ಲಾಕರ್ ದೋಚಿ ಆಭರಣಗಳನ್ನು ಗುಂಡಿ ತೋಡಿ ಬಚ್ಚಿಟ್ಟಿದ್ದ ಕಳ್ಳನ ಬಂಧನ

ಬೆಂಗಳೂರು:

         ಮನೆ ಕೆಲಸಕ್ಕಿದ್ದ ಕೈಗಾರಿಕೋದ್ಯಮಿಯ ಮನೆಯಲ್ಲಿಯೇ ವಜ್ರ, ಚಿನ್ನ, ಬೆಳ್ಳಿ ಆಭರಣಗಳಿದ್ದ ಲಾಕರ್ ಅನ್ನು ದೋಚಿ ಪರಾರಿಯಾಗಿ ಆಭರನಗಳನ್ನು ಗುಂಡಿ ತೋಡಿ ಬಚ್ಚಿಟ್ಟಿದ್ದ ಬಿಹಾರ ಮೂಲದ ಖತರ್ನಾಕ್ ಕಳ್ಳನನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 90 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

       ಬಿಹಾರದ ಮಧುಬನಿ ಜಿಲ್ಲೆಯ ಪಿಪ್ರಾಕಮಲ್‍ನ ಅಖಿಲೇಶ್ ಕುಮಾರ್ ಮಾತೋ (21) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ವಜ್ರ, ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಅವುಗಳನ್ನು ಊರಿಗೆ ಕೊಂಡೊಯ್ದು ಮನೆಯ ಪಕ್ಕದ ಜಮೀನಿನಲ್ಲಿ ಗುಂಡಿ ತೋಡಿ ಹೂತುಹಾಕಿದ್ದ 2 ಕೆಜಿ ತೂಕದ ವಜ್ರ, ಚಿನ್ನ ಹಾಗೂ 1.5 ಕೆಜಿ ಬೆಳ್ಳಿ ಆಭರಣ, ಸ್ಟೀಲ್ ಹಾಗೂ ಗೋಲ್ಡ್ ಕೇಸ್ ವಾಚುಗಳು ಸೇರಿ, 90 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

         ಮಡಿವಾಳದ ಕೈಗಾರಿಕೋದ್ಯಮಿ ಸತ್ಯಪ್ರಕಾಶ್ ಅವರ ಮನೆಯಲ್ಲಿ ಹಿಂದೆ ಒಂದು ವರ್ಷ ಮನೆಗೆಲಸ ಮಾಡಿ ಬಿಟ್ಟು ಮುಂಬೈಗೆ ಹೋಗಿದ್ದ ಆರೋಪಿ ಅಖಿಲೇಶ್ ಕುಮಾರ್ ಅಲ್ಲಿ 6 ತಿಂಗಳು ಕೆಲಸ ಮಾಡಿ, ಮೂರು ತಿಂಗಳ ಹಿಂದಷ್ಟೇ ಸತ್ಯ ಪ್ರಕಾಶ್ ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕುಟುಂಬದವರಲ್ಲಿ ನಂಬಿಕೆ

       ಸತ್ಯ ಪ್ರಕಾಶ್ ಅವರ ಕುಟುಂಬದವರ ನಂಬಿಕೆ ಗಳಿಸಿದ್ದ ಆರೋಪಿಯು, ಅಲ್ಲೇ ಮನೆಕೆಲಸದವರ ಶೆಡ್‍ನಲ್ಲಿ ವಾಸವಾಗಿದ್ದ. ಕಳೆದ ಅಕ್ಟೋಬರ್ 16 ರಂದು ರಾತ್ರಿ ಮನೆಯವರೆಲ್ಲರೂ ಹೊರಹೋಗಿದ್ದಾಗ ಸಂಚು ರೂಪಿಸಿದ್ದ ಆರೋಪಿಯು ಚಿನ್ನ, ವಜ್ರದ ಆಭರಣಗಳನ್ನು ಕಳವು ಮಾಡಲು ಮುಂದಾಗಿದ್ದ. ಆದರೆ ಅವುಗಳೆಲ್ಲವನ್ನೂ ಭದ್ರವಾದ ಲಾಕರ್‍ನಲ್ಲಿ ಇಡಲಾಗಿತ್ತು.

      ಲಾಕರ್ ಒಡೆಯಲು ವಿಫಲಯತ್ನ ನಡೆಸಿದ ಆರೋಪಿಯು ಲಾಕರ್‍ನನ್ನೇ ಬಾಕ್ಸ್‍ನಲ್ಲಿಟ್ಟು ಪ್ಯಾಕ್ ಮಾಡಿಕೊಂಡು ಇಂದಿರಾನಗರಕ್ಕೆ ಪರಾರಿಯಾಗಿ ಅಲ್ಲಿ ಲಾಕರ್ ಅನ್ನು ಒಡೆದು ಆಭರಣಗಳನ್ನು ಚೀಲದಲ್ಲಿ ಕಟ್ಟಿಕೊಂಡು ಬಿಹಾರಕ್ಕೆ ಪರಾರಿಯಾಗಿದ್ದ.

      ಸತ್ಯ ಪ್ರಕಾಶ್ ಅವರು ಅಕ್ಟೋಬರ್ 17 ರಂದು ಮನೆಗೆ ವಾಪಸಾಗಿ ಬಂದು ನೋಡಿದಾಗ ಆರೋಪಿ ಅಖಿಲೇಶ್ ನಾಪತ್ತೆಯಾಗಿದ್ದು, ಲಾಕರ್ ಕೂಡ ಕಂಡುಬರಲಿಲ್ಲ. ಕೂಡಲೇ ಅವರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

1ಲಕ್ಷ ಬಹುಮಾನ

       ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ಅವರು ಆರೋಪಿಯ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು. ತಂಡವು ಕಾರ್ಯಾಚರಣೆ ನಡೆಸಿ ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕಳವು ಮಾಡಿದ ಆಭರಣಗಳನ್ನು ಮನೆಯ ಹಿಂಭಾಗದ ಜಮೀನಿನಲ್ಲಿ ಗುಂಡಿತೋಡಿ ಹೂತಿರುವುದಾಗಿ ಬಾಯ್ಬಿಟ್ಟಿದ್ದಾನೆ.

      ಗುಂಡಿತೆಗೆದು ಅದರಲ್ಲಿದ್ದ 2 ಕೆಜಿ ತೂಕದ ವಜ್ರ, ಚಿನ್ನ ಹಾಗೂ 1.5 ಕೆಜಿ ಬೆಳ್ಳಿ ಆಭರಣ, ಸ್ಟೀಲ್ ಹಾಗೂ ಗೋಲ್ಡ್ ಕೇಸ್ ವಾಚುಗಳು ಸೇರಿ, 90 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಶಸ್ವಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ ಪೆÇಲೀಸ್ ತಂಡಕ್ಕೆ 1 ಲಕ್ಷ ರೂ. ನಗದು ಬಹುಮಾನವನ್ನು ಸುನಿಲ್ ಕುಮಾರ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಡಾ. ಬೋರಲಿಂಗಯ್ಯ ಅವರಿದ್ದರು.

ಎಚ್ಚರಿಕೆ ಅಗತ್ಯ

       ಕೈಗಾರಿಕೋದ್ಯಮಿಗಳು ಶ್ರೀಮಂತರು,ಉದ್ಯಮಿಗಳು ಮನೆಕೆಲಸಕ್ಕೆ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ವಿಳಾಸ, ಕುಟುಂಬದವರ ಮಾಹಿತಿ, ಪೂರ್ವಾಪರಗಳು ಹಾಗೂ ಕೆಲಸಗಾರರನ್ನು ಒದಗಿಸುವ ಏಜೆನ್ಸಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ಸಂಬಂಧ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದಲೂ ಮಾಹಿತಿ ಪಡೆದುಕೊಂಡು ಕೆಲಸದವರ ಮೇಲೆ ಹೆಚ್ಚು ನಿಗಾವಹಿಸಬೇಕು ಇಲ್ಲದಿದ್ದರೆ, ಕಳ್ಳತನ, ಇನ್ನಿತರ ಅಪರಾಧ ಕೃತ್ಯಗಳಿಗೆ ಕಾರಣವಾಗಬಹುದು.
– ಸುನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 

Recent Articles

spot_img

Related Stories

Share via
Copy link