ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರವಿಲ್ಲ: ತೇಜಸ್ವಿ ಪಟೇಲ್

ದಾವಣಗೆರೆ
   
      ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದಕ್ಕೆ ತಮಗ್ಯಾವ ಬೇಸರವಿಲ್ಲ. ಆ ಪಕ್ಷದ ನಾಯಕರ ಪ್ರಚಾರ ಶೈಲಿಯನ್ನು ನೋಡಿಕೊಂಡು, ಪಕ್ಷದ ನಾಯಕರು ಬಯಸಿದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಪ್ರಚಾರಕ್ಕೆ ಹೋಗುವುದಾಗಿ ಕಾಂಗ್ರೆಸ್ ಟಿಕೆಟ್ ವಂಚಿತ, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ತಿಳಿಸಿದ್ದಾರೆ.
       ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ವಾಸ್ತವದಲ್ಲಿ ಕಾಂಗ್ರೆಸ್ ಸದಸ್ಯನೇ ಅಲ್ಲ ಹಾಗೂ ಟಿಕೆಟ್ ಬಯಸಿ ಅರ್ಜಿಯೂ ಹಾಕಿರಲಿಲ್ಲ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕರೆ ಮಾಡಿ ಕರೆದಿದ್ದರಿಂದ ಬೆಂಗಳೂರಿಗೆ ಹೋಗಿ, ಸ್ಥಳೀಯ ನಾಯಕರು ಸಮ್ಮತಿ ನೀಡಿದರೆ ಮಾತ್ರ ಟಿಕೆಟ್ ನೀಡಿ ಎಂಬುದಾಗಿ ಹೇಳಿ ಅಭಿಪ್ರಾಯ ತಿಳಿಸಿ ಬಂದಿದ್ದೆ. ಆದರೆ, ಮಂಗಳವಾರ ತಡರಾತ್ರಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಸ್ಪರ್ಧೆಯೇ ಅನಿರೀಕ್ಷಿತವಾದ್ದರಿಂದ ನನಗೆ ಯಾವುದೇ ಬೇಸರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
        ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಲೋಕಸಭಾ ಕ್ಷೇತ್ರಕ್ಕೆ ನನ್ನ ಹೆಸರು ಗುರುತಿಸಿರುವುದೇ ಹಾಗೂ ನನ್ನ ಹೆಸರು ಮುನ್ನೆಲೆಗೆ ಬಂದಾಗ ಜಿಲ್ಲೆಯ ನೂರಾರು ಜನರು ಕರೆ ಮಾಡಿ ಚರ್ಚಿಸಿರುವುದೇ ನನಗೆ ಗೌರವದ ಸಂಗತಿಯಾಗಿದೆ. ನಾನು ಕಾಂಗ್ರೆಸ್ ಸದಸ್ಯನಲ್ಲದಿದ್ದರೂ ಕೆಪಿಸಿಸಿ ಅಧ್ಯಕ್ಷರು ನನ್ನನ್ನು ಕರೆದು ಮಾತಾಡಿದ್ದು ಖುಷಿ ತಂದಿದೆ. ಇದೇ ರೀತಿ ಮುಂದೆಯೂ ನಮ್ಮ ಜನಪರ, ರೈತಪರ ವಿಚಾರಗಳನ್ನು ಕಾಂಗ್ರೆಸ್ ನಾಯಕರು ಗುರುತಿಸುವಂತಾಗಬೇಕೆಂದು ಹೇಳಿದರು.
         ನಾನು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದಿದ್ದರೂ ನನ್ನ ಸಹೋದರ ಮಹಿಮಾ ಜೆ. ಪಟೇಲ್ ಸ್ಪರ್ಧಿಸಿದ್ದ ಒಂದು ಚುನಾವಣೆಯನ್ನು ಹೊರತು ಪಡಿಸಿ, 2008ರಿಂದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಬೆಂಬಲಿಸಿದ್ದೇನೆ. ನನ್ನ ಹಾಗೂ ಕಾಂಗ್ರೆಸ್ ಸಿದ್ಧಾಂತಗಳ ಸಾಮ್ಯತೆಯಿಂದ ನನಗೆ ಕಾಂಗ್ರೆಸ್ ಬಗ್ಗೆ ಒಲವು ಹೆಚ್ಚಾಗಿಯೇ ಇದೆ ಎಂದ ಅವರು,  ಬಿಜೆಪಿಯಿಂದ ನಮಗೆ ವೈಯಕ್ತಿಕವಾಗಿ ಗೌರವ ಸಿಗುತ್ತದೆ. ಆದರೆ, ನಮ್ಮ ವಿಚಾರಗಳು ಹೊಂದಾಣಿಕೆಯಾಗುವುದು ಕಾಂಗ್ರೆಸ್‍ನೊಂದಿಗೆ ಮಾತ್ರ ಎಂದರು.
       ಅಭ್ಯರ್ಥಿಯಾಗಲಿರುವ ಹೆಚ್.ಬಿ.ಮಂಜಪ್ಪ ಅವರಿಗೂ ಶುಭವಾಗಲಿ. ಕಾಂಗ್ರೆಸ್ ಗೆಲ್ಲಿಸಲು ಜಿಲ್ಲಾ ನಾಯಕರೂ ಸಕ್ರಿಯರಾದಲ್ಲಿ, ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುವ ಕುರಿತು ನಿರ್ಧರಿಸುತ್ತೇನೆ ಎಂದ ಅವರು, ನನ್ನ ಹೆಸರು ಪ್ರಬಲ ಪೈಪೋಟಿ ನೀಡಿದ್ದರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ತಡವಾಗಿದೆ.
     
         ನನಗೆ ನಾಮಪತ್ರ ಸಲ್ಲಿಸಲು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಹೈಕಮಾಂಡ್‍ನಿಂದ ಸೂಚನೆ ಬಂದಿತ್ತು. ಆದರೆ ಕೆಲ ಸ್ಥಳೀಯ ನಾಯಕರು ಆಕ್ಷೇಪ ಎತ್ತಿದ್ದರಿಂದ ನನಗೆ ಟಿಕೆಟ್ ಕೈ ತಪ್ಪಿರಬಹುದು. ಸರ್ವಸಮ್ಮತ ಅಭ್ಯರ್ಥಿಯಾಗದೆ ಸ್ಪರ್ಧಿಸಿದ್ದರೆ ನನಗೂ, ಪಕ್ಷಕ್ಕೂ ಕಷ್ಟವಾಗುತ್ತಿತ್ತು. ಅದರ ಬದಲು ಬೇರೆಯವರಿಗೆ ಟಿಕೆಟ್ ನೀಡಿದ್ದೇ ಒಳ್ಳೆಯದಾಯಿತು ಎಂದು ಹೇಳಿದರು.
         ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಗೊಂದಲದಿಂದ ಪಕ್ಷದ ಕಾರ್ಯಕರ್ತರು ಬೇಸರವಾಗಿದ್ದಾರೆ. ಆದರೆ, ಹೊಸ ಅಭ್ಯರ್ಥಿ ಆಯ್ಕೆಯ ನಂತರ ಕೆಲ ಲೆಕ್ಕಚಾರ ನಡೆಯುತ್ತಿದೆ. ಹೆಚ್.ಬಿ.ಮಂಜಪ್ಪ ಚುನಾವಣೆಯಲ್ಲಿ ಗೆಲ್ಲಲಿ ಎಂಬುದಾಗಿ ಶುಭ ಹಾರೈಸುತ್ತೇನೆ ಎಂದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link