ಹುಳಿಯಾರು:
ಹುಳಿಯಾರು ಹೋಬಳಿಯಲ್ಲಿ ಮುಂಗಾರು ಪೂರ್ವ ವರ್ಷಧಾರೆ ಕೈ ಕೊಟ್ಟಿದೆ. ಪರಿಣಾಮ ಕಳೆದ ವರ್ಷ ಮೇ ಮಾಹೆಯಲ್ಲಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದ ರೈತ ಈ ವರ್ಷ ಉಳಿಮೆ ಸಹ ಮಾಡದೆ ಮಳೆ ಎದುರು ನೋಡುತ್ತಿದ್ದಾನೆ. ಆದರೂ ಮಳೆ ಬರುವುದೋ ಇಲ್ಲವೂ ಎಂಬ ಅನುಮಾನ ಸಹ ರೈತ ವಲಯದಲ್ಲಿ ಮೂಡಿದ್ದು ಬಿತ್ತನೆ ಬೀಜ ಖರೀಧಿಯಲ್ಲಿ ನಿರುತ್ಸಾಹ ತೋರಿದ್ದಾನೆ
ಮಳೆ ಬಂದ ತಕ್ಷಣ ಬಿತ್ತನೆ ಮಾಡುವ ಉದ್ದೇಶದಿಂದ ರೈತರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳುತ್ತಾರೆ. ಹಾಗಾಗಿ ಹುಳಿಯಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ಆರಂಭಿಸಿದೆ. ಅಲಸಂದೆ, ಹೆಸರು, ಉದ್ದು, ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೀಜಗಳನ್ನು ವಿತರಿಸಲಾಗುತ್ತಿದೆ. ಆದರೆ ಕಳೆದ ವರ್ಷಕ್ಕೆ ಓಲಿಸಿದರೆ ಈ ವರ್ಷ ಬಿತ್ತನೆ ಬೀಜ ಖರೀಧಿಯೇ ಇಲ್ಲದಾಗಿದೆ.
ಕಳೆದ ವರ್ಷ ಮೇ ಮಾಹೆಯಲ್ಲಾಗಲೇ 3286 ಕೆ.ಜಿ. ಹೆಸರು, 545 ಕೆ.ಜಿ.ತೊಗರಿ, 205 ಕೆ.ಜಿ.ಉದ್ದು ಖರೀಧಿಸಿದ್ದರು. ಆದರೆ ಈ ವರ್ಷ ಕೇವಲ 300 ಕೆ.ಜಿ. ಹೆಸರು ಹಾಗೂ 60 ಕೆ.ಜಿ ಉದ್ದು ಮಾರಾಟವಾಗಿದ್ದು ಇನ್ನೂ 2250 ಕೆ.ಜಿ ಹೆಸರು, 200 ಕೆ.ಜಿ ಉದ್ದು, 540 ಕೆ.ಜಿ.ತೊಗರಿ, 450 ಕೆ.ಜಿ.ಅಲಸಂದೆ ದಾಸ್ತಾನಿದೆ ಎಂದು ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಹೇಳುತ್ತಾರೆ.
ಬೀಜ ಖರೀಧಿಗೆ ರೈತ ಹಿಂದೇಟು ಹಾಕುತ್ತಿರುವುದಕ್ಕೆ ಮಳೆ ಬಾರದಿರುವುದು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬೀಳುವ ಪೂರ್ವ ಮುಂಗಾರು ಮಳೆ ಸಹ ಒಂದೇ ಒಂದು ಹನಿ ಈ ಭಾಗದಲ್ಲಿ ಬಿದ್ದಿಲ್ಲ. ಕಳೆದ ವರ್ಷ ತಾಲೂಕಿನಲ್ಲಿ ಏಪ್ರಿಲ್‍ನಲ್ಲಿ 34 ಮಿಮೀ, ಮೇನಲ್ಲಿ 140 ಮಿಮೀ ಮಳೆ ಬಿದ್ದಿತ್ತು. ಆದರೆ ಈ ವರ್ಷ ಏಪ್ರಿಲ್‍ನಲ್ಲಿ 14 ಮಿಮೀ, ಮೇನಲ್ಲಿ 21 ಮಿಮೀ ಮಳೆ ಬಿದಿದ್ದು ಹುಳಿಯಾರು ಹೋಬಳಿಯಲ್ಲಂತೂ ಒಂದು ದಿನ ಸಾಮಾನ್ಯ ಮಳೆ ಬಿಟ್ಟರೆ ಇಲ್ಲಿಯವರೆವಿಗೆ ಮಳೆಯೇ ಆಗಿಲ್ಲ.
ಹಾಗಾಗಿ ಈ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ಕಳೆದ ಮೂರ್ನಲ್ಕು ದಿನಗಳ ಹಿಂದೆ ಬಿದ್ದ ಅಲ್ಪ ಮಳೆಯಿಂದ ಮುಂದೆ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಉಳುಮೆ ಮಾಡಿ ಮಣ್ಣನ್ನು ಹದ ಮಾಡಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಉಳಿದಂತೆ ಅಡಿಕೆ ಮತ್ತು ತೆಂಗು ಬೆಳೆಗಾರರು ತೋಟ ಉಳಿಸಿಕೊಳ್ಳಲು ಟ್ಯಾಂಕರ್‍ನಲ್ಲಿ ನೀರು ಹೊಡೆಸುತ್ತಿದ್ದಾರೆ. ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
