ಹುಳಿಯಾರಿನಲ್ಲಿ ಅವರೆಕಾಯಿ ಖರೀದಿ ಭರಾಟೆ ಜೋರು

ಹುಳಿಯಾರು

    ಹುಳಿಯಾರು ಪಟ್ಟಣದಲ್ಲಿ ಅವರೆಕಾಯಿ ವ್ಯಾಪಾರ ಆರಂಭವಾಗಿದ್ದು ಬೆಲೆ ಗಗನಕ್ಕೇರಿದ್ದರೂ ಆರಂಭಿಕ ಸರಕನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಿಂದ ಅವರೆ ಕಾಯಿ ಬೆಳೆಗಾರರಿಗೆ ಸಂತೋಷವಾಗಿದೆ.

    ಹುಳಿಯಾರಿನ ಡೈಲಿ ಮಾರುಕಟ್ಟೆ ಹಾಗೂ ವಾರದ ಸಂತೆಯಲ್ಲಿ ಇಷ್ಟು ದಿನ ಹೊರಗಡೆಯಿಂದ ಅವರೆಕಾಯಿ ತಂದು ಮಾರುತ್ತಿದ್ದರು. ಕಾಯಿ ಗುಣಮಟ್ಟ ಹಾಗೂ ಸೊಗಡು ತೃಪ್ತಿಕರವಾಗಿರದಿದ್ದರೂ ಅವರೆಕಾಯಿ ಪ್ರಿಯರು ಖರೀದಿಸಿ ಕೊಂಡೊಯ್ಯುತ್ತಿದ್ದರು.

    ಈಗ ಇಲ್ಲಿನ ಕರವೆ ಸರ್ಕಲ್‍ನಲ್ಲಿ ಸ್ಥಳೀಯ ರೈತರ ಸೊಗಡು ಅವರೆಕಾಯಿ ಮಾರಾಟಕ್ಕೆ ಬಂದಿದ್ದು, ಅವರೆಕಾಯಿಯ ಸೊಗಡಿನ ಘಮಲು ದಾರಿ ಹೋಕರನ್ನು ಸೆಳೆಯುತ್ತಿದೆ. ನಿತ್ಯ ಇಪ್ಪತ್ತಕ್ಕೂ ಹೆಚ್ಚು ರೈತರು ನೇರವಾಗಿ ಬಂದು ಮಾರಾಟ ಮಾಡುತ್ತಿದ್ದು ಒಬ್ಬೊಬ್ಬರು ಐವತ್ತರವತ್ತು ಕೆ.ಜಿ. ಮಾರಿ ಜೋಬು ತುಂಬಿಸಿಕೊಳ್ಳುತ್ತಿದ್ದಾರೆ.

    ಈ ಬಾರಿ ಹದವಾಗಿ ಮಳೆಯಾದ ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಉತ್ತಮ ಇಳುವರಿ ಬಂದಿದೆ. ಇದಿನ್ನೂ ಆರಂಭವಾಗಿದ್ದು, ಸಹಜವಾಗಿಯೆ ಬೆಲೆ ಹೆಚ್ಚಿದ್ದು ಕೆ.ಜಿ.ಯೊಂದಕ್ಕೆ 50 ರಂತೆ ಮಾರುತ್ತಿದ್ದಾರೆ. ಕಾಯಿ ಆವಕ ಹೆಚ್ಚಿದಂತೆ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.

    ತಾಲ್ಲೂಕಿನಲ್ಲಿ ಅವರೆಬೆಳೆ ಹೂವು, ಕಾಯಿ ಹಂತದಲ್ಲಿದೆ. ಮೊದಲ ಬಿತ್ತನೆಯ ಕಾಯಿ ಈಗ ಮಾರುಕಟ್ಟೆಗೆ ಬರುತ್ತಿದೆ. ಪೂರ್ಣ ಪ್ರಮಾಣದಲ್ಲಿ ಬರಬೇಕಾದರೆ ಇನ್ನೂ ಎರಡು ವಾರ ಕಳೆಯಬೇಕಾಗಿದೆ. ಅಲ್ಲದೆ ಭೂಮಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಇನ್ನೂ ಮೂರ್ನಾಲ್ಕು ತಿಂಗಳು ತಾಜಾ ಅವರೆಕಾಯಿ ಸಿಗುವ ಸಾಧ್ಯತೆ ಇದೆ.

    ಒಟ್ಟಾರೆ ಇಲ್ಲಿನ ಕರವೆ ಸರ್ಕಲ್ ನಿತ್ಯ ಅವರೆಕಾಯಿ ಸುಗ್ಗಿ ನಡೆಯುತ್ತಿದೆ. ಬೆಳಗ್ಗೆ 8 ರಿಂದ ಸಂಜೆ 6 ರತನಕ ಅವರೆಕಾಯಿ ಮಾರಾಟ ಮತ್ತು ಖರೀದಿ ಭರಾಜೆ ಜೋರಾಗಿದೆ. ರೈತರು ಎಷ್ಟೇ ಮೂಟೆ ಅವರೆಕಾಯಿ ತಂದರೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link