ಲೋಕಸಭೆಗೆ ಸ್ಪರ್ಧಿಸಲು ನನ್ನ ಬಳಿ ಹಣ ಇಲ್ಲ :ಕಿಮ್ಮನೆ ರತ್ನಾಕರ್

ಬೆಂಗಳೂರು

       ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮ್ಮ ಬಳಿ ಹಣ ಇಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಆದರೆ ಮಂಡ್ಯದಲ್ಲಿ ಚುನಾವಣಾ ಖರ್ಚು ವೆಚ್ಚ ಉಳಿಸಲು ಬಿಜೆಪಿ ನಾಯಕರು ನಿವೃತ್ತ ಅಧಿಕಾರಿ ಡಾ.ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುತ್ತಿದ್ದಾರೆ. ಬಳ್ಳಾರಿ ಕಾಂಗ್ರೆಸ್ ನಿಗಿ ನಿಗಿ ಕೆಂಡವಾಗಿ ಮಾರ್ಪಟ್ಟಿದೆ. ರಾಮನಗರದಲ್ಲಿ ಯಾರನ್ನು ಕಣಕ್ಕಿಳಿಸುವುದು ಎನ್ನುವ ಜಿಜ್ಞಾಸೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

       ಐದಾರು ತಿಂಗಳ ಕಾಲ ಸಂಸದರಾಗಿ ಆಯ್ಕೆಯಾಗಲು ಕೆಲ ಮುಖಂಡರಿಗೆ ಆಸಕ್ತಿಯಿಲ್ಲ. ರಾಮನಗರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಗೊಂದಲ ಬಿಜೆಪಿ ನಾಯಕರಿಗಿದೆ. ಇಲ್ಲೂ ಸಹ ಚುನಾವಣಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವವರ್ಯಾರು ಎನ್ನುವ ಗೊಂದಲ ಶುರುವಾಗಿದೆ. ಗೆದ್ದರೆ ಮತ್ತೆ ತಮಗೇ ಟಿಕೆಟ್ ನೀಡುತ್ತಾರೋ ಇಲ್ಲವೋ ಎನ್ನುವ ಆತಂಕ ಕೆಲವರಿಗಿದೆ. 

      ಮಂಡ್ಯ ಕ್ಷೇತ್ರದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್ ಅವರನ್ನು ಕಣಕ್ಕಿಳಿಸಲು ಉದ್ದೇಶಿಸಲಾಗಿತ್ತು. ಆದರೆ ಚುನಾವಣೆಗೆ ಯಾರು ಖರ್ಚು ಮಾಡುತ್ತಾರೆ ಎನ್ನುವ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಡಾ.ಸಿದ್ದರಾಮಯ್ಯ ಆಸಕ್ತಿ ತೋರಿದರು. ಈ ಬೆಳವಣಿಗೆಯಿಂದ ಈ ಕ್ಷೇತ್ರದ ಉಸ್ತುವಾರಿ ಹೊಣೆ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

       ಈ ಮಧ್ಯೆ ಕಿಮ್ಮನೆ ರತ್ನಾಕರ್ ಶಿವಮೊಗ್ಗದಲ್ಲಿ ಮಾತನಾಡಿ, ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಿ ಖರ್ಚು ಮಾಡಲು ನನ್ನ ಬಳಿ ಹಣ ಇಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಪಕ್ಷದ ಹೈಕಮಾಂಡ್‍ಗೆ ತಿಳಿಸಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಧರ್ಮ ಪಾಲಿಸಬೇಕಿರುವುದರಿಂದ ಒಮ್ಮತದ ಅಭ್ಯರ್ಥಿಯನ್ನು ಬೆಂಬಲಿಸಲಾಗುವುದು ಎಂದರು.

      ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಇಂದು ನಡೆಯಬೇಕಾಗಿದ್ದ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದು, ಯಾರನ್ನು ಕಣಕ್ಕಿಳಿಸುವುದು ಎನ್ನುವ ತಲೆ ನೋವು ಕಾಡಲಾರಂಭಿಸಿದೆ. ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಈ ಜಿಲ್ಲೆ ಇತ್ತ ಪುಲಿ, ಅತ್ತ ದರಿ ಎನ್ನುವಂತಾಗಿದೆ.

       ಅಭ್ಯರ್ಥಿ ಆಯ್ಕೆ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಸಭೆ ಫಲ ನೀಡಿಲ್ಲ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಳ್ಳಾರಿ ಶಾಸಕರ ಸಭೆಯನ್ನು ಇಂದು ಕೂಡ ಕರೆಯಲಾಗಿತ್ತು. ಆದರೆ ಶಾಸಕರಾದ ಆನಂದ್ ಸಿಂಗ್, ಭೀಮಾ ನಾಯ್ಕ್, ಗಣೇಶ್ ಗೈರು ಹಾಜರಾಗಿದ್ದರು. ಶಾಸಕ ನಾಗೇಂದ್ರ ಅವರ ಸಹೋದರ ಗಣೇಶ್ ಪ್ರಸಾದ್‍ಗೆ ಬಳ್ಳಾರಿ ಕ್ಷೇತ್ರದಿಂದ ಟಿಕೆಟ್ ಕೊಡಬಾರದು ಎಂಬುದು ಈ ಶಾಸಕರ ಆಗ್ರಹವಾಗಿದೆ.

       ಇನ್ನು ತಮ್ಮ ಸ್ವಂತ ಜಿಲ್ಲೆ ರಾಮನಗರದಲ್ಲಿ ಬಂಡಾಯ ತೀವ್ರಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಕೆಲವರು ದಾಂಧಲೆ ನಡೆಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಮೇಲೆ ಪಕ್ಷದ ಕಚೇರಿ ಏಕಿರಬೇಕು ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಇಕ್ಬಾಲ್ ಹುಸೇನ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

      ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಥಳೀಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಸಡ್ಡು ಹೊಡೆದಿದ್ದಾರೆ. ಇಂದು ಇಕ್ಬಾಲ್ ಹುಸೇನ್ ಜೊತೆ ಮಾತುಕತೆ ನಡೆಸಿರುವ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

       ಈ ಮಧ್ಯೆ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಥಳೀಯ ಅಭ್ಯರ್ಥಿಯನ್ನೇ ನಿಲ್ಲಿಸಬೇಕು. ಜೆಡಿಎಸ್‍ಗೆ ಬೆಂಬಲ ನೀಡಿದರೆ ಅವರೆಲ್ಲಾ ಅನಾಥರಾಗುತ್ತಾರೆ ಎಂದು ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಹೇಳುವ ಮೂಲಕ ಸ್ಪರ್ಧೆಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ನಾನು ಉಪಚುನಾವಣೆಗೆ ಆಕಾಂಕ್ಷಿ. ಈ ಕುರಿತು ನಮ್ಮ ಸ್ಥಳೀಯ ಕಾಂಗ್ರೆಸ್ ಮುಖಂಡರ ಬಳಿ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ 5 ಲಕ್ಷ ಕಾಂಗ್ರೆಸ್ ಮತದಾರರು ಮತ್ತು ಕಾರ್ಯರ್ತರಿದ್ದು, ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಅವಕಾಶ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಮಂಡ್ಯ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮನವಿ ಮಾಡಿದ್ದೇನೆ ಎಂದರು.

     ನಾನೇ ಅಂತ ಅಲ್ಲ, ರಮ್ಯ ಆಗಲಿ ಅಥವಾ ಇನ್ನೂ ತುಂಬಾ ನಾಯಕರಿದ್ದಾರೆ. ಹಾಗಾಗಿ ಮಂಡ್ಯ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹಾಕಿ ಎಂದು ಕೇಳಿಕೊಂಡಿದ್ದೇನೆ. ಸ್ಥಳೀಯ ನಾಯಕರು ಈ ವಿಷಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದಾರೆ. ಇಂದು ಅಥವಾ ನಾಳೆಯೊಳಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

      ಈಗಾಗಲೇ ರಾಮನಗರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ. ಆದರೆ ನಿನ್ನೆಯಿಂದ ನಡೆಯುತ್ತಿರುವ ಬೆಳವಣಿಗೆಯಿಂದ ದೋಸ್ತಿ ಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಯಲು ಮಾಡಿದೆ.

      ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರಕ್ಕೆ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರ ಹೆಸರನ್ನು ಅಂತಿಮಗೊಳಿಸಿ, ಜಿಲ್ಲಾ ಚುನಾವಣಾ ಉಸ್ತುವಾರಿ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆ ಮಾಡಿದ್ದಾರೆ. ಆದರೆ, ಸುಶೀಲ್ ಕುಮಾರ್ ಬೆಳಗಲಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಆನಂದ್ ನ್ಯಾಮಗೌಡ ಅವರ ಆಯ್ಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು ಬಂಡಾಯ ಏಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮೂರು ಪಕ್ಷಗಳಿಗೂ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ತೀವ್ರ ಕಗ್ಗಂಟಾಗಿಯೇ ಇದ್ದು, ಭಾರಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವುದು ಮೂರೂ ಪಕ್ಷಗಳ ಮುಖಂಡರಿಗೆ ಸವಾಲಿನ ಕೆಲಸವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap