ತುಮಕೂರು
ನಗರದ ಉಡುಪಿ ಡಿಲಕ್ಸ್ ಹೋಟೆಲ್ ಬಳಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಜೆಡಿಎಸ್‍ನ ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿಜೆಪಿಯ ಸರೇಶ್‍ಗೌಡರ ಬೆಂಬಲಿಗರ ನಡುವೆ ಗುರುವಾರ ಮಧ್ಯಾಹ್ನ ಹೈಡ್ರಾಮ ನಡೆಯಿತು.
ಮಾಜಿ ಶಾಸಕ ಸುರೇಶ್‍ಗೌಡರು ಮಧ್ಯಾಹ್ನ ಒಂದು ಗಂಟೆಗೆ ಈ ಹೊಟೆಲ್‍ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ತಮ್ಮ ಬೆಂಬಲಿಗರಿಗಾಗಿ ಹೋಟೆಲ್‍ನಲ್ಲಿ ನೂರು ಊಟ ಬುಕ್ ಮಾಡಿದ್ದರು. ಇದೇ ಹೋಟೆಲ್‍ನಲ್ಲಿ ಸರಿ ಸುಮಾರು ಇದೇ ವೇಳೆಗೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮುಖಂಡ, ಶಾಸಕ ಗೌರಿಶಂಕರ್ ಆಪ್ತ ಸಹಾಯಕ ಬೈರೇಗೌಡರ ಹುಟ್ಟು ಹಬ್ಬ ಆಚರಣೆಗೆಂದು ಆ ಪಕ್ಷದ ಕಾರ್ಯಕರ್ತರು ಬಂದು ಜಮಾಯಿಸಿದ್ದರು, ಅವರೂ ಹೋಟೆಲ್‍ನಲ್ಲಿ ಊಟ ಕಾಯ್ದಿರಿಸಿದರು.
ಎರಡೂ ಪಕ್ಷಗಳ ಕಾರ್ಯಕರ್ತರು ಒಂದೇ ಕಡೆ ಸೇರಿ, ಗಲಾಟೆ ಆಗಬಹುದು ಎನ್ನುವ ಕಾರಣಕ್ಕೆ ಹೋಟೆಲ್‍ನವರು ಬಾಗಿಲು ಹಾಕಿ ಸರ್ವೀಸ್ ಇಲ್ಲ ಎಂದರು. ಆಗ ಕಾರ್ಯಕರ್ತರು ಗಲಾಟೆ ಮಾಡಿ ಬಾಗಿಲು ತೆಗೆಸಿದರು. ಅಷ್ಟೊತ್ತಿಗಾಗಲೇ ಪೊಲೀಸರು ಹೋಟೆಲ್ ಬಳಿ ಬಂದು ಪರಿಸ್ಥಿತಿ ನಿಯಂತ್ರಿಸಿದರು.
ಸುರೇಶ್ ಗೌಡರು ಹೊಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಅತ್ತ ಜೆಡಿಎಸ್ ಕಾರ್ಯಕರ್ತರು ಹುಟ್ಟು ಹಬ್ಬ ಆಚರಿಸಿಕೊಂಡರು. ಸುರೇಶ್ ಗೌಡರು ಕುರುಬ ಸಮಾಜವನ್ನು ನಿಂದನೆ ಮಾಡಿದ್ದನ್ನು ಪ್ರಶ್ನಿಸಿ ಅವರನ್ನು ತರಾಟೆ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಕಾಯುತ್ತಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಪೊಲೀಸರು ಜಾಗೃತರಾದರು. ಆ ವೇಳೆಗಾಗಲೇ ಹೋಟೆಲ್ ಮುಂದೆ ಪೊಲೀಸ್ ವ್ಯಾನ್‍ನೊಂದಿಗೆ ಡಿವೈಎಸ್ಪಿ, ಸರ್ಕಲ್ ಇನ್ಸ್‍ಪೆಕ್ಟರ್‍ಗಳು, ಸಬ್‍ಇನ್ಸ್‍ಪೆಕ್ಟರ್‍ಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಯಾವುದೇ ಗಲಾಟೆಗೆ ಅವಕಾಶವಾಗದಂತೆ ಪೊಲೀಸರು ನೋಡಿಕೊಂಡರು. ಹೋಟೆಲ್ ಮುಂದೆ ಅಷ್ಟೊಂದು ಪೊಲೀಸರಿದ್ದು ಎರಡು ಪಕ್ಷದ ಕಾರ್ಯಕರ್ತರ ನಡುವಿನ ಹೈಡ್ರಾಮ ಸಾರ್ವಜನಿಕರಿಗೆ ಮನರಂಜನೆಯಾಗಿತ್ತು.
ಇತ್ತೀಚೆಗಷ್ಟೇ ನಗರದ ಹೊಯ್ಸಳ ಹೋಟೆಲ್‍ನಲ್ಲಿ ಸುರೇಶ್ ಗೌಡರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಜೆಡಿಎಸ್ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದರು. ಗುರುವಾರ ಗಲಾಟೆ ನಡೆಯದಿದ್ದರೂ ಅಂತಹುದೇ ಆತಂಕಕಾರಿ ವಾತಾವರಣ ಉಂಟಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಬಂದು ಗಲಾಟೆ ಮಾಡುವುದು, ಪೊಲೀಸ್ ಕಾವಲಿನಲ್ಲಿ ಪತ್ರಿಕಾಗೋಷ್ಠಿ ನಡೆಯುವಂತಹ ಕಿರಿಕಿರಿ ವಾತಾವರಣ ನಿರ್ಮಾಣ ಮಾಡುವ ಕಾರ್ಯಕರ್ತರ ನಡವಳಿಕೆಗೆ ಪತ್ರಕರ್ತರೂ ಬೇಸರಗೊಂಡರು. ಇಂತಹ ವರ್ತನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲು ಆಯಾ ಪಕ್ಷದ ಮುಖಂಡರಿಗೆ ಪತ್ರ ಬರೆಯುವಂತೆ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಪತ್ರಕರ್ತರು ಮನವಿ ಮಾಡಿದರು.