ಹುಳಿಯಾರು : ರೈತರಿಂದ ಛೀ… ಥೂ… ಚಳುವಳಿ

ಹುಳಿಯಾರು:

     ಅಧಿಕಾರಕ್ಕೋಸ್ಕರ ಖರೀದಿಯಾದ ಶಾಸಕರುಗಳಿಗೆ ಹಾಗೂ ಅಭಿವೃದ್ಧಿ ಬಗ್ಗೆ ಚಿಂತಿಸದೆ ರೈತರ ಹಿತ ಕಡೆಗಣಿಸಿದ ಸರ್ಕಾರಕ್ಕೆ ಛೀ.. ಥೂ ಎಂದು ಉಗಿಯುವ ಚಳುವಳಿಯನ್ನು ಹುಳಿಯಾರಿನಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

     ಹುಳಿಯಾರಿನ ಬಸ್ ನಿಲ್ದಾಣದಲ್ಲಿ ನಡೆದ ವಿನೂತನ ಪ್ರತಿಭಟನೆಯಲ್ಲಿ ತಮ್ಮ ಶಾಸಕ ಸ್ಥಾನವನ್ನು ದುಡ್ಡಿಗೆ ಮಾರಾಟ ಮಾಡಿಕೊಂಡ ಶಾಸಕರುಗಳಿಗೆ ಛೀಮಾರಿ ಹಾಕಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಜನರಿಂದ ಆಯ್ಕೆಯಾಗಿ ಶಾಸಕರಾದ ಇವರುಗಳಿಂದು ಕೇವಲ ಹಣ ಹಾಗೂ ಸಚಿವಗಿರಿ ಸ್ಥಾನಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರಲ್ಲದೆ ಹಣಕ್ಕಾಗಿ ಮತದಾರರನ್ನು ಕಡೆಗಣಿಸಿ ರೆಸಾರ್ಟ್‍ನಲ್ಲಿ ವಾಸಿಸುತ್ತಿರುವ ಶಾಸಕರುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅವರ ಜನ್ಮ ಜಾಲಾಡಿದರು.

     ತಾಲೂಕು ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ ಮಾತನಾಡಿ ರೈತರ, ಸಾರ್ವಜನಿಕರ ಹಿತಾಸಕ್ತಿಗೆ ಸ್ಪಂದಿಸದ ಇವರುಗಳು ಕೇವಲ ಹಣ ಹಾಗೂ ಅಧಿಕಾರದ ಲಾಲಸೆಗಾಗಿ ಸಚಿವರಾಗಿ ದುಡ್ಡು ಮಾಡುವ ಸಲುವಾಗಿ ರಾಜೀನಾಮೆ ನೀಡಿದ್ದು ಜನರು ಇವರುಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು. ತಮ್ಮನ್ನು ತಾವು ಜನಸೇವಕರು ಎಂದು ಕರೆದುಕೊಳ್ಳುತ್ತಾ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗೆ ರಾಜಿನಾಮೆ ನಾಟಕವಾಡುತ್ತಿರುವ ಇವರುಗಳ ಶಾಸಕ ಸ್ಥಾನ ರದ್ದಾಗಬೇಕು ಎಂದರು.

     ಪ್ರಜಾಪ್ರಭುತ್ವದ ಆಶಯಗಳಿಗೆ ತಿಲಾಂಜಲಿಯಿತ್ತು ರಾಜೀನಾಮೆ ನೀಡಿದ ರೆಸಾರ್ಟ್ ರಾಜಕಾರಣಿಗಳಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯಾ ಎಂದು ಟೀಕಿಸಿ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ರೈತರು ಲಜ್ಜೆಗೇಡಿ ಶಾಸಕರುಗಳ ರಾಜೀನಾಮೆ ಪ್ರಹಸನಕ್ಕೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ವಿಧಾನಸಭೆಯನ್ನು ವಿಸರ್ಜಿಸಿ ಮರು ಚುನಾವಣೆ ನಡೆಸುವಂತೆ ಒತ್ತಾಯಿಸಿದರು. ಈ ಮೂಲಕ ರೆಸಾರ್ಟ್ ರಾಜಕಾರಣಿಗಳಿಗೆ ತಕ್ಕ ಉತ್ತರ ಕಲಿಸಬೇಕೆಂದರು.ಈ ಸಂದರ್ಭದಲ್ಲಿ ಹುಳಿಯಾರು ಹೋಬಳಿ ಘಟಕದ ಅಧ್ಯಕ್ಷ ಕೆಂಕೆರೆ ಶಿವಣ್ಣ, ಕರಿಯಣ್ಣ, ದಾಸಪ್ಪ, ರಂಗನಕೆರೆ ಮಂಜಣ್ಣ, ಹೂವಿನ ರಘು, ಪಾತ್ರೆ ಸತೀಶ್ ಮೊದಲಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap