ದಾವಣಗೆರೆ:
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ, ಏಳು ದಶಕಗಳು ಕಳೆದರೂ ಭಾರತದಲ್ಲಿ ಇನ್ನೂ ಹಸಿವುನಿಂದಾಗುವ ಸಾವು ನಿಂತಿಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಕಟ್ಟಡ ಕಾರ್ಮಿಕ ಮಹಿಳೆ ಕೂಲಿ ಕೆಲಸ ಮಾಡುತ್ತಿದ್ದರೆ, ಆಕೆಯ ನಾಲ್ಕು ತಿಂಗಳ ಮಗು ಮಣ್ಣು ತಿನ್ನುತಿತ್ತು. ಆ ಮಗು ಸತ್ತ ನಂತರ ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಹೊಟ್ಟೆಯಲ್ಲಿ ಅನ್ನದ ಬದಲು ಮಣ್ಣು ಇತ್ತು. ಆ ಕಾರಣಕ್ಕಾಗಿಯೇ ಮಗು ಸತ್ತಿದೆ ಎಂಬ ವರದಿ ನೀಡಿರುವುದೇ, ಭಾರತದಲ್ಲಿ ಇನ್ನು ಹಸಿವುನಿಂದಾಗಿ ಸಂಭವಿಸುವ ಸಾವು ನಿಂತಿಲ್ಲ ಎಂಬುದಕ್ಕೆ ಪುರಾವೆಯಾಗಿದೆ ಎಂದರು.
2500 ಕೋಟಿ ರೂ. ಹಣ ಖರ್ಚು ಮಾಡಿ ವಿದೇಶ ಸುತ್ತಾಡಿರುವ, 30 ಸಾವಿರ ರೂ.ಗೆ ಕೆಜಿಯಂತೆ ಸಿಗುವ ಅಣಿಬೆಯನ್ನು ಸೇವಿಸುವ, 10 ಲಕ್ಷ ಮೌಲ್ಯದ ಕೋಟು ಧರಿಸುವ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಪ್ರಧಾನಿಯನ್ನಾಗಿ ಮಾಡಲು ವೋಟು ಹಾಕಿರುವ ಜನರ ಹೊಟ್ಟೆಗೆ ಕನಿಷ್ಠ ಒಂದು ಹೊತ್ತಿನ ಊಟ ನೀಡಬೇಕೆಂದು ಆಗ್ರಹಿಸಿದರು.
ದೇಶದ ಕಾರ್ಮಿಕ ಸಂಘಟನೆಗಳು 21 ಸಾವಿರ ರೂ.ಗಳನ್ನು ಕನಿಷ್ಠ ವೇತನವನ್ನಾಗಿ ನಿಗದಿ ಮಾಡಬೇಕೆಂದು ಒತ್ತಾಯಿಸುತ್ತಿದ್ದರೆ, ಕೇಂದ್ರ ಸರ್ಕಾರ ದಿನಕ್ಕೆ 178 ರೂ. ಕನಿಷ್ಠ ಕೂಲಿ ನಿಗದಿ ಮಾಡಿ, ತಿಂಗಳಿಗೆ 4,628 ರೂ.ಗಳನ್ನು ಕನಿಷ್ಠ ವೇತನವನ್ನಾಗಿ ನಿಗದಿ ಮಾಡಿದ್ದಾರೆ. ಈರುಳ್ಳಿ ಕೆಜಿಗೆ 200 ರೂ. ಆಗಿರುವ ಈ ಸಂದರ್ಭದಲ್ಲಿ ಇಷ್ಟು ಕಡಿಮೆ ವೇತನದಲ್ಲಿ ಇಟುಂಬ ನಿರ್ವಹಣೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದಕ್ಕೆ ಜನತೆ ತಮಗೆ ಬಹುಮತ ನೀಡಿದೆ. ಅದಕ್ಕಾಗಿ ಈ ಕಾನೂನು ಜಾರಿಗೆ ತಂದಿದ್ದೇವೆ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳುತ್ತಿದ್ದಾರೆ. ಹಾಗಾದರೆ, ಅದೇ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ಕಾನೂನು ಜಾರಿ ಮಾಡುವುದಾಗಿಯು ಘೋಷಿಸಲಾಗಿತ್ತು. ಈ ಬಗ್ಗೆ ಏಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು.
ಇಷ್ಟು ದಿನಗಳ ಕಾಲ ಬಿಎಸ್‍ಎನ್‍ಎಲ್ ಅನ್ನು ಉದ್ಧಾರ ಮಾಡಲು 4ಜಿ ಸ್ಪೆಕ್ಟ್ರಂ ಜೊತೆಗೆ 59 ಸಾವಿರ ಕೋಟಿ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಈಗ ನೌಕರರಿಗೆ 15-20 ಲಕ್ಷ ರೂ. ಆಮಿಷ ತೋರಿಸಿ ವಿಆರ್‍ಎಸ್ ಪಡೆಯಲು ಪ್ರಚೋದನೆ ನೀಡುತ್ತಿರುವುದರ ಪರಿಣಾಮದಿಂದಾಗಿ 97 ಸಾವಿರ ನೌಕರರು ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಧಿಕಾರಕ್ಕೆ ಬಂದಾಗಿನಿಂದ ಹಿಡಿದು ಇಲ್ಲಿಯ ವರೆಗೆ 50 ಲಕ್ಷ ಉದ್ಯಮಗಳು ನಷ್ಟ ಅನುಭವಿಸಿವೆ ಎಂದು ಆರೋಪಿಸಿದರು.
ಅಸಂಘಟಿತ ಕಾರ್ಮಿಕರ ಮೇಲೆ ಕೇಂದ್ರ ಸರ್ಕಾರ ನಿರಂತರ ದಾಳಿ ನಡೆಸುತ್ತಿದೆ. 100 ಜನ ಕಾರ್ಮಿಕರು ಇದ್ದ ಕೈಗಾರಿಕೆಗಳಲ್ಲಿ ಯೂನಿಯನ್ ಕಟ್ಟಲು ಹೊಂದಿದ್ದ ಹಕ್ಕನ್ನು ಕಿತ್ತುಕೊಂಡು, 300 ಜನ ಕಾರ್ಮಿಕರು ಕೆಲಸ ಮಾಡುವ ಕೈಗಾರಿಕೆಗಳಿಗೆ ಮಾತ್ರ ಕಾರ್ಮಿಕ ಕಾನೂನುಗಳು ಅನ್ವಯ ಆಗಲಿದೆ ಎಂಬ ನೀತಿಯನ್ನು ಜಾರಿಗೆ ತಂದಿದೆ. ಕಾರ್ಮಿಕರ ಪರವಾಗಿ ಇದ್ದ 54 ಕಾನೂನುಗಳನ್ನು 4 ಸಂಹಿತೆ ಮಾಡುವ ಮೂಲಕ ಕಾರ್ಮಿಕರ ಹಕ್ಕು ಮೊಟಕುಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಸಿಟಿಯು ಜಿಲ್ಲಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ದೇಶದಲ್ಲಿ ಸಣ್ಣ, ಪುಟ್ಟ ವ್ಯಾಪಾರ ಸಂಪೂರ್ಣವಾಗಿ ನೆಲ ಕಚ್ಚಿದೆ. ಮಧ್ಯಮ ವರ್ಗದ ಜನತೆ, ರೈತರು, ಕಾರ್ಮಿಕರು ನೆಮ್ಮದಿಯ ಜೀವನ ನಡೆಸಲು ಆಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಒಂದೇ ದೇಶ ಒಂದೇ ಕಾನೂನು, ಒಂದೇ ದೇಶ ಒಂದೇ ಕಾರ್ಡು ಸೇರಿದಂತೆ ದೇಶಕ್ಕೆ ಇರುವ ಬಹುತ್ವದ ಪರಂಪರೆಯನ್ನು ಧಿಕ್ಕರಿಸುತ್ತಿರುವುದು ಭವಿಷ್ಯತ್ತಿನಲ್ಲಿ ದೇಶಕ್ಕೆ ಕುತ್ತು ತಂದ್ದೊಡ್ಡಲಿದೆ. ಆದ್ದರಿಂದ ಪ್ರತಿಯೊಬ್ಬರೂ ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಬೇಕೆಂದು ಕರೆ ನೀಡಿದರು.
ಎಐಯುಟಿಯುಸಿ ರಾಜ್ಯ ಮುಖಂಡ ಷಣ್ಮುಗಂ ಮಾತನಾಡಿ, ದೇಶದಲ್ಲಿ ವ್ಯಕ್ತಿ, ಪಕ್ಷ ಬದಲಾಗುವುದರಿಂದ ಕಾರ್ಮಿಕರ ಪರಿಸ್ಥಿತಿ ಸುಧಾರಿಸುವುದಿಲ್ಲ. ಏಕೆಂದರೆ, ಇಡೀ ವ್ಯವಸ್ಥೆಯಲ್ಲಿಯೇ ಲೋಪ ಇದೆ. ಹೀಗಾಗಿ ವ್ಯವಸ್ಥೆ ಬದಲಾದರೆ ಕಾರ್ಮಿಕರ ಸ್ಥಿತಿ ಸುಧಾರಣೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ರೈತ ಮುಖಂಡ ಬಲ್ಲೂರು ರವಿಕುಮಾರ್, ಜೆಸಿಟಿಯುನ ರಾಘವೇಂದ್ರ ನಾಯರಿ, ಕೆ.ಎಲ್.ಭಟ್, ಮಂಜುನಾಥ್ ಕೈದಾಳೆ, ಆನಂದರಾಜ್, ಷಣ್ಮುಖಪ್ಪ, ಟಿ.ವಿ.ರೇಣುಕಮ್ಮ ಮತ್ತಿತರರು ಹಾಜರಿದ್ದರು. ಆವರಗೆರೆ ಚಂದ್ರು ಸ್ವಾಗತಿಸಿದರು. ಎಂ.ಬಿ.ಶಾರದಮ್ಮ ವಂದಿಸಿದರು. ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಲೋಕಿಕೆರೆ ಅಂಜಿನಪ್ಪ, ಕೆ.ಭಾನಪ್ಪ ಜಾಗೃತ ಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ