ಹುಳಿಯಾರು
ಹುಳಿಯಾರಿನ ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ ಡಾಕ್ಟರ್ ಬಿ.ಆರ್.ಅಬೇಡ್ಕರ್‍ರವರ 129 ಜನ್ಮದಿನಾಚರಣೆ ಆಚರಿಸಲಾಯಿತು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ಭೂತಪ್ಪ ಅವರು ಮಾತನಾಡಿ ಡಾ.ಬಿ.ಆರ್.ಅಬೇಡ್ಕರ್‍ರವರು ಕೇವಲ ಸಂವಿದಾನ ಒಂದನ್ನೇ ಬರೆದಿಲ್ಲ. ಸ್ತ್ರೀ ಸಮಾನತೆ, ಸಹಬಾಳ್ವೆ, ಸಹಕಾರದ ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾರೆ. ಅಂಬೇಡ್ಕರ್ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದೆಡೆ ಆಕರ್ಷಿತರಾಗಿದ್ದರು. ಸದಾ ಓದುವ ಗುಣ ಬೆಳೆಸಿಕೊಂಡಿದ್ದರು.
ಎಲ್ಲಾ ಜಾತಿ, ಧರ್ಮಗಳನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಹೋರಾಡಿದ ಮಾನವತವಾದಿಯಾದರೂ ಒಂದು ಜಾತಿಗೆ ಮಾತ್ರವೇ ಇವರನ್ನು ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿ ಎಂದರು.
ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಸಾಮಾಜಿಕ ಎಡರುತೊಡರುಗಳನ್ನು ಎದುರಿಸಿ ಮೇಲೆ ಬಂದರು. ಹಾಗಾಗಿಯೇ ತಮ್ಮ ಮುಂದಿನ ಪೀಳಿಗೆ ನೋವುಣ್ಣಬಾರದೆಂದು ಸಂವಿಧಾನದಲ್ಲಿ ಮೀಸಲಾತಿ ಸೇರಿಸಿದರು. ಅದರಂತೆ ಇದೂವರೆವಿಗೆ ಬಂದ ಸರ್ಕಾರಗಳು ಅನುದಾನ ಹಂಚಿಕೆಯಲ್ಲಿ ಮೀಸಲಾತಿ ನೀಡಿವೆ. ಆದರೂ ದಲಿತರು ಇನ್ನೂ ಏಳಿಗೆ ಕಾಣದಿರುವುದು ಅವರ ಅರಿವಿನ ಕೊರತೆಯಿಂದ ಮಾತ್ರ. ಇನ್ನಾದರೂ ಯಾವಯಾವ ಇಲಾಖೆಗಳಲ್ಲಿ ದಲಿತರಿಗೆ ಎಷ್ಟು ಅನುದಾನ ಬಂದಿದೆ ಎಂದು ಅರಿತು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದಲಿತರು ಮುಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಪಂ ಆರ್‍ಓ ಪ್ರದೀಪ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ರಾಘವೇಂದ್ರ, ಸಿಬ್ಬಂಧಿಗಳಾದ ಆನಂದ್, ರೇಖಾ, ವೆಂಕಟೇಶ್ ಸೇರಿದಂತೆ ಪೌರಕಾರ್ಮಿಕರು ಮತ್ತು ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
