ಹುಳಿಯಾರು
ಹುಳಿಯಾರು ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ಬುಧವಾರ ಪಪಂನಿಂದ ತೆರವುಗೊಳಿಸಿದ್ದರಿಂದ ಗುರುವಾರ ಹುಳಿಯಾರಿಗೆ ಬಂದಿಳಿದ ಪ್ರಯಾಣಿಕರು ಹೂವು, ಹಣ್ಣು, ಚಹ, ಎಳನೀರು ಸಿಗದೆ ಪರದಾಡುವ ಸನ್ನಿವೇಶ ನಿರ್ಮಾಣವಾಗಿತ್ತು.
ಹುಳಿಯಾರು ಬಸ್ ನಿಲ್ದಾಣದಲ್ಲಿದ್ದ ಗೂಡಂಗಡಿಗಳಲ್ಲಿ ಬಹುಪಾಲು ಹೂವಿನ ಅಂಗಡಿಗಳು, ಹಣ್ಣಿನ ಅಂಗಡಿಗಳು ಹಾಗೂ ಚಹಾ ಅಂಗಡಿಗಳಾಗಿದ್ದವು.
ಅದರಲ್ಲೂ ಹೂವಿನ ಹಾಗೂ ಎಳನೀರಿನ ವ್ಯಾಪಾರವಂತೂ ಬಸ್ ನಿಲ್ದಾಣ ಬಿಟ್ಟರೆ ಪಟ್ಟಣದ ಬೇರೆಲ್ಲೂ ನಡೆಯುತ್ತಿರಲಿಲ್ಲ. ಹಾಗಾಗಿ ಹುಳಿಯಾರು ನಾಗರೀಕರು ಸಹ ಹೂವು ಹಾಗೂ ಎಳನೀರಿಗೆ ಪರದಾಡಿದ್ದು ವಿಶೇಷವಾಗಿತ್ತು.ಹುಳಿಯಾರು ಪಟ್ಟಣವು ಮೂರ್ನಲ್ಕು ಜಿಲ್ಲೆಗಳ ನೂರಾರು ಗಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸ್ಥಳ. ಹಾಗಾಗಿ ನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಳಿದು ತಮ್ಮತಮ್ಮ ಊರುಗಳಿಗೆ ತೆರಳುತ್ತಾರೆ. ಬಂದಿಳಿಯುವವರು ದೇವಸ್ಥಾನಕ್ಕೆ, ನೆಂಟರಿಷ್ಟರ ಮನೆಗೆ ಹೂವು, ಹಣ್ಣು ಕೊಂಡೊಯ್ಯುವುದು ರೂಢಿ ಮಾಡಿಕೊಂಡಿದ್ದರು. ಕೆಲವರಂತೂ ಬಸ್ ಕಾಯುವ ವೇಳೆ ಚಹ ಕುಡಿಯುವುದು, ತಿಂಡಿ, ಊಟ ಸಹ ಮಾಡುತ್ತಿದ್ದರು.
ಆದರೆ ಇವರಿಗೆ ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳ ತೆರವು ವಿಚಾರ ತಿಳಿಯದಾದ್ದರಿಂದ ಬಂದಿಳಿದ ತಕ್ಷಣ ಗೂಡಂಗಡಿಗಳಿಲ್ಲದ ಬಸ್ ನಿಲ್ದಾಣ ಕಂಡು ಅರೆಕ್ಷಣ ಅವಾಕ್ ಆಗುತ್ತಿದ್ದರು. ಅಚ್ಚರಿಯಿಂದ ಗೂಡಂಗಡಿ ತೆರವು ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದು. ಹೂವು, ಹಣ್ಣು, ಚಹ, ಎಳನೀರು ಸಿಗದಾದ್ದರಿಂದ ಬೇರೆಲ್ಲಿ ಸಿಗುತ್ತದೆಂದು ಅವರಿವರನ್ನು ಕೇಳಿ ಪರದಾಡುತ್ತಿದ್ದರು. ಗುಟುಕ, ಬೀಡಿ, ಸಿಗರೇಟು ಪ್ರಿಯರು ಸಹ ಇವಾವುವೂ ಸಿಗದೆ ನೊಂದುಕೊಂಡರು.
ಒಟ್ಟಾರೆ ಹುಳಿಯಾರು ಬಸ್ ನಿಲ್ದಾಣದಲ್ಲಿನ ನೂರಾರು ಗೂಡಂಗಡಿಗಳನ್ನು ತೆರವು ಮಾಡಿದ ನಂತರದ ಇಲ್ಲಿನ ಚಿತ್ರಣ ಪ್ರಕೃತಿ ವಿಕೋಪದಿಂದ ಕಟ್ಟಡಗಳು ನೆಲಸಮವಾಗಿ ಅಲ್ಲಲ್ಲಿ ಬಿದ್ದಿರುವ ಕಟ್ಟಡದ ಅವಶೇಷಗಳನ್ನು ನೋಡಿದಂತ್ತಾಗಿತ್ತು. ಹಾಗಾಗಿ ಪ್ರಯಾಣಿಕರು ಹುಳಿಯಾರಿಗೆ ಬಂದಿಳಿದ ತಕ್ಷಣ ಅಚ್ಚರಿಗೊಳ್ಳುತ್ತಿದ್ದರು. ಅಗತ್ಯ ವಸ್ತುಗಳು ಸಿಗದೆ ಪರದಾಡುತ್ತಿದ್ದರು. ಇದರ ನಡುವೆಯೂ ಬಸ್ ಶೆಲ್ಟರ್ ತುಂಬ ಗೂಡಂಗಡಿಗಳಿದ್ದಾಗ ಬಿಸಿಲಿನಲ್ಲಿ ನಿಂತು ಬಸ್‍ಗಳಿಗೆ ಕಾಯಬೇಕಿತ್ತು. ಈಗ ಶೆಲ್ಟರ್ ಕೆಳಗೆ ಆರಾಮವಾಗಿ ಕುಳಿತು ಬಸ್ ಕಾಯಬಹುದೆಂದು ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
