ತುಮಕೂರು :

ದೇಶಾದ್ಯಂತ ಟ್ರಕ್, ಸರಕು ವಾಹನಗಳಿಗೆ ಅನುಮತಿ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಹುಣಸೇಹಣ್ಣು, ಕೊಬ್ಬರಿ ಮಾರಾಟಕ್ಕಾಗಿ ಹೊರ ರಾಜ್ಯಗಳಿಗೆ ಹೋಗಲು ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.
ಒಂದು ಕಡೆ ರೈತರ ಕೃಷಿ ಚಟುವಟಿಕೆ-ಕೃಷಿ ಉತ್ಪನ್ನಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಸಂಬಂಧಿಸಿದ ಸಚಿವರು, ಮುಖ್ಯ ಮಂತ್ರಿಗಳು ಹೇಳಿದರೆÀ ಮತ್ತೊಂದು ಕಡೆ ಹೊರ ರಾಜ್ಯ ವ್ಯಾಪಾರಕ್ಕೆ ಅವಕಾಶ ನಿರ್ಬಂಧ ಎಂಬುದನ್ನು ಅದೇ ಸರ್ಕಾರದ ಕಾನೂನು ಸಚಿವರು ಪ್ರಸ್ತಾಪಿಸುತ್ತಾರೆ.
ಹೀಗೆ ಹಲವು ರೀತಿಯ ವಿಭಿನ್ನ ಹೇಳಿಕೆಗಳಿಂದ, ನಿರ್ಧಾರಗಳಿಂದ ರೈತರು ಮತ್ತು ವರ್ತಕರು ಗೊಂದಲದಲ್ಲಿ ಸಿಲುಕಿದ್ದಾರೆ. ಎರಡು ರೀತಿಯ ಮಾರುಕಟ್ಟೆಗಳು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಣ್ಣು ಮತ್ತು ತರಕಾರಿಗೆ ಸಂಬಂಧಿಸಿದ ಅಂತರಸನ ಹಳ್ಳಿ ಮಾರುಕಟ್ಟೆ, ಬೇಳೆ, ಹುಣಸೇಹಣ್ಣು ಇತ್ಯಾದಿ ಮಾರಾಟಕ್ಕೆ ಸಂಬಂಧಿಸಿದ ಎಪಿಎಂಸಿ ಮಾರುಕಟ್ಟೆ. ಈ ಎರಡೂ ಮಾರುಕಟ್ಟೆಗಳು ಪ್ರತ್ಯೇಕವಾಗಿದ್ದರೂ, ರೈತರು ಬೆಳೆದ ಉತ್ಪನ್ನವೇ ಎರಡೂ ಕಡೆ ಮಾರಾಟವಾಗುತ್ತಿದೆ. ಆದರೆ, ಗೊಂದಲ ಶುರುವಾಗಿರುವುದು ಹಣ್ಣು-ತರಕಾರಿ ಮಾರಾಟಕ್ಕೆ ಇರುವ ಅವಕಾಶ ಇತರೆ ಕೃಷಿ ಉತ್ಪನ್ನಗಳಿಗೆ ಏಕಿಲ್ಲ ಎಂಬುದು.
ಕೊರೊನಾ ವೈರಸ್ ವ್ಯಾಪಿಸುತ್ತಾ ಇತರ ತೀವ್ರತೆ ಹೆಚ್ಚಾದ ಕೂಡಲೇ ಲಾಕ್‍ಡೌನ್ ಮಾಡಲಾಯಿತು. ಪರಿಣಾಮವಾಗಿ ನಗರಗಳಲ್ಲಿ ಉದ್ಯೋಗ ದೊರಕಿಸಿಕೊಂಡು ಉಳಿದಿದ್ದ ಬಹಳಷ್ಟು ಜನ ಹಳ್ಳಿಗೆ ವಾಪಸ್ ಆದರು. ಈ ಅವಧಿಯಲ್ಲಿ ಬಹಳಷ್ಟು ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಈಗ ಹೆಚ್ಚು ಜನ ತೊಡಗಿಸಿಕೊಂಡಿರುವುದು ಹುಣಸೇಹಣ್ಣು ಸಿದ್ಧಗೊಳಿಸುವ ಕಾರ್ಯÀದಲ್ಲಿ. ಮರದಿಂದ ಇಳಿಸಿದ್ದ ಹಣ್ಣನ್ನು ಮಾರಾಟಕ್ಕೆ ಸಿದ್ಧಗೊಳಿಸುವ ಕಾರ್ಯ ನಡೆಯುವ ಕಾಲಕ್ಕೆ ನಗರದಲ್ಲಿದ್ದವರು ಊರಿಗೆ ಬಂದಿದ್ದಾರೆ. ಹುಣಸೇಹಣ್ಣು ಕರ್ಪಡಿ ಮಾಡಿ ಮಾರಾಟಕ್ಕೆ ಹಸನುಗೊಳಿಸಿದರೊ ನಿರೀಕ್ಷಿತ ದರ ಸಿಗುತ್ತಿಲ್ಲ. ಮಾರಾಟ ಸುಲಭ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಕಷ್ಟದಲ್ಲಿ ನೆರವಿಗೆ ಬರಬಹುದೆಂದು ಕಾದು ಕುಳಿತಿದ್ದವರಿಗೆ ನಿರಾಸೆಯೇ ಗಟ್ಟಿ ಎನ್ನುವಂತಾಗಿದೆ..
ಉತ್ತಮ ಬೆಲೆಗೆ ಮಾರಾಟವಾಗುತ್ತಿದ್ದ ಹುಣಸೇಹಣ್ಣು ಕ್ರಮೇಣ ದರದಲ್ಲಿ ಕುಸಿತ ಕಂಡಿದೆ. ಆದರೂ, ಮಾರುಕಟ್ಟೆಗೆ ಹಾಕಲೇಬೇಕು. ರೈತರು ಕಷ್ಟಪಟ್ಟು ಮಾರುಕಟ್ಟೆಗೆ ತಂದರೆ ವರ್ತಕರು ಅದನ್ನು ಖರೀದಿಸುವ ಮನಸ್ಸು ಮಾಡಬೇಕು. ಈಗ ಎದುರಾಗಿರುವ ಸಮಸ್ಯೆ ಎಂದರೆ, ಸರ್ಕಾರದ ಕಾನೂನು ಸಚಿವರು ಹುಣಸೇಹಣ್ಣನ್ನು ಹೊರ ರಾಜ್ಯಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದಿರುವುದು.
ಮಂತ್ರಿಗಳು ಅಧಿಕಾರಿಗಳ ಸಭೆಯಲ್ಲಿ ಹೀಗೆ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾದ ಕೂಡಲೇ ಹಲವು ವರ್ತಕರು ಖರೀದಿಯನ್ನೇ ನಿಲ್ಲಿಸುವಂತಹ ತೀರ್ಮಾನಕ್ಕೆ ಬರುತ್ತಿದ್ದಾರೆ. ಇದು ಪರೋಕ್ಷವಾಗಿ ರೈತರ ಮೇಲೆ ಬಿಸಿ ತಟ್ಟುತ್ತಿದೆ.
ಕಳೆದ ತಿಂಗಳು ಇದ್ದ ಬೆಲೆ ಈಗ ಇಲ್ಲ. ಮಾರ್ಚ ಆರಂಭದ ಎರಡು ವಾರ ಪ್ರತಿ ಕ್ವಂಟಲ್ ಹುಣಸೆ ಹಣ್ಣಿಗೆ 25000 ರೂ.ಗಳಷ್ಟಿತ್ತು. ಕ್ರಮೇಣ ಹದಿನೈದು ಸಾವಿರ ರೂ ಗಳಿಗೆ ಬಂದು ನಿಂತಿತು. ಇನ್ನು ಕಡಿಮೆಯಾಗುವ ಆತಂಕ ಶುರುವಾಗಿದೆ. ಬೆಲೆ ಕಡಿಮೆ ಎಂದು ಮನೆಯಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ, ಕಪ್ಪಾದರೆ ಕಳಪೆ ಎಂದು ಪರಿಗಣಿತವಾಗುತ್ತದೆ. ಇದು ಹುಣಸೆ ಹಣ್ಣು ಬೆಳೆಗಾರರ ಸಂಕಟ. ನಿಮ್ಮ ಸಂಕಟ ಕಟ್ಟಿಕೊಂಡು ನಾವೇನು ಮಾಡಲಿ ಎನ್ನುತ್ತಾರೆ ವರ್ತಕರು. ಈ ಮಧ್ಯೆ ಹಣ್ಣು ಸಂಗ್ರಹಿಸುವ ಮಧ್ಯವತಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಜಮೀನುಗಳಿಗೆ ಹೋಗಿ ಸಂಗ್ರಹಿಸಿದ್ದವರು ವಿಧಿಯಿಲ್ಲದೆ ಸಿಕ್ಕಿದಷ್ಟು ಬೆಲೆಗೆ ಮಾರುತ್ತಿದ್ದೇವೆ ಎನ್ನುತ್ತಿದ್ದಾರೆ.
ರೈತರು ಮತ್ತು ವರ್ತಕರ ನಡುವೆ ತಮ್ಮದೇ ಆದ ಒಂದು ಬಾಂಧವ್ಯ ಇರುತ್ತದೆ. ಹೇಗಿದ್ದರೂ ನಮ್ಮ ಮಾಲನ್ನು ಖರೀದಿಸುತ್ತಾರೆ ಎಂದೇ ರೈತರು ಹುಣಸೇಹಣ್ಣು ಇತ್ಯಾದಿ ಉತ್ಪನ್ನಗಳನ್ನು ವರ್ತಕರ ಬಳಿ ತರುತ್ತಾರೆ. ಆದರೆ, ವರ್ತಕರ ಸ್ಥಿತಿ ಈಗ ಅತಂತ್ರವಾಗಿದೆ. ರೈತರ ಉತ್ಪನ್ನಗಳನ್ನು ಕೊಳ್ಳುವ ಹಾಗೆಯೂ ಇಲ್ಲ. ಒಂದು ವೇಳೆ ಖರೀದಿಸಿದರೆ ಎಷ್ಟು ದಿನಗಳ ಕಾಲ ಲಾಟ್‍ಗಟ್ಟಲೇ ಇಟ್ಟುಕೊಳ್ಳುವುದು. ಇದು ಒಂದು ಸಮಸ್ಯೆಯಾದರೆ, ಹಣದ ಬಟವಾಡೆ ಮತ್ತೊಂದು ಸಮಸ್ಯೆ. ಈಗಿನ ಪರಿಸ್ಥಿತಿಯಲ್ಲಿ ಮುಂಗಡ ಹಣ ಕೊಡಲೂ ಆಗುತ್ತಿಲ್ಲ. ಮಾರಾಟ ಆಗುವವರೆಗೆ ಇರಿ ಎಂದು ಹೇಳಲೂ ಆಗುತ್ತಿಲ್ಲ.
ಮಳೆಗಾಲ ಬಂದಿರುವುದರಿಂದ ರೈತರು ಸಹಜವಾಗಿಯೇ ಬಿತ್ತನೆ ಬೀಜ ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ಕಾಲ ಇದು. ಈ ಕಾರಣಕ್ಕಾಗಿಯೇ ಹುಣಸೇಹಣ್ಣು ಸೇರಿದಂತೆ ತಮ್ಮಲ್ಲಿರುವ ಇತರೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಇದೂ ಸಹಾ ರೈತರ ಕೈಹಿಡಿಯುವ ಸ್ಥಿತಿಯಲ್ಲಿ ಇಲ್ಲ. ಕಳೆದ 2 ತಿಂಗಳ ಹಿಂದೆ ಇದ್ದ ದರ ಈಗ ಅರ್ಧಕ್ಕಿಂತಲೂ ಹೆಚ್ಚು ಕುಸಿದು ಹೋಗಿದೆ.
ನಮ್ಮ ಜಿಲ್ಲೆಯ ಹಲವು ಭಾಗದಲ್ಲಿ ಹುಣಸೇ ಹಣ್ಣನ್ನು ಯತೇಚ್ಚವಾಗಿ ಬೆಳೆಯಲಾಗುತ್ತಿದೆ. ಮಾರುಕಟ್ಟೆ ದಿನಗಳಂದು ಇಲ್ಲಿನ ಎಪಿಎಂಸಿ ಗೆ 30ರಿಂದ 40 ಲೋಡ್ ಹುಣಸೇಹಣ್ಣು ಮಾರುಕಟ್ಟೆಗೆ ಬರುತ್ತದೆ. ಇದರಲ್ಲಿ ಶೇ.5% ಮಾತ್ರವೇ ಸ್ಥಳೀಯವಾಗಿ ಉಪಯೋಗಕ್ಕೆ ಬರಬಹುದು. ಉಳಿದ ಶೇ.95% ರಷ್ಟು ಭಾಗ ಹೊರ ರಾಜ್ಯಗಳಿಗೆ ರವಾನೆಯಾಗಬೇಕು. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮೊದಲಾದ ರಾಜ್ಯಗಳಿಗೆ ಹುಣಸೇಹಣ್ಣು ಮಾರಾಟವಾಗುತ್ತದೆ.
ಬಹಳ ವರ್ಷಗಳಿಂದ ಈ ಸಂಬಂಧದ ಚಟುವಟಿಕೆಗಳು ಚಾಲ್ತಿಯಲ್ಲಿವೆ. ಇದೀಗ ಸರಕು ಸಾಗಣೆ ನಿರ್ಬಂಧ ವಿಧಿಸಿರುವುದರಿಂದ ವರ್ತಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಧಾರಣೆ ತೀವ್ರ ಕುಸಿಯುತ್ತಾ ಸಾಗಿದ್ದು, ಇದು ರೈತರ ಮೇಲೆ ಹೊಡೆತ ನೀಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
