ಕಿರುಕುಳ ನೀಡುತ್ತಿದ್ದ ಪತ್ನಿಯನ್ನು ಕೊಂದ ಪತಿ ಬಂಧನ.!

ಬೆಂಗಳೂರು

   ಎಲ್ಲದಕ್ಕೂ ಜಗಳ ಮಾಡುತ್ತಾ ನಿರ್ಲಕ್ಷಿಸಿ ಸತಾಯಿಸುತ್ತಿದ್ದ ಪತ್ನಿಯನ್ನು ಮಲಗಿದ ಮಗ್ಗುಲಲ್ಲೇ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಅಣ್ಣನೊಂದಿಗೆ ಸೇರಿ ಜಮೀನೊಂದರಲ್ಲಿ ಗುಂಡಿ ತೋಡಿ ಹೂತು ಹಾಕಿ ದ್ದ ಕೃತ್ಯ ನಡೆಸಿದ್ದ ಪತಿ ಕೊತ್ತನೂರು ಪೊಲೀಸರಿಗೆ ಅಣ್ಣನೊಂದಿಗೆ ಸಿಕ್ಕಿ ಬಿದ್ದಿದ್ದಾನೆ. ಕೊತ್ತನೂರಿನ ದುರ್ಗಾ ಪರಮೇಶ್ವರಿ ಲೇಔಟ್‍ನ ಪತ್ನಿ ಶಿಲ್ಪಾ (21)ಳನ್ನು ಕೊಲೆಗೈದು ಶವ ಸಾಗಿಸಿ ಕೊತ್ತನೂರು ಹೊರವಲಯದ ಜಮೀನೊಂದರಲ್ಲಿ ಹೂತು ಹಾಕಿದ್ದ ಪತಿ ಕಲ್ಲೇಶ್ (31),ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಆತನ ಅಣ್ಣ ಅಂಜನಪ್ಪ ಲೇಔಟ್‍ನ ಕೃಷ್ಣಪ್ಪ (33) ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕೃತ್ಯದ ವಿವರ

    ವಯಸ್ಸಿನಲ್ಲಿ 10 ವರ್ಷಗಳ ಕಿರಿಯವಳಾಗಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಮೂಲದ ಶಿಲ್ಪಾಳನ್ನು ಒಂದು ವರ್ಷ 3 ತಿಂಗಳ ಹಿಂದೆ ವಿವಾಹವಾಗಿದ್ದ. ಸ್ವಿಗ್ಗಿ ಡೆಲವರಿಬಾಯ್ ಕಲ್ಲೇಶ್, ದುರ್ಗಾಪರಮೇಶ್ವರಿ ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ.ವಿವಾಹವಾದ ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ, ವಯಸ್ಸಿನ ಅಂತರದಿಂದಾಗಿ ಕೆಲ ತಿಂಗಳ ಹಿಂದಿನಿಂದ ದಂಪತಿ ನಡುವೆ ಆಗಾಗ್ಗೆ ಜಗಳವುಂಟಾಗುತ್ತಿತ್ತು. ಆಗಾಗ್ಗೆ ಆಕೆ ತವರಿಗೆ ಹೋಗಿ ಬರುತ್ತಿದ್ದಳು. ಎಸ್‍ಎಸ್‍ಎಲ್‍ಸಿ ಮುಗಿಸಿದ್ದ ಶಿಲ್ಪಾ ತಾನು ಕೆಲಸಕ್ಕೆ ಹೋಗುವುದಾಗಿ ಪಟ್ಟು ಹಿಡಿದಿದ್ದಳು. ಆದರೆ, ಇದಕ್ಕೆ ಕಲ್ಲೇಶ್ ಒಪ್ಪಿರಲಿಲ್ಲ.

   ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿದ್ದು, ಒಂದು ತಿಂಗಳ ಹಿಂದೆ ಹೋಟೆಲ್‍ವೊಂದರಲ್ಲಿ ಶಿಲ್ಪಾ ಕೆಲಸಕ್ಕೆ ಸೇರಿಕೊಂಡಿದ್ದಳು. ನನ್ನ ಮಾತು ಕೇಳದೆ ಕೆಲಸಕ್ಕೆ ಹೋಗಿರುವೆ ಎಂದು ಜಗಳ ಮಾಡಿದರೂ ಆಕೆ ಅದನ್ನು ಕಿವಿಗೆ ಹಾಕಿಕೊಳ್ಳದೆ ಕೆಲಸಕ್ಕೆ ಹೋಗಿ ಒಂದು ತಿಂಗಳ ಸಂಬಳ ತೆಗೆದುಕೊಂಡು ಬಂದಿದ್ದಳು.

    ಸಂಬಳಕ್ಕಾಗಿ ಜಗಳ ಸಂಬಳದ ಹಣ ಕೊಡುವಂತೆ ಕಳೆದ ಆ. 12ರಂದು ರಾತ್ರಿ ಪತಿ ಕಲ್ಲೇಶ್ ಕೇಳಿದ್ದು, ಹಣ ಕೊಡಲು ಆಕೆ ಒಪ್ಪಲಿಲ್ಲ. ಇದೇ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಅಕ್ಕ-ಪಕ್ಕದವರು ಸುಮ್ಮನಿರಿಸಿದ್ದಾರೆ. ಮಧ್ಯರಾತ್ರಿ ಜಗಳದಿಂದ ಆಕ್ರೋಶಗೊಂಡಿದ್ದ ಕಲ್ಲೇಶ್, ಮಲಗಿದ್ದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

     ಮೃತದೇಹವನ್ನು ವಾಹನವೊಂದರಲ್ಲಿ ಹಾಕಿಕೊಂಡು ಅಂಜನಪ್ಪ ಲೇಔಟ್‍ನಲ್ಲಿದ್ದ ಅಣ್ಣ ಕೃಷ್ಣಪ್ಪನ ಸಹಾಯದೊಂದಿಗೆ ಮೃತದೇಹವನ್ನು ಕೊತ್ತನೂರು ಹೊರ ವಲಯದ ಜಮೀನೊಂದರಲ್ಲಿ ಗುಂಡಿ ತೋಡಿ ಹೂತು ಹಾಕಿ ಸುಮ್ಮನಾಗಿದ್ದ.ಶಿಲ್ಪಾ ಅವರ ತಾಯಿ ಪಾಶ್ರ್ವವಾಯು ಪೀಡಿತರಾಗಿದ್ದು, ಅಕ್ಕ ಹಾಗೂ ಚಿಕ್ಕಮ್ಮನಿಗೆ ಪತ್ನಿ ಶಿಲ್ಪಾ ಕಾಣೆಯಾಗಿರುವುದಾಗಿ ತಿಳಿಸಿದ್ದಾನೆ.

    ದೂರು ನೀಡಲು ಬಂದ ಪತಿಯೊಂದಿಗಿನ ಜಗಳದಿಂದ ಶಿಲ್ಪಾ ಮನೆ ಬಿಟ್ಟು ಹೋಗುವುದು ಸಾಮಾನ್ಯವಾಗಿದ್ದರಿಂದ ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಹೇಳಿದ್ದಾರೆ. ಅದನ್ನು ಕೇಳಿ ದೂರು ಕೂಡಲು ಕಲ್ಲೇಶ್ ಮುಂದಾದನಾದರೂ ಧೈರ್ಯ ಸಾಲದೆ ಸುಮ್ಮನಾಗಿದ್ದ. ಶಿಲ್ಪಾ ಕಾಣೆಯಾಗಿ 5 ದಿನ ಕಳೆದರೂ ಪತ್ತೆಯಿಲ್ಲದಿದ್ದರಿಂದ ಅಕ್ಕ ಹಾಗೂ ಚಿಕ್ಕಮ್ಮ ಕೂಡ್ಲಗಿಯಿಂದ ಕೊತ್ತನೂರಿಗೆ ಬಂದು ನೋಡಿದಾಗ ಶಿಲ್ಪಾ ಪತ್ತೆಯಿರಲಿಲ್ಲ. ಪತಿ ಕಲ್ಲೇಶ್‍ನನ್ನು ವಿಚಾರಿಸಿ ಆತ ಕಾಣೆಯಾಗಿರುವುದಾಗಿ ಮತ್ತೆ ಹೇಳಿದಾಗ ಎಲ್ಲರೂ ಸೇರಿ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ.

    ದೂರು ದಾಖಲಿಸಿಕೊಂಡ ಕೊತ್ತನೂರು ಪೊಲೀಸ್ ಇನ್ಸ್‍ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿಯವರು ಅನುಮಾನದ ಮೇಲೆ ಕಲ್ಲೇಶ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ. ಕೂಡಲೇ ಆತ ಹಾಗೂ ಕೃತ್ಯಕ್ಕೆ ಸಹಕರಿಸಿದ ಆತನ ಅಣ್ಣ ಕೃಷ್ಣಪ್ಪನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link