ಕೊರಟಗೆರೆ
ನಾನು ಕೂಡ ರೈತನೆ. ನನ್ನದೂ ಕೃಷಿ ಜಮೀನಿದೆ.. ಕೃಷಿ ಚಟುವಟಿಕೆ ಬಗ್ಗೆ ನನಗೆ ಸಾಕಷ್ಟು ಗೊತ್ತಿದೆ.. ಸರಕಾರದ ಅನುದಾನ ಖರ್ಚು ಮಾಡಿ ಸಭೆಗೆ ಅಂಕಿಅಂಶ ನೀಡುವುದರ ಬದಲಾಗಿ ರೈತರ ಅಭಿವೃದ್ದಿಗೆ ವಿಶೇಷ ಯೋಜನೆ ರೂಪಿಸುವ ಕೆಲಸ ಅಧಿಕಾರಿ ವರ್ಗ ಮಾಡಬೇಕಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಪ್ರಗತಿ ವರದಿಯ ಪರಿಶೀಲನೆ ವೇಳೆ ಸರಕಾರಿ ಅಧಿಕಾರಿಗಳನ್ನು ಕುರಿತು ಮಾತನಾಡಿದರು.
ಸಾಮಾಜಿಕ ವಲಯ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ಕೃಷಿ, ಪಶು, ರೇಷ್ಮೆ ಇಲಾಖೆಯಿಂದ ರೈತರ ಆರ್ಥಿಕ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನೂರಾರು ಯೋಜನೆಗಳಿವೆ. ಸಾಮಾನ್ಯ ಸಭೆಯಲ್ಲಿ ಅನುದಾನ ಖರ್ಚು ಮಾಡಿರುವ ಅಂಕಿಅಂಶ ನೀಡುವುದರ ಬದಲಾಗಿ ರೈತರಿಗೆ ಅವಶ್ಯಕತೆ ಇರುವ ಬೆಳೆಗಳಿಗೆ ಅನುಗುಣವಾಗಿ ಯೋಜನೆ ರೂಪಿಸುವ ಕೆಲಸ ಆಗಬೇಕಾಗಿದೆ ಎಂದು ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆಯು ರೈತರ ಅವಶ್ಯಕತೆಗೆ ಅನುಗುಣವಾಗಿ ಯೋಜನೆ ರೂಪಿಸದೆ ನಿರ್ಲಕ್ಷ್ಯ ವಹಿಸಿದೆ. ಮತ್ತೆ ಸಭೆಗೆ ಬರುವಾಗ ವಿಶೇಷ ಯೋಜನೆಯ ರೂಪುರೇಷೆಯ ಜೊತೆ ಬರುವಂತೆ ಸೂಚಿಸಿದ ಮಾಜಿ ಡಿಸಿಎಂ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶೇಷ ಆರೋಗ್ಯ ಉಡುಪು ನೀಡುವುದರ ಜೊತೆ ಭದ್ರತೆ ಒದಗಿಸಬೇಕು ಎಂದು ಸಿಡಿಪಿಓ ಅಂಬಿಕಾಗೆ ಆದೇಶ ಮಾಡಿದರು.
ಕೊರೋನಾ ರೋಗಕ್ಕೆ ಯಾವುದೇ ರೀತಿಯ ಔಷಧಿಯು ಲಭ್ಯವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಮತ್ತು ಮಾಸ್ಕ್ ಧರಿಸಿಕೊಂಡು ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ದ್ವಿಚಕ್ರ ವಾಹನಗಳಿಗೆ ಕಡಿವಾಣ ಹಾಕಿ, ಖಾಸಗಿ ಅಂಗಡಿ ಮಾಲೀಕರಿಗೆ ಸಾಮಾಜಿಕ ಅಂತರದ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನು ಆರೋಗ್ಯ ಮತ್ತು ಪಪಂ ಅಧಿಕಾರಿವರ್ಗ ನೀಡಬೇಕಾಗಿದೆ ಎಂದು ಹೇಳಿದರು.
ಸಾಮಾನ್ಯ ಸಭೆಯಲ್ಲಿ ತಾಪಂ ಅಧ್ಯಕ್ಷೆ ನಾಜೀಮಾಬಿ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯರಾದ ಕೆಂಪರಾಮಯ್ಯ, ಕೆಂಪಣ್ಣ, ಜ್ಯೋತಿ, ಸುಮ, ಶ್ಯಾಮಲ, ಸರಸಮ್ಮ, ಚಿಕ್ಕನರಸಯ್ಯ, ತಹಸೀಲ್ದಾರ್ ಗೋವಿಂದರಾಜು, ಇಓ ಶಿವಪ್ರಕಾಶ್, ಕೃಷಿ ಇಲಾಖೆಯ ನಾಗರಾಜು, ಅರಣ್ಯ ಇಲಾಖೆ ಸತೀಶಚಂದ್ರ, ತೋಟಗಾರಿಕೆ ಪುಪ್ಪಲತಾ, ಪಪಂ ಮುಖ್ಯಾಧಿಕಾರಿ ಶ್ರೀನಿವಾಸ್, ಬೆಸ್ಕಾಂ ಎಇಇ ಮಲ್ಲಣ್ಣ, ಸಿಪಿಐ ನದಾಫ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ