ ಕೊಡ್ತಾರೆ. ಅಲ್ಲದೆಯೂ ಆನ್‍ಲೈನ್ ಮೂಲಕ ಪಾವತಿಸಲು ಇನ್ನೂ ನಾಲ್ಕೈದು ಆಯ್ಕೆಗಳಿವೆ. ಆದರೆ ವಿದ್ಯುತ್ ಗ್ರಾಹಕರು ಬಳಸಿಕೊಳ್ಳುತ್ತಿಲ್ಲ. ಆನ್ ಲೈನ್ ಪೇಮೆಂಟ್ ಬಗ್ಗೆ ಕರಪತ್ರ ಹಂಚಿ ಪ್ರಚಾರ ಮಾಡಲಾಗುತ್ತಿದೆ, ಟಿವಿ, ಪೇಪರ್‍ನಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೂ ವಿದ್ಯುತ್ ಬಿಲ್ ಕಟ್ಟಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಬಹುಶಃ ಗ್ರಾಹಕರಿಗೆ ಆನ್ ಲೈನ್ ಪೇಮೆಂಟ್ ಬಗ್ಗೆ ಇನ್ನೂ ನಂಬಿಕೆ ಬಂದಿಲ್ಲ ಎಂದು ಕಾಣುತ್ತಿದೆ ಎಂದು ಬೆಸ್ಕಾಂ ಎಸ್‍ಓ ಉಮೇಶ್ ನಾಯ್ಕ ಅಭಿಪ್ರಾಯಪಡುತ್ತಾರೆ.
ಒಟ್ಟಾರೆ ಹುಳಿಯಾರು ಹೋಬಳಿಯ 2 ಘಟಕದಲ್ಲಿ ಐಪು ಸೆಟ್, ಗೃಹ, ವಾಣಿಜ್ಯ, ಕೈಗಾರಿಕೆ, ನೀರಾವರಿ, ಬೀದಿದೀಪ, ನಿರು ಸರಬರಾಜು, ತಾತ್ಕಾಲಿಕ ಸ್ಥಾವರ ಸೇರಿದಂತೆ 112 ಹಳ್ಳಿಗಳ 33,196 ಗ್ರಾಹಕರಿದ್ದು ಇವರಲ್ಲಿ ಇನ್ನೂರೈವತ್ತು ಮಂದಿ ಮಾತ್ರ ಆನ್ ಲೈನ್‍ನಲ್ಲಿ ವಿದ್ಯುತ್ ಬಿಲ್ ಕಟ್ಟುತ್ತಿದ್ದಾರೆ. ಬೆಸ್ಕಾಂ ಸಿಬ್ಬಂಧಿ ಮಾತ್ರ ಕೊನೆ ದಿನ ಮನೆಮನೆಗೆ ಅಲೆಯುವವವರಾರು ಎಂದು ಆನ್‍ಲೈನ್ ಪೇಮೆಂಟ್ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇತರೆ ಆಪ್ ಬದಲು ಅವರು ತಮ್ಮ ಕಂಪನಿಯ ಬೆಸ್ಕಾಂ ಆಪ್ ಡೌನ್ ಲೌಡ್ ಮಾಡಿ ಪೇಮೆಂಟ್ ಮಾಡುವ ರೀತಿ ಸಹ ತಿಳಿಸುತ್ತಿದ್ದಾರೆ. ಆದರೆ ಬೆಸ್ಕಾಂ ಆಪ್‍ನಲ್ಲಿ ಸರ್ವರ್ ಪ್ರಾಬ್ಲಂ ಸಿಕ್ಕಾಪಟ್ಟೆಯಿದ್ದು ಹಣ ಸಂದಾಯವಾಗಲು ಬಹಳ ಟೈಂ ಹಿಡಿಯುತ್ತದೆ. ಅಲ್ಲದೆ ಕ್ಯಾಷ್ ಬ್ಯಾಕ್ ಆಫರ್ ಇರೋದಿಲ್ಲ ಬದಲಾಗಿ ವಿದ್ಯುತ್ ಬಿಲ್ ಕಟ್ಟಿದರೆ ಅದಕ್ಕೆ ನಾವೇ ಕಮಿಷನ್ ಕೊಡಬೇಕು. ಹಾಗಾಗಿ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗೆ ಹಿಂದೇಟು ಹಾಕುತ್ತಿದ್ದಾರಷ್ಟೆ.
ಈ ಹಳ್ಳಿಗಳ ಗ್ರಾಹಕರು ಆಪ್ ಮೂಲಕ ಬಿಲ್ ಕಟ್ಟುತ್ತಿದ್ದಾರೆ ಬರದಲೇಪಾಳ್ಯ, ಹೊಸಹಳ್ಳಿ, ಕಲ್ಲೇನಹಳ್ಳಿ, ಯಳನಾಡು, ಕೆ.ಸಿ.ಪಾಳ್ಯ, ಬಿಕ್ಕಬಿದರೆ, ಗಾಣಧಾಳು, ಟಿ.ಎಸ್.ಹಳ್ಳಿ, ಬಳ್ಳೆಕಟ್ಟೆ, ತಿಮ್ಮಾಪುರ, ಬರಕನಹಾಲ್, ಗೋಪಾಲಪುರ, ಕಂಪನಹಳ್ಳಿ, ಪುರದಮಠ
ಆನ್ ಲೈನ್ ಪೇಮೆಂಟ್ ವಿವರ
ಆಪ್ ಮೂಲಕ
ಸೆಪ್ಟೆಂಬರ್ 2016 ರಲ್ಲಿ 29 ಗ್ರಾಹಕರಿಂದ 25,263 ರೂ.
ಡಿಸೆಂಬರ್ 2018 ರಲ್ಲಿ 218 ಗ್ರಾಹಕರಿಂದ 1,45, 550 ರೂ.
ನೆಫ್ಟ್ ಮೂಲಕ
ಸೆಪ್ಟೆಂಬರ್ 2016 ರಲ್ಲಿ 38 ಗ್ರಾಹಕರಿಂದ 4,90,370 ರೂ.
ಡಿಸೆಂಬರ್ 2018 ರಲ್ಲಿ 26 ಗ್ರಾಹಕರಿಮದ 5,25,598 ರೂ.
ಆಪ್ ಬಳಕೆ ಹೇಗೆ
ಬೆಸ್ಕಾಂಮಿತ್ರ ಬಳಕೆ ಹೇಗೆ: ಸ್ಮಾರ್ಟ್ ಫೋನ್‍ಗಳಲ್ಲಿ ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಬೆಸ್ಕಾಂ ಮಿತ್ರ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು ಒಟಿಪಿ ಮೂಲಕ ಮೊಬೈಲ್ ಸಂಖ್ಯೆ ನೋಂದಣಿ ಆದರೆ ಈ ಆಪ್ ತೆರೆದುಕೊಳ್ಳುತ್ತದೆ. ಆರ್‍ಆರ್ ಸಂಖ್ಯೆ, ಅಕೌಂಟ್ ಐಡಿ ಟೈಪ್ ಮಾಡಿದ ಬಳಿಕ `ರಿಲೇಶನ್‍ಶಿಪ್’ ಎಂಬಲ್ಲಿ `ಓನರ್’ ಎಂದು ಆಯ್ಕೆ ಮಾಡಿದರೆ, ಮನೆಗೆ ಬರುವ ಬಿಲ್‍ನಲ್ಲಿ ಇರುವ ಎಲ್ಲಾ ವಿವರಗಳು ಅಲ್ಲಿಯೇ ನೋಡಲು ಸಾಧ್ಯ. ಇದಲ್ಲದೇ ಖಾತೆ, ಸಂಪರ್ಕ, ಬಳಕೆ ಹೀಗೆ ಎಲ್ಲ ವಿವರಗಳು ಕಾಣುತ್ತವೆ.
`ಪೇ ನೌ’ ಕ್ಲಿಕ್ ಮಾಡಿದರೆ ಮತ್ತೆ ಒಟಿಪಿ ಬರುತ್ತದೆ. ಅದನ್ನು ದೃಢೀಕರಿಸಿದರೆ ಹಣ ಪಾವತಿಯಾಗುತ್ತದೆ. ಮೊಬೈಲ್ ಸಂಖ್ಯೆ ಮಾತ್ರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಅಲ್ಲದೇ ಬಿಲ್‍ನಲ್ಲಿರುವ ಪೂರ್ಣ ಮೊತ್ತವನ್ನು ಪಾವತಿಸಬೇಕು. ಅರ್ಧ ಪಾವತಿ ಆಗುವುದಿಲ್ಲ.
ಫೋನ್ ಪೇ, ಪೇಟಿಯಂ ಹೀಗೆ ವಿವಿಧ ಆಪ್ ಮೂಲಕವೂ ಪಾವತಿ ಮಾಡಬಹುದು. ಆಪ್ ಡೌನ್‍ಲೋಡ್ ಮಾಡಿಕೊಂಡರೆ ಅದರಲ್ಲಿ ಮೊಬೈಲ್ ರೀಚಾರ್ಜ್, ಡಿಟಿಎಚ್, ಎಲೆಕ್ಟ್ರಿಸಿಟಿ, ಕ್ರೆಡಿಟ್‍ಕಾರ್ಡ್, ಪೋಸ್ಟ್‍ಪೈಡ್, ಲ್ಯಾಂಡ್‍ಲೈನ್, ಬ್ರಾಡ್‍ಬ್ಯಾಂಡ್, ಗ್ಯಾಸ್, ವಾಟರ್, ಮುನ್ಸಿಪಲ್ ಟ್ಯಾಕ್ಸ್, ಇನ್ಶೂರೆನ್ಸ್ ಹೀಗೆ ಹಲವು ಆಯ್ಕೆಗಳಿವೆ. ಅದರಲ್ಲಿ ವಿದ್ಯುತ್ ಬಿಲ್ ಪಾವತಿಸಲು `ಎಲೆಕ್ಟ್ರಿಸಿಟಿ’ ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಬೆಸ್ಕಾಂ ಸೇರಿ ದೇಶದ ಎಲ್ಲಾ ವಿದ್ಯುತ್ ಕಂಪನಿಗಳ ವಿವರ ಬರುತ್ತದೆ. ವಿದ್ಯುತ್ ಖಾತೆ ಸಂಖ್ಯೆ ಹಾಕಿ, ಬ್ಯಾಂಕ್ ಖಾತೆ ಸಂಖ್ಯೆ ಹಾಕಿದರೆ ನಿಮ್ಮ ಬ್ಯಾಂಕ್ ಖಾತೆಯಿಂದ ಬಿಲ್ ಮೊತ್ತ ಬೆಸ್ಕಾಂಗೆ ಹೋಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ