ತುಮಕೂರು
ಮನುಷ್ಯನು ತನಗಿರುವ ಇತಿ ಮಿತಿಗಳನ್ನು ಅರಿತು ಅತಿಯಾದ ಆಸೆ-ಆಕಾಂಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಮಾತ್ರ ಪರಿಸರವನ್ನು ಸಂರಕ್ಷಿಸಲು ಸಾಧ್ಯ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು ವಿಜ್ಞಾನ ಕೇಂದ್ರದ ಸಹಯೋಗದಲ್ಲಿಂದು ಆಯೋಜಿಸಲಾಗಿದ್ದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವೈಜ್ಞಾನಿಕ ಆಲೋಚನೆಯಿಂದ ಪರಿಸರ ಸಂರಕ್ಷಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಾವೆಲ್ಲರು ಪರಿಸರವನ್ನು ಹಾನಿ ಮಾಡದೆ ಕಾಳಜಿವಹಿಸಬೇಕು. ಹಿರಿಯರಾದ ನಾವು ಇಂದಿನ ಮಕ್ಕಳಿಗೆ ಪರಿಸರ ಸಂರಕ್ಷಿಸುವ ಬಗ್ಗೆ ಮಾಹಿತಿ ತಿಳಿಸಿರುವುದಿಲ್ಲ. ಗಿಡ-ಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸಿ ಬಳುವಳಿಯಾಗಿ ನೀಡಬೇಕೆಂದು ತಿಳಿಸಿದರು.
ಎಲೈಟ್ ಈಝಿ ಎಜುಕೇಷನ್ ನಿರ್ದೇಶಕ ಡಾ.ಟಿ.ಎನ್. ಚಂದ್ರಕಾಂತ್ ಮಾತನಾಡಿ, ನಮ್ಮ ಸುತ್ತ ಮುತ್ತಲಿರುವ ಗಾಳಿ, ಬೆಳಕು, ನೀರು ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನೊಳಗೊಂಡ ಪರಿಸರವನ್ನು ಕಾಪಾಡುವುದು ದೊಡ್ಡ ಸವಾಲಾಗಿದೆ. ಪರಿಸರ ಹಾಳು ಮಾಡುವುದರಿಂದ ನಮ್ಮನ್ನು ನಾವು ಅಂತ್ಯಕ್ಕೆ ಕೊಂಡೊಯ್ದಂತಾಗುತ್ತದೆ ಎಂದರು.
ಉಪನ್ಯಾಸ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ.ಡಿ.ಆರ್. ರವಿ ನಾಗರಿಕತೆ ಬೆಳೆದಂತೆ ಪರಿಸರ ನಾಶವಾಗುತ್ತಿದೆ. ಪರಿಸರ ಮಾಲಿನ್ಯದಿಂದ ಜನರ ಆರೋಗ್ಯ ಹದಗೆಡುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ನಮ್ಮ ಮೂಲಮಂತ್ರವಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್, ಪರಿಸರ ಅಧಿಕಾರಿ ಎಸ್.ಕೆ. ಭೀಮ್ಸಿಂಗ್ ಗೌಗಿ, ಕವಿ ಹಾಗೂ ಉದ್ಯಮಿ ಸುಧಾಕಿರಣ ಅಧಿಕ ಶ್ರೇಣಿ, ಮುದುಕಪ್ಪ, ವೆಂಕಟೇಶ್ ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು, ಮಂಡಳಿಯ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸ್ವಚ್ಛತೆ ಹಾಗೂ ಮರಗಿಡ ಬೆಳೆಸಿದ್ದ 2 ಶಾಲೆಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗುಬ್ಬಿ ತಾಲ್ಲೂಕಿನ ಅಮನಘಟ್ಟ ಸರ್ಕಾರಿ ಪ್ರೌಢಶಾಲೆ ಹಾಗೂ ಮಧುಗಿರಿ ತಾಲ್ಲೂಕಿನ ಹನುಮನಹಳ್ಳಿ ಸರ್ಕಾರಿ ಪ್ರೌಢಶಾಲೆಗಳಿಗೆ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಜೊತೆಗೆ ನಗದು ಬಹುಮಾನವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು.