ಬೆಂಗಳೂರು:
ಬೆಂಗಳೂರಿನ ಪಾದರಾಯನಪುರದಲ್ಲಿದ್ದ ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ರಾತ್ರಿ ಏಕೆ ಅಲ್ಲಿಗೆ ಹೋಗಿದ್ದಾದರೂ ಏಕೆ ಬೆಳಗ್ಗೆ ಬರಬೇಕಿತ್ತು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಕೆಲವರನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಪೊಲೀಸರು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಜಗಜೀವನ ರಾಂ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ಜಮೀರ್ ಅಹ್ಮದ್ ಖಾನ್ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ವಾರಂಟೈನ್ ಮಾಡಲು ಹೋದಾಗ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡನೀಯ ಎಂದರು.
ಒಟ್ಟಿಗೆ ಪೊಲೀಸರು 57 ಮಂದಿಯನ್ನು ಕರೆದುಕೊಂಡು ಹೋಗಲು ಮುಂದಾದಾಗ ಅವರು ಈ ರೀತಿ ನಡೆದುಕೊಂಡಿದ್ದಾರೆ .
ನಾನು ಈ ಹಿಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ರಾತ್ರಿ ವೇಳೆ ಕ್ವಾರಂಟೈನ್ ಮಾಡಬೇಡಿ ಹಗಲಿನಲ್ಲಿ ಪ್ರಕ್ರಿಯೆ ಮಾಡಿ ಎಂದು ಆದರೆ ಸಿಬ್ಬಂದಿಗಳಿಗೆ ರೂಮ್ ದೊರೆಯುವುದು ಲೇಟಾಗಿದೆ. ಹೀಗಾಗಿ ಅವರು ಸಂಜೆ ಸಮಯದಲ್ಲಿ ಬಂದಿದ್ದಾರೆ. ಬೆಳಗ್ಗೆ ಕ್ವಾರಂಟೈನ್ ಮಾಡಬೇಕಿತ್ತು ಎಂದು ಹೇಳಿದರು. ಕೊರೋನಾ ಶಂಕಿತರನ್ನು ಕರೆದುಕೊಂಡು ಹೋಗುವ ಮುನ್ನ ನನ್ನನ್ನು ಒಂದು ಮಾತು ಕೇಳ ಬೇಕಿತ್ತು. ಡೇ ಟೈಮ್ ನಲ್ಲಿ ಶಂಕಿತರನ್ನು ಕರೆದುಕೊಂಡು ಹೋಗುವಂತೆ ಕಮಿಷನರ್ ಗೆ ಸಹ ಹೇಳಿದ್ದೆ. ರಾತ್ರಿ ಹೋಗುವ ಅಗತ್ಯವೇನಿತ್ತು? ಬಿಬಿಎಂಪಿ ಕಮಿಷನರ್ ಅನಿಲ್ ಜೊತೆ ಸಹ ಮಾತನಾಡಿದ್ದೇನೆ.
ಭಾನುವಾರ ಬೆಳಗ್ಗೆಯಿಂದ ನನ್ನ ಪಿಎ ಕಾಯ್ತಾ ಕುಳಿತಿದ್ದರು. ಹೋಟೆಲ್ ಸಿಗದ ಹಿನ್ನೆಲೆಯಲ್ಲಿ ರಾತ್ರಿ ಹೋಗಿದ್ದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ನಮಗೆ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸಿದ್ದಾರೆ. ಎಲ್ಲರಿಗೂ ತಿಳುವಳಿಕೆ ಹೇಳಿ ಸೋಂಕು ಶಂಕಿತರನ್ನು ಕರೆದುಕೊಂಡು ಹೋಗುವ ಬದಲು ಮನೆಯ ಮುಂದೆ ವಾಹನ ತೆಗೆದುಕೊಂಡು ನಿಂತಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ವಿರುದ್ಧವೇ ಗರಂ ಆಗಿ ಸುದ್ದಿಗೊಷ್ಠಿಯಿಂದ ಹೊರನಡೆದ ಶಾಸಕ
ಇನ್ನು ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆರಳಿದ ಶಾಸಕ ಜಮೀರ್ ಅಹ್ಮದ್ ಖಾನ್ ಎರಡು ಬಾರಿ ಸುದ್ದಿಗೊಷ್ಠಿಯಿಂದ ಹೊರನಡೆದ ಘಟನೆ ನಡೆಯಿತು. ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದರೆ ನಾನೇ ಖುದ್ಧು ಬಂದು ಅವರ ಮನವೊಲಿಸಿ ಕಳುಹಿಸಿಕೊಡುತ್ತಿದ್ದೆ. ಇದು ಸೂಕ್ಷ್ಮವಿಚಾರವಾಗಿದ್ದು ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.