ಬೆಂಗಳೂರು:
ಸದ್ಯ ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಅನಿರೀಕ್ಷಿತ ಸುನಾಮಿಯ ಕಾರಣಕರ್ತರಾದ “ಕೈ-ದಳ”ದ ಅತೃಪ್ತ ಶಾಸಕರು ಮುಂಬೈ ಸೇರಿರುವಾಗ ಇಂದು ನಗರದಲ್ಲಿ ಕಾಂಗ್ರೆಸ್ ನಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದು. ಸಭೆಗೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು ಬೆಕ್ಕು ಕಣ್ಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಿಲ್ಲ ಅನ್ನುವ ಹಾಗಿದೆ ಬಿಜೆಪಿಯವರ ವರ್ತನೆ ಎಂದು ವ್ಯಂಗ್ಯವಾಡಿದರು.
ಇಂದಿನ ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಭಾಗಿಯಾಗುತ್ತಿದ್ದು, ಸದ್ಯದಲ್ಲಿಯೇ ಎಲ್ಲವೂ ನಿರಾಳ ಆಗುವ ನಿರೀಕ್ಷೆ ಇದೆ.ಬಂದಿರುವ ಸಮಸ್ಯೆ ಹೇಗೆ ಪರಿಹಾರ ಮಾಡಬೇಕು ಎಂಬುದರ ಕುರಿತು ಚರ್ಚಿಸಲು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಅತೃಪ್ತರ ಶಾಸಕರ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದೆ. ಬಿಜೆಪಿ ಮುಖಂಡರು ಎಲ್ಲಿ ಯಾರನ್ನು ಭೇಟಿಯಾಗಿ ಸಭೆ ನಡೆಸುತ್ತಿದ್ದಾರೆ ಎಲ್ಲ ವಿಷಯಗಳು ನಮಗೆ ಗೊತ್ತಿದೆ. ಸರ್ಕಾರ ರಚನೆ ಮಾಡಲ್ಲ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ಸರ್ಕಾರ ರಚಿಸಲು ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷದವರೇ ಮುಂದಿನ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಂಬುದಾಗಿ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಹಾಗಾಗಿ ಸಿಎಂ ಬೆನ್ನಿಗೆ ಚೂರಿ ಹಾಕುವ ಕೆಲಸ ಎಂದಿಗೂ ನಾನು ಮಾಡುವುದಿಲ್ಲ. ಇನ್ನು ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಷಯ ಎಂದು ತಿಳಿಸಿದ್ದಾರೆ. ಅತೃಪ್ತ ಶಾಸಕರಿಗೆ ಮಂತ್ರಿಗಿರಿ ಕೊಡುವುದಾಗಿ ಬಿಜೆಪಿ ಆಮಿಷವೊಡಿದ್ದೆ. ಯಾರ ಬೆನ್ನಿಗೂ ಚೂರಿ ಹಾಕಿ ಅಧಿಕಾರ ಕೊಡಿ ಎಂದು ಕೇಳುವ ಜಾಯಮಾನದ ವ್ಯಕ್ತಿ ನಾನಲ್ಲ. ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಉಳಿಯಲಿ ಎಂಬ ಉದ್ದೇಶದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಎಲ್ಲ 75ರಿಂದ 78 ಶಾಸಕರು ಚುನಾವಣೆಗೆ ಹೋಗೋದು ಬೇಡ ಎಂದು ಹೇಳಿಕೊಂಡಿದ್ದಾರೆ. ಆದರೆ ಚುನಾವಣೆ ಬಂದರೆ ಅದಕ್ಕೆ ನಾವು ಹೆದರಲ್ಲ. ನಾನು ಚುನಾವಣೆಗೆ ಹೆದರಲ್ಲ ಎಂಬುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ ಕೆಲ ಶಾಸಕರು ನನ್ನನ್ನು ಸಂಪರ್ಕಿಸಿ ಚುನಾವಣೆಗೆ ಹೋಗದಂತೆ ಏನಾದರು ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ಹೊಸ ಚುನಾವಣೆಗೆ ಹೋಗಬೇಕೆಂಬ ತಂತ್ರಗಳನ್ನು ಮಾಡಿಕೊಳ್ಳುತ್ತಿ ದ್ದಾರೆ. ರಾಜ್ಯ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡಿ ಮಂತ್ರಿಯಾದರೆ ಸಾಕು ಎಂದು ಓಡಾಡುತ್ತಿದ್ದಾರೆ. ಶಾಸಕರಿಗೆ ಆಫರ್ ನೀಡಿದ್ದು, ನೋಡೋಣ ಎಲ್ಲರನ್ನು ಮಂತ್ರಿ ಮಾಡಿಕೊಳ್ಳಲಿ ಎಂದು ಹೇಳಿದರು.