ಚಿಕ್ಕನಾಯಕನಹಳ್ಳಿ :
ನಾನೊಬ್ಬ ಸಹಕಾರಿ, ರಾಜಕಾರಣಿಯಲ್ಲ, ಯಾವ ಪಕ್ಷದಲ್ಲಿದ್ದರೂ ಸಮಾಜಮುಖಿಯಾಗಿರುತ್ತೇನೆ, ಜನರ ಸೇವೆ ಮಾಡಬೇಕೆಂಬುದೇ ನನ್ನ ಗುರಿ ಹೊರತು, ರಾಜಕಾರಣಕ್ಕೆ ಬರಬೇಕು, ಅಧಿಕಾರದಿಂದ ಹಣ ಲೂಟಿ ಮಾಡಬೇಕೆಂಬ ಉದ್ದೇಶ ಹೊಂದಿಲ್ಲ ಎಂದು ರಾಜ್ಯ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ತಾಲ್ಲೂಕಿನ ಕಂದಿಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಆಡಳಿತ ಮಂಡಳಿ ಕಛೇರಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ನವೆಂಬರ್ ತಿಂಗಳಿನಲ್ಲಿ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ರೈತರಿಗೆ ಸಾಲ ನೀಡಬೇಕು ಎಂದು ತೀರ್ಮಾನಿಸಲಾಗಿದೆ, ಇದುವರೆಗೆ ಜಿಲ್ಲಾ ಸಹಕಾರ ಸಂಘದಿಂದ ಯಾವ ರೈತರು ಸಾಲ ಪಡೆದಿಲ್ಲವೂ ಅಂತಹವರಿಗೆ ಮುಂದಿನ ತಿಂಗಳು ಸಾಲ ನೀಡುತ್ತೇವೆ, ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆಯದೇ ಇರುವ ರೈತರಿಗೆ ಸಾಲ ನೀಡಲು ತೀರ್ಮಾನಿಸಲಾಗಿದೆ, ರೈತರಿಗೆ ಸರ್ಕಾರ ಅನೇಕ ಸಾಲ ಸೌಲಭ್ಯ ನೀಡಿದ್ದು ಸಾಲ ಪಡೆದ ರೈತರು ಯಾವ ಉದ್ದೇಶಕ್ಕೆ
ತೆಗೆದುಕೊಂಡಿದ್ದರೋ ಆದಕ್ಕೆ ಸರಿಯಾಗಿ ಉಪಯೋಗಿಸಿ ಸಾಲವನ್ನು ಮರು ಪಾವತಿ ಮಾಡಿ, ಇದುವರೆಗೆ ತಾಲ್ಲೂಕಿನ ಹೊನ್ನೊಂದು ಸಾವಿರಕ್ಕೂ ಹೆಚ್ಚು ರೈತರಿಗೆ 33 ಕೋಟಿ 20 ಲಕ್ಷರೂ ಸಾಲಮನ್ನಾ ಮಾಡಲಾಗಿದೆ, ಪತ್ತಿನ ಸಹಕಾರ ಸಂಘದ ಮೂಲಕ ನೀಡುವ ರೈತರ ಸಾಲ ಸೌಲಭ್ಯವನ್ನು ಯಾವ ಮಾಧ್ಯಮಗಳು ಪ್ರಚಾರ ಮಾಡುತ್ತಿಲ್ಲ ಎಂದು ವಿಷಾಧಿಸಿದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ಶೋಷಣೆ ಹಾಗೂ ತುಳಿತಕ್ಕೆ ಒಳಗಾಗಿರುವವರಿಗೆ ಹೆಚ್ಚು ಸಹಕಾರಿಯಾಗಿ, ಈಗಾಗಲೇ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಿದ್ದು ಸಾಕಷ್ಟು ಜನರನ್ನು ಬ್ಯಾಂಕ್‍ನ ಯೋಜನೆಯು ತಲುಪುತ್ತಿದೆ ಎಂದರಲ್ಲದೆ ಯೋಜನೆಯನ್ನು ಸಿದ್ದರಾಮಯ್ಯನವರು ಜಾರಿಗೆ ತಂದು ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರುಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶೂ ಭಾಗ್ಯದ ಬಗ್ಗೆ ಅವರಿಗೆ ಸಲಹೆ ನೀಡಿದ್ದೆ ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸಹಕಾರಿ ಕ್ಷೇತ್ರಗಳಲ್ಲಿ ರಾಜಕೀಯವಿರಬಾರದು, ದೇಶದ ಎಲ್ಲ ರಾಜ್ಯಗಳಲ್ಲೂ ರೈತರು ಸಮಸ್ಯೆಯಲ್ಲಿ ಇದ್ದಾರೆ, ಸರಿಯಾಗಿ ಮಳೆ ಬೆಳೆ ಇಲ್ಲದೆ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡಲಾಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದ ಅವರು, ಅನ್ನ ಕೊಡುವ ರೈತನ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲ, ಸರಕಾರಗಳು ರೈತರ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 8500 ಸಾವಿರ ಕೋಟಿ ಸಾಲಮ್ನನಾ ಮಾಡಿದ್ದರೂ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ 75 ಸಾವಿರ ಕೋಟಿ ಸಾಲ ಮನ್ನಾ ಮಾಡಿದರೂ ಅದೇ ರೀತಿ ಈಗಿನ ಬಿ.ಜೆ.ಪಿ ಪ್ರಧಾನಮಂತ್ರಿ ಮೋದಿಯವರು ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರ ಬ್ಯಾಂಕ್ ರೈತರ 35 ಕೋಟಿ ರೂ ಸಾಲಮನ್ನಾ ಮಾಡಲು ಕೆ.ಎನ್.ರಾಜಣ್ಣ ಶ್ರಮವೇ ಹೆಚ್ಚು, ರೈತರು ಫ್ಯಾಷನ್‍ಗೆ ಮರುಳಾಗದೇ ತಮ್ಮ ಅಭಿವೃದ್ದಿಯ ಕಡೆ ಗಮನಹರಿಸಿ, ಎಂದ ಅವರು, ರೈತರು ತಮ್ಮ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿ, ವಿದ್ಯುತ್ ಸಂಪರ್ಕ ನೀಡುವಂತೆ ಬೆಸ್ಕಾಂಗೆ ಕಛೇರಿಗೆ ಹೋದರೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಜಿಲ್ಲಾಧಿಕಾರಿಗಳ ಬಳಿ ಹೋಗಬೇಕು ಎನ್ನುತ್ತಾರೆ ಇದು ದುರದೃಷ್ಟಕರ, ರೈತರು ಬೆಳೆದ ತೆಂಗು, ಅಡಿಕೆ ಬೆಳೆಗೆ ಪರ್ಯಾಯವಾಗಿ ಉಪಕಸುಬು ಬೆಳೆಯುತ್ತಿದ್ದು ರಾಜ್ಯದಲ್ಲಿ ಹೈನುಗಾರಿಕೆಯಿಂದ 12 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ ಎಂದರು.
ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿದ್ದರೆ ಸಕ್ರಮ ಮಾಡಿಕೊಳ್ಳಲು ನಮೂನೆ 7ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ 2017 ಮಾರ್ಚ್‍ನಲ್ಲಿ ಆದೇಶ ಹೊರಡಿಸಿದೆ ಆದರೆ ಅಧಿಕಾರಿಗಳು ಮಾತ್ರ ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಹೇಳಿದರು. ಬಗರ್‍ಹುಕುಂ ಸಾಗುವಳಿದಾರರು 2019ರ ಮಾರ್ಚ್‍ವರೆಗೆ ಅರ್ಜಿ ಹಾಕಲು ಅವಕಾಶವಿದೆ ಎಂದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ಸಹಕಾರ ಸಂಘಗಳ ಮೂಲಕವೇ ರೈತರು ಪ್ರಗತಿ ಕಾಣಲು ಸಾಧ್ಯ ಎಂದು ನೆಹರು, ಗಾಂಧೀ ಹೇಳಿದ್ದರು ಅದು ಸತ್ಯವಾಗಿದೆ, ಸಹಕಾರಿ ಸಂಘಗಳ ಮೂಲಕ ಸಾಲ ಪಡೆದು ಮರಣವನ್ನಪ್ಪಿದ ಕುಟುಂಬದ ರೈತರಿಗೆ ನೆರವಾಗಲು 1ಲಕ್ಷ ರೂವರೆಗಿನ ಸಾಲ ಮನ್ನಾ ಘೋಷಿಸಿದ್ದಾರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ, ತುಳಿತಕ್ಕೊಳಗಾದವರನ್ನು ಗುರುತಿಸಿ ಸಾಲ ನೀಡಿ ಅವರ ಆರ್ಥಿಕ ಅಭ್ಯುದಯಕ್ಕೆ ಸಹಕಾರಿಯಾಗಿದ್ದಾರೆ ಎಂದ ಅವರು, ಗೋಶಾಲೆಗೆ ಬರುವ ರೈತರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಊಟ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದ ಅವರು, ಕೆ.ಎನ್.ರಾಜಣ್ಣ ಹಾಗೂ ಮಾಧುಸ್ವಾಮಿ ಇಬ್ಬರ ಸಹಕಾರದಿಂದಲೇ ತಾಲ್ಲೂಕಿನಲ್ಲಿ 33ಕೋಟಿಗೂ ಹೆಚ್ಚು ರೈತರ ಸಾಲ ಮನ್ನವಾಗಿ ಅನೇಕ ಜನರಿಗೆ ಅನುಕೂಲವಾಗಿದೆ ಎಂದರಲ್ಲದೆ ಶಾಸಕ ಜೆ.ಸಿ.ಮಾಧುಸ್ವಾಮಿಯವರು ರೈತರಿಗೆ ಹೇಮಾವತಿ ನಾಲಾ ಯೋಜನೆಯಲ್ಲಿ ಬರಬೇಕಾಗಿದ್ದ ಪರಿಹಾರ ಹಣದಲ್ಲಿ 5ಕೋಟಿಯಷ್ಟು ಹಣ ಬಿಡುಗಡೆ ಮಾಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರಿ ಮಹಾ ಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಜಿ.ಪಂ.ಸದಸ್ಯೆ ಮಂಜುಳಮ್ಮ, ತಾ.ಪಂ.ಸದಸ್ಯ ಕೇಶವಮೂರ್ತಿ, ಗ್ರಾ.ಪಂ.ಅಧ್ಯಕ್ಷ ಭಾಗ್ಯಮ್ಮ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎನ್.ರಾಜು, ಮುಖ್ಯ ಕಾರ್ಯನಿರ್ವಹಣಾಧಿಖಾರಿ ಜಿ.ಪ್ರಕಾಶ್, ಕಂದಿಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಯ್ಯ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಂದಿಕೆರೆ ಪ್ರಾ.ಕೃ.ಪ.ಸಂ.ನಿರ್ದೇಶಕ ಸಿದ್ದಲಿಂಗಮೂರ್ತಿ ಸ್ವಾಗತಿಸಿದರು. ಜಯಶಂಕರ್‍ಗಣೇಶ್ ನಿರೂಪಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
