ನಾನು ದುರ್ಬಲನಾಗಿಲ್ಲ, ಇನ್ನಷ್ಟು ಬಲಿಷ್ಠನಾಗಿದ್ದೇನೆ: ಡಿಕೆ ಶಿವಕುಮಾರ್

ಬೆಂಗಳೂರು:

      ನನ್ನ ವಿವೇಚನೆಗೆ ತಕ್ಕಂತೆ ನಾನು ಜಿವನ ನಡೆಸುತ್ತಿದ್ದು, ಯಾವುದೇ ತಪ್ಪು ಮಾಡಿಲ್ಲ. ನಾನು, ನನ್ನ ಸಹೋದರ, ನನ್ನ ಕುಟುಂಬ ಯಾವುದೇ ರೀತಿಯಲ್ಲಿ ಕಾನೂನು ಮೀರಿ ತಪ್ಪು ಮಾಡಿದ್ದರೆ ಯಾವುದೇ ತನಿಖೆ ನಡೆಸಿ ನನಗೆ ಶಿಕ್ಷೆ ನೀಡಲಿ. ನಾನು ಅದನ್ನು ತಲೆಬಾಗಿ ಸ್ವೀಕರಿಸುತ್ತೇನೆ. ಈ ಪ್ರಕರಣದಿಂದ ನಾನು ದುರ್ಬಲಗೊಂಡಿದ್ದೇನೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರೆ ಅವದು ತಪ್ಪು. ನಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸಂದೇಶ ರವಾನಿಸಿದ್ದಾರೆ.

      ದೆಹಲಿ ಹೈಕೋರ್ಟ್ ಜಾಮೀನು ನೀಡಿದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಡಿಕೆ ಶಿವಕುಮಾರ್, ಶನಿವಾರ ನೇರವಾಗಿ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದರು. ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಂಡೆ ಪುಡಿಯಾಗಿದೆ ಎಂದು ಅನೇಕ ವ್ಯಾಖ್ಯಾನ ಮಾಡಿದ್ದಾರೆ. ಆದರೆ ಕಲ್ಲು ಕಡಿದಾಗ ಆಕೃತಿ ಆಗುತ್ತದೆ. ಅದನ್ನು ಪೂಜಿಸಿದಾಗ ಅದು ಸಂಸ್ಕೃತಿ ಆಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

      ‘ಜುಲೈ 29ನೇ ತಾರೀಕು 9.40 ನಿಮಿಷಕ್ಕೆ ದೆಹಲಿ ಇಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ನನಗೆ ಸಮನ್ಸ್ ನೀಡಿದರು. ಬೆಳಗ್ಗೆ 11 ಗಂಟೆಗೆ ದೆಹಲಿಗೆ ಬರಲು ಹೇಳಿದರು. ನಾನು ತಡವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿ, 30ನೇ ತಾರೀಕು ದೆಹಲಿಯ ಕಚೇರಿಗೆ ಹೋಗಿ ಅವರಿಗೆ ಗೌರವ ನೀಡಿದೆ. ನಾನೊಬ್ಬ ಕಾನೂನು ರೂಪಿಸುವವನಾಗಿ, 7 ಬಾರಿ ಶಾಸಕನಾಗಿ ಕಾನೂನಿಗೆ ಗೌರವ ನೀಡಲು ನಮ್ರತೆಯಿಂದ ಇಡಿ ಕಚೇರಿಗೆ ಭೇಟಿ ಕೊಟ್ಟೆ. ಅಲ್ಲಿಗೆ ಹೋದವನು ಈಗ ನೇರವಾಗಿ ನಮ್ಮ ಪಕ್ಷದ ದೇವಾಲಯಕ್ಕೆ ಬಂದಿದ್ದೇನೆ. ನಮ್ಮ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಇದು ದೇವಾಲಯ.

      ಇದೊಂದು ವಿಶೇಷವಾದ ಸಂದರ್ಭ. ಈ ದೇವಾಲಯದಲ್ಲಿ ಭಕ್ತನಿಗೂ ಹಾಗೂ ಭಗವಂತನಿಗೂ ವ್ಯವಹಾರ ನಡೆಯುತ್ತದೆ. ಹೀಗಾಗಿ ಮೊದಲು ಈ ಕಚೇರಿಗೆ ಬಂದು ನಿಮ್ಮನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ಮೊದಲಿಗೆ ನನ್ನ ಜತೆಗೆ ಇದ್ದ ಮಾಧ್ಯಮದ ಸ್ನೇಹಿತರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಪರ ಅಥವಾ ವಿರೋಧವಾಗಿ ವರದಿ ಮಾಡಿರುವ ಎಲ್ಲ ಮಾಧ್ಯಮದವರಿಗೂ ಧನ್ಯವಾದಗಳು. ಅನೇಕ ಮಾಧ್ಯಮಗಳು ಬಂಡೆ ಪುಡಿಯಾಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ. ಪ್ರಕೃತಿಯಲ್ಲಿ ಕಲ್ಲು ಕಡಿದಾಗ ಆಕೃತಿ ಆಗುತ್ತದೆ. ಅದನ್ನು ಪೂಜಿಸಿದಾಗ ಅದು ಸಂಸ್ಕೃತಿ ಆಗುತ್ತದೆ. ಇದು ಜೀವನದ ಆಟ. ಬೇರೆ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುತ್ತೇನೆ.

     ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಇಲ್ಲದೆ ನಾವು ಬದುಕಲು ಆಗಲ್ಲ. ನಾನು ಇಷ್ಟು ದಿನಗಳ ಕಾಲ ನನಗೆ ಈ ಪರಿಸ್ಥಿತಿ ಯಾಕೆ ಬಂತು? ಎಂದು ನಾನು ಆಲೋಚನೆ ಮಾಡಿದ್ದೇನೆ. ಜುಲೈ 30ರಿಂದ ಮೊನ್ನೆ ರಾತ್ರಿ 9 ಗಂಟೆವರೆಗು ಯಾವ ಪರಿಸ್ಥಿತಿಯಲ್ಲಿದ್ದೆ. ಈ ಸಂದರ್ಭದಲ್ಲಿ ರಾಜ್ಯದ ಜನತೆ, ಕಾರ್ಯಕರ್ತರು ನಾಯಕರು ಬೇರೆ ಪಕ್ಷದವರು ಯಾವ ಅಭಿಮಾನ, ವಿಶ್ವಾಸ, ಪ್ರೀತಿ ತೋರಿದರು ಎಂಬುದನ್ನು ಯೋಚಿಸುತ್ತಿದ್ದೆ. ಇದನ್ನು ಯಾವ ಅಳತೆಗೋಲಿನಲ್ಲಿ ತೂಕ ಮಾಡಲು ಸಾಧ್ಯ? ತಾವೇ ಇದನ್ನು ವ್ಯಾಖ್ಯಾನ ಮಾಡಿದರೆ ಒಳ್ಳೆಯದು.

     ನಾನು ತಪ್ಪು ಮಾಡಿದ್ದರೆ, ನನ್ನ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡೆವಿಟ್, ನನ್ನ ವ್ಯವಹಾರದಲ್ಲಿ ಅಥವಾ ಜೀವನದಲ್ಲಿ ತಪ್ಪು ಮಾಡಿದ್ದರೆ, ಕೇವಲ ಹೆಂಡತಿ ಅಫಿಡವಿಟ್ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ, ಆದರೆ ನನ್ನ ಮಗಳು ನನ್ನ ಜತೆಯಲ್ಲಿರುವುದರಿಂದ ಕಾನೂನಿನಲ್ಲಿ ಅಗತ್ಯವಿಲ್ಲದಿದ್ದರೂ ಆಕೆಯ ಅಫಿಡವಿಟ್ ಅನ್ನು ನಾನು ಸಲ್ಲಿಸಿದ್ದೇನೆ. ನನ್ನ ಸಂಪಾದನೆ ಕುರಿತು ರಾಜ್ಯದ ಜನತೆಗೆ ನಾನು ಬಿಚ್ಚಿಟ್ಟಿದ್ದೇನೆ. ಇದರ ಬಗ್ಗೆ ಸಾಕಷ್ಟು ವ್ಯಾಖ್ಯಾನ ನಡೆಯುತ್ತಿದೆ. ಕೋರ್ಟ್ ಪ್ರಕ್ರಿಯೆ ಬಗ್ಗೆ ತಾವು ಸಾಕಷ್ಟು ವ್ಯಾಖ್ಯಾನ ಮಾಡಿದ್ದೀರಿ. ಜನರೂ ಚರ್ಚೆ ಮಾಡಿದ್ದಾರೆ, ಗುಮಾನಿಯಿಂದ ನೋಡಿದ್ದಾರೆ. ಕೆಲವರು ಕನ್ನಡಕದಲ್ಲಿ ನೋಡಿದರೆ, ಕೆಲವರು ಎಕ್ಸ್ ರೇ ನಲ್ಲಿ ನೋಡಿದ್ದಾರೆ. ಈ ಎಲ್ಲದಕ್ಕೂ ನಾನು ಮುಂದಿನ ದಿನಗಳಲ್ಲಿ ದಾಖಲೆ ಸಮೇತ ನೀಡುತ್ತೇನೆ.

     ನಾನು ಹುಟ್ಟುತ್ತಲೇ ರೈತ, ವೃತ್ತಿಯಲ್ಲಿ ವ್ಯವಹಾರಸ್ಥ, ಶಿಕ್ಷಣ ನೀಡುವುದು ನನ್ನ ಆಯ್ಕೆ, ರಾಜಕೀಯ ನನ್ನ ಆಸಕ್ತಿ ಹಾಗೂ ಸ್ಫೂರ್ತಿ. ನನ್ನನ್ನು ಬೆಳೆಸಿದ ಯಾರಿಗೂ ಯಾವ ಸಂದರ್ಭದಲ್ಲೂ ನಾನು ದೋಖಾ ಬಗೆದಿಲ್ಲ. ನಾನು ಬಹಳ ತಾಳ್ಮೆಯಿಂದ ಹೋರಾಟ ಮಾಡುತ್ತಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿರುವ ನಾಯಕರು ಪಕ್ಷ ಹೇಳಿದ ಕೆಲಸ ಮಾಡಿಕೊಂಡು ಬಂದಿದ್ದೇನೆ. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರು ಬರುತ್ತಾರೆ ಎಂದಾಗ ನಾನು ಸಿಂಗಾಪುರದಲ್ಲಿದ್ದೆ. ಪಕ್ಷ ಜವಾಬ್ದಾರಿ ಕೊಟ್ಟ ಸಂದರ್ಭದಲ್ಲಿ ನಾನು ಅದನ್ನು ಮಾಡಿದ್ದೇನೆ.

     ರಾಜಕೀಯ ಜೀವನದಲ್ಲಿ ನಾನು ಸೋತಿದ್ದೇನೆ, ಗೆದ್ದಿದ್ದೇನೆ. ಅಧಿಕಾರ ಯಾವಾಗಲು ಸಿಗುವುದಿಲ್ಲ ಎಂಬುದು ಗೊತ್ತು. ನಾನು ನನ್ನ ಜೀವನದಲ್ಲಿ ನನ್ನ ವಿವೇಚನೆ ಹೇಳಿದಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಯಾರಿಗೂ ತೊಂದರೆ ನೀಡಿಲ್ಲ. ಮೋಸ ಮಾಡಿಲ್ಲ. ಮೋಸದ ಬದುಕು ನನಗೆ ಅಗತ್ಯವಿಲ್ಲ.

     ನನಗೆ ರಾಜಕೀಯ ಜೀವನದಲ್ಲಿ ಅನೇಕ ಆಸೆ, ಆಮೀಷ, ಚದುರಂಗದಾಟ ಎಲ್ಲವೂ ಇತ್ತು. ಆದರೆ ಅದನ್ನು ಒಪ್ಪಿಕೊಳ್ಳಲು ನನ್ನ ವಿವೇಚನೆ ಒಪ್ಪಲಿಲ್ಲ. ನನಗೆ ಲಕ್ಷಾಂತರ ಅಭಿಮಾನಿಗಳು, ಸೈನಿಕರಂತ ಕಾರ್ಯಕರ್ತರಿದ್ದಾರೆ. ಅವರು ತೋರಿಸುತ್ತಿರುವ ಪ್ರೀತಿ, ಅಭಿಮಾನ ಯಾವ ರೀತಿ ತೀರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಆಸೆ ಆಮೀಷಗಳಿಗಾಗಿ ಇವರ ಪ್ರೀತಿಯನ್ನು ಬಲಿ ಕೊಡಲು ಸಾಧ್ಯವಿಲ್ಲ. ಇವರ ಈ ಋಣ ತೀರಿಸುವ ಶಕ್ತಿ ನೀಡು ಎಂದು ನಾನು ನಂಬಿದ ಶಕ್ತಿಯಲ್ಲಿ ಪ್ರಾರ್ಥಿಸುತ್ತೇನೆ.

     ನಾನು ದೆಹಲಿಯಲ್ಲಿದ್ದಾಗ ಭೇಟಿ ಮಾಡಲು ಗೌಡರು ಬರಲು ಪ್ರಯತ್ನಿಸಿದರು, ಅವರು ಎರಡು ಮೂರು ದಿನ ಕಾದು ಭೇಟಿಯಾಗಲು ಆಗಲಿಲ್ಲ. ನನ್ನ ಭೇಟಿಗೆ ಸೀಮಿತ ಅವಕಾಶ ನೀಡಲಾಗಿತ್ತು. ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳಿವೆ. ಹೀಗಾಗಿ ಅವರಿಗೆ ಅವಕಾಶ ಸಿಗಲಿಲ್ಲ. ಕೊನೆಗೆ ಕುಮಾರಸ್ವಾಮಿ ಅವರಿಗೆ ಅವಕಾಶ ಸಿಕ್ಕಿತು. ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 40 ನಿಮಿಷ ಇದ್ದು ನನಗೆ ಶಕ್ತಿ ತುಂಬಿದರು. ನಾನು ಯಾವುದೇ ದೊಡ್ಡ ನಾಯಕ ಅಲ್ಲ. ಕೇವಲ ಕಾರ್ಯಕರ್ತ ಅಷ್ಟೇ. ಆದರೂ ಅವರು ನನಗೆ ಧೈರ್ಯ ತುಂಬಿದರು. ಅವರಿಗೆ ನಾನು ಸದಾ ಋಣಿಯಾಗಿರುತ್ತೇನೆ.

     ಅಧಿಕಾರ ಇದ್ದಾಗ ಯಾರು ಇರ್ತಾರೆ ಎಂಬುದು ಮುಖ್ಯವಲ್ಲ. ಸಂಕಷ್ಟದ ಸಂದರ್ಭದಲ್ಲಿ ಯಾರು ನಿಲ್ಲುತ್ತಾರೆ ಎಂಬುದು ಮುಖ್ಯ. ನಾನು ಬಂಧನವಾದಾಗ ಕಾಶ್ಮೀರದಿಂದ, ಕನ್ಯಾಕುಮಾರಿವರೆಗೆ ಕಾರ್ಯಕರ್ತರು ಬೆಂಬಲ ನೀಡಿದರು. ಕೇರಳದಲ್ಲಿ ಪಂಜಿನ ಮೆರವಣಿಗೆ ಮಾಡಿದರು. ಗುಜರಾತ್, ಅಸ್ಸಾಂನಲ್ಲಿ ಪ್ರತಿಭಟನೆ ಮಾಡಿದರು. ಕೋರ್ಟ್ ವಿಚಾರಣೆ ನಡೆಯುತ್ತಿದ್ದಾಗ ಸಾವಿರಾರು ಜನ ಬಂದು ಕಾಯುತ್ತಿದ್ದರು. ಅವರಿಗೆ ಊಟವನ್ನೂ ಕೊಡಲು ನಮ್ಮಿಂದ ಆಗಲಿಲ್ಲ. ಕಾನೂನು ಪ್ರಕ್ರಿಯೆಯಲ್ಲೇ ನಾವು ಮುಳುಗಿ ಹೋಗಿದ್ದೆವು. ಆದರೂ ರೈಲಿನಲ್ಲಿ ಬಂದು, ಅಲ್ಲೇ ರೂಮ್ ಮಾಡಿಕೊಂಡು, ನಡು ರಸ್ತೆಯಲ್ಲಿ ಬಿಸಿಲಲ್ಲಿ ನಿಂತು ನನಗಾಗಿ ಕಾದರು. ನನ್ನ ಬೆಂಬಲಕ್ಕೆ ನಿಂತರು. ಅವರಿಗೆ ಯಾವ ರೀತಿ ನಾನು ಋಣ ತೀರಿಸಬೇಕು ಎಂದು ಗೊತ್ತಾಗುತ್ತಿಲ್ಲ.

    ನಮ್ಮ ಕಾರ್ಯಕರ್ತರು, ನಾಯಕರಿಗೆ ಶಿವಕುಮಾರ್ ತಪ್ಪು ಮಾಡಿಲ್ಲ ಎಂಬ ಒಂದು ನಂಬಿಕೆ ಇದೆ. ನಾನು ತಪ್ಪು ಮಾಡಿದ್ದರೆ ದೇವರು, ನಮ್ಮ ದೇಶದ ಕಾನೂನು ಶಿಕ್ಷೆ ನೀಡಲಿ. ಅದನ್ನು ತಲೆ ಬಾಗಿ ಸ್ವೀಕರಿಸುತ್ತೇನೆ.

     ನಿನ್ನೆ ಇಡಿ ಅಧಿಕಾರಿಗಳು ಜಾಮೀನು ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನನ್ನ ವಿರುದ್ಧ ತನಿಖೆ ನಡೆಸಲು ಸಿಬಿಐ ಅನುಮತಿ ಕೇಳಿದ್ದು, ಕೆಲವೇ ಕ್ಷಣಗಳಲ್ಲಿ ಅನುಮತಿ ನೀಡಲಾಗಿದೆ. ನೀಡಲಿ ತೊಂದರೆ ಇಲ್ಲ. ವಿಚಾರಣೆ ಎದುರಿಸಲು ನಾನು ಸಿದ್ಧನಿದ್ದೇನೆ. ತಪ್ಪು ಮಾಡಿದ್ದರೆ ನೇಣು ಹಾಕಲಿ, ಎಷ್ಟು ವರ್ಷ ಬೇಕಿದ್ದರೂ ಜೈಲಿಗೆ ಹಾಕಲಿ. ನಾನು ದೆಹಲಿಯಲ್ಲಿದ್ದಾಗ ಸುಮ್ಮನೆ ಕೂತಿಲ್ಲ. ಕಾನೂನಿನ ಪ್ರತಿ ಸೆಕ್ಷನ್ ಓದಿದ್ದೇನೆ, ಈ ವಿಚಾರಣೆಗಳನ್ನು ಹೇಗೆ ಎದುರಿಸಬೇಕು ಅಂತಾ ನನಗೆ ಗೊತ್ತಿದೆ.

    ಆದರೆ ನನ್ನ ತಾಯಿ, ನನಗೆ ಜನ್ಮ ಕೊಟ್ಟವಳು. ಆಕೆ ನನ್ನ ನಂಬದೆ ಯಾರನ್ನು ನಂಬಬೇಕು? ನಾನು ಅವರಿಗೆ ಮಾರ್ಗದರ್ಶನ ನೀಡದೇ ಯಾರು ನೀಡಬೇಕು? ತಾಯಿಗೆ ಮಗ ಬೇನಾಮಿದಾರ ಎಂದು ಬಿಂಬಿಸಿದ್ದಾರೆ. ನ್ಯಾಯಾಲಯದ ಪೀಠದಿಂದ ಅನ್ಯಾಯ ಹೊರಬರಬಾರದು ಎಂದು ಸದಾ ಹೇಳುತ್ತಲೇ ಇರುತ್ತೇನೆ.

    ನನ್ನ ಪ್ರಕರಣವೊಂದೇ ಸಾಕು. ಇದು ದೇಶದಲ್ಲೇ ಒಂದು ದೊಡ್ಡ ಪ್ರಕರಣವಾಗಲಿದೆ. ಅಧಿಕಾರಿಗಳಿಗೆ ಕೇಳುವುದೆಂದರೆ, ನನ್ನ ಮೇಲೆ ಏನು ಪ್ರಯೋಗ ನಡೆಯುತ್ತಿದೆ, ಅದು ಎಲ್ಲರ ಮೇಲೂ ಆಗುತ್ತದೆಯೋ? ಇದನ್ನು ಕಾದು ನೋಡಬೇಕು. ನನ್ನ ಸಣ್ಣ ಹೆಜ್ಜೆಯಿಂದ ದೊಡ್ಡ ನಡೆವರೆಗೂ ಎಲ್ಲದರ ಮೇಲೂ ಕಣ್ಣಿಟ್ಟಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ನಾನು ಸಂಸದರಿಗೆ ಫೋನ್ ಕೊಟ್ಟೆ. ನಮ್ಮ ರಾಜ್ಯಕ್ಕೆ ಹಾಗೂ ಇಲಾಖೆಗೆ ಸಹಕಾರ ನೀಡಿದ ಸಚಿವರುಗಳು ಹಾಗೂ ಸಂದಸದರಿಗೆ ಉತ್ತಮ ಭಾವನೆಯಿಂದ ಉಡುಗೊರೆ ನೀಡಿದೆ. ಬಿಜೆಪಿ ನಾಯಕರು ಸೇರಿದಂತೆ ಅನೇಕರು ಅದನ್ನು ಸ್ವೀಕರಿಸಿದರು.

     ಅದೇ ರೀತಿ ಜಲಸಂಪನ್ಮೂಲ ಸಚಿವನಾಗಿದ್ದಾಗಲು ನೀಡಲು ಮುಂದಾದೆ, ತಕ್ಷಣವೇ ನನಗೆ ತೆರಿಗೆ ಇಲಾಖೆಯಿಂದ ನೋಟೀಸ್ ಬಂತು. ಹೀಗಾಗಿ ನಾನು ಇಲಾಖೆಯಿಂದ ನೀಡದೇ ನನ್ನ ವೈಯಕ್ತಿಕ ಖಾತೆಯಿಂದ ಹಣ ನೀಡಿ ಉಡುಗೊರೆ ಕೊಟ್ಟೆ. ಕೇವಲ ಮೂರು ಜನ ಮಾತ್ರ ಅದನ್ನು ಸ್ವೀಕರಿಸಲಿಲ್ಲ. ಆದರೆ ಅಂದು ಉಡುಗೊರೆ ಸ್ವೀಕರಿಸಿದ್ದವರು ಇಂದು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನನ್ನ ಜತೆ ಸಣ್ಣಪುಟ್ಟ ವ್ಯವಹಾರ ಮಾಡಿದ್ದವರಿಗೆ ನೋಟೀಸ್ ಕೊಟ್ಟಿರುವ ಅಧಿಕಾರಿಗಳು ನನ್ನ ಉಡುಗೊರೆ ಪಡೆದವರಿಗೂ ನೋಟೀಸ್ ಕೊಡಬೇಕಿತ್ತು ಅಲ್ಲವೇ?. ಆದರೆ ನಾನು ಅದನ್ನು ಬಯಸುವುದಿಲ್ಲ. ನನ್ನ ಪ್ರತಿ ನಡೆಯನ್ನು ಹೇಗೆ ನೋಡಿದ್ದಾರೆ ಎಂಬುದು ಜನರಿಗೆ ತಿಳಿಸಲು ಈ ವಿಚಾರ ಹೇಳಿದೆ. ವಿಚಾರ ನ್ಯಾಯಾಲಯ ಇರುವುದರಿಂದ ನಾನು ಈ ಸಂದರ್ಭದಲ್ಲಿ ಆ ಬಗ್ಗೆ ಮಾತನಾಡುವುದಿಲ್ಲ.

    ನನ್ನ ಮಗಳ ಆಸ್ತಿ ಬಗ್ಗೆ ಅನೇಕರು ಮಾತನಾಡಿದ್ದಾರೆ, ಯಾರ್ಯಾರು ಏನೇನು ಮಾತನಾಡಿದ್ದಾರೆ ಎಲ್ಲವನ್ನು ನೋಡಬೇಕಿದೆ. ನಾನು ಎಲ್ಲರಿಗೂ ಉತ್ತರ ಕೊಡಬೇಕಿದೆ, ಕೊಡುತ್ತೇನೆ. ನಾನು ಹಿಂದೆ ಹೋಗುವ ಪ್ರಶ್ನೆ ಇಲ್ಲ. ನಾನು ನನ್ನ ಹೋರಾಟ ಮಾಡುತ್ತೇನೆ. ಸಮಯ ಮತ್ತು ಕಾನೂನು ಎರಡೂ ಸರಿಯಾದ ಸಂದರ್ಭದಲ್ಲಿ ಉತ್ತರ ಕೊಡಲಿವೆ. ಆ ಬಗ್ಗೆ ನನಗೆ ವಿಶ್ವಾಸವಿದೆ.

    ನನ್ನ ಮಕ್ಕಳು ಶಾಲೆಗೆ ಹೋದಾಗ ಅವರಿಗೆ ತಮ್ಮ ತಂದೆ ಜೈಲಿಗೆ ಹೋಗಿರುವ ಬಗ್ಗೆ ಬೇರೆ ಮಕ್ಕಳು ಪ್ರಶ್ನೆ ಮಾಡಿದಾಗ ಏನು ಉತ್ತರ ಕೊಡುತ್ತಾರೆ ಎಂದು ಯೋಚಿಸಿದಾಗ ನೋವಾಗುತ್ತದೆ. 86 ವರ್ಷದ ನನ್ನ ತಾಯಿ ದೆಹಲಿಗೆ ಹೋಗಿ ಉತ್ತರ ಕೊಡುವಂತೆ ಮಾಡಿದ್ದಾರೆ. ಅವರಿಗೆ ನೋಟೀಸ್ ಕೊಡಿಸಿದವರ ಪೋಷಕರು, ಮಕ್ಕಳಿಗೆ ಈ ರೀತಿ ಬಂದರೆ ಏನು ಮಾಡ್ತಾರೆ.

    ನನ್ನ ಮನೆಯಲ್ಲಿ 41, ಸುರೇಶ್ ಮನೆಯಲ್ಲಿ 22 ಲಕ್ಷ ಸಿಕ್ಕಿದೆ ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೆ ಸದನದಲ್ಲಿ ಶ್ರೀನಿವಾಸ ಗೌಡರು ಹೇಳಿದ ವಿಚಾರ ಏನಾಯ್ತು? ಇದನ್ನು ಮಾಧ್ಯಮದವರು ಪ್ರಶ್ನಿಸಬೇಕು. ನನ್ನ ಕೃಷಿ ಜಮೀನು ಎಷ್ಟಿದೆ ಗೊತ್ತಾ? ನಾನು ಮೂಲ ಬೆಂಗಳೂರಿಗ. ಆಗಿನ ಬೆಂಗಳೂರು ನಂತರ ಬೆಂಗಳೂರು ಗ್ರಾಮಾಂತರ ಆಗಿ ಈಗ ರಾಮನಗರ ಆಗಿದೆ.

     ನಾನು ಗೌಡರ ವಿರುದ್ಧ ಹೋರಾಡಿದ್ದೇನೆ. ಆದರೆ ರಾಹುಲ್ ಗಾಂಧಿ ಅವರ ಜತೆ ನಿಲ್ಲು ಎಂದಾಗ ನಾನು ನಿಂತಿದ್ದೇನೆ. ಗೌಡರು ಕೂಡ ದೆಹಲಿಗೆ ಬಂದು ಭೇಟಿ ಮಾಡಲು ಕಾದರು. ರೇವಣ್ಣ ನನ್ನ ಜತೆ ಬಾಂಧವ್ಯ ಹೊಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕುಮಾರಸ್ವಾಮಿ ನನ್ನನ್ನು ಸ್ವಾಗತಿಸಿದರು. ರಾಜಕೀಯದಲ್ಲಿ ಯಾವುದು ಶಾಶ್ವತ? ಯಾವ ಪಕ್ಷ ಶಾಶ್ವತ? ಯಾರು ಶಾಶ್ವತ? ಅಧಿಕಾರ ಇಲ್ಲ ಎಂದಾಗ ನಮ್ಮ ನೆರಳು ಕೂಡ ನಮ್ಮ ಹಿಂದೆ ಬರುವುದಿಲ್ಲ. ಇದು ನನಗೆ ಗೊತ್ತಿದೆ. ಅದರಂತೆ ಬದುಕುತ್ತಿದ್ದೇನೆ.

     ಇನ್ನು ನಮ್ಮ ಸ್ವಾಮೀಜಿಗಳು ಬಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಪ್ರತಿಭಟನೆ ವೇಳೆ ನಮ್ಮ ಪರ ಮಾತನಾಡಿದ್ದಾರೆ. ಊರಿಗೆ ಹೋಗಿ ನಿರ್ಮಲಾನಂದ ಶ್ರೀಗಳು ತಾಯಿಗೆ ಧೈರ್ಯ ತುಂಬಿದ್ದಾರೆ. ಅನೇಕ ಬಿಜೆಪಿ ನಾಯಕರು ನನ್ನ ಬೆನ್ನಿಗೆ ನಿಂತಿದ್ದಾರೆ. ಅವರ ಹೆಸರು ಹೇಳಿದರೆ ಅವರಿಗೆ ತೊಂದರೆ ಆಗುತ್ತದೆ. ಹೀಗಾಗಿ ಅವರ ಹೆಸರು ಹೇಳುವುದಿಲ್ಲ.

     ನನ್ನ ಬಂಧನ ಆದಾಗ, ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದಾಗ, ಈಗ ನಾನು ಬಂದಾಗ ಕಾರ್ಯಕರ್ತರ ಮೆರವಣಿಗೆಯಿಂದ ಟ್ರಾಫಿಕ್ ಸಮಸ್ಯೆ ಆಗಿದೆ. ಹೀಗಾಗಿ ಎಲ್ಲದಕ್ಕೂ ನಾನು ಕ್ಷಮೆ ಕೇಳುತ್ತೇನೆ. ಜನ ಈ ರೀತಿ ಹೊರ ಬಂದಾಗ ತೊಂದರೆ ಆಗುವುದು ಸಹಜ. ಪ್ರಜಾಪ್ರಭುತ್ವದಲ್ಲಿ ಇದನ್ನು ನಿಯಂತ್ರಿಸಲು ಆಗುವುದಿಲ್ಲ. ಈ ಸಂದರ್ಭಗಳಲ್ಲಿ ಬಹಳ ಜನರಿಗೆ ಅವರ ವ್ಯವಹಾರಗಳಲ್ಲಿ ನಷ್ಟ ಆಗಿರಬಹುದು, ಅವರು ಹೋಗಬೇಕಾದ ಜಾಗಕ್ಕೆ ತಲುಪಲು ಬಸ್, ವಿಮಾನ ತಪ್ಪಿರಬಹುದು, ಅವರಿಗಾದ ಎಲ್ಲ ತೊಂದರೆಗಳಿಗೆ ನಾನು ಕ್ಷಮೆ ಕೋರುತ್ತೇನೆ.

    ನಾನು ಏನು ತಪ್ಪು ಮಾಡಿದ್ದೇನೆ, ನನಗೆ ಯಾಕೆ ಈ ಪರಿಸ್ಥಿತಿ ಬಂತು ಎಂಬುದನ್ನು ನಾನು ಪರಾಮರ್ಶಿಸುತ್ತಿದ್ದೇನೆ. ನನಗೆ ಸಾಕಷ್ಟು ವಾರ್ನಿಂಗ್ ಬಂದವು. ಈಗ ಆ ಬಗ್ಗೆ ಮಾತನಾಡುವುದಿಲ್ಲ. ನಾನು ತಪ್ಪು ಮಾಡಿದ್ದರೆ ಯಾವುದೇ ತನಿಖೆ ನಡೆಸಲಿ, ಸಿಬಿಐ, ಇಡಿ, ಆದಾಯ ತೆರಿಗೆ ವಿಚಾಣೆ ಮಾಡುತ್ತಿದ್ದು, ಅದನ್ನು ಎದುರಿಸಲು ಸಿದ್ಧ.

     ಉಪಚುನಾವಣೆಯಲ್ಲಿ ನಮ್ಮ ಕಾರ್ಯಧ್ಯಕ್ಷರ ಮಾರ್ಗದರ್ಶನದ ಮೇರೆಗೆ ಕೆಲಸ ಮಾಡುತ್ತೇನೆ. ನನ್ನ ವಿಚಾರಣೆ, ನ್ಯಾಯಾಲಯ ಪ್ರಕ್ರಿಯೆ ಸೇರಿದಂತೆ ನನ್ನ ವೇಳಾಪಟ್ಟಿ ನೋಡಿಕೊಂಡು ದಿನೇಶ್ ಗುಂಡೂರಾಯರು ಯಾವ ಕೆಲಸ ಹೇಳುತ್ತಾರೋ ಅದನ್ನು ಮಾಡುತ್ತೇನೆ.ಇದಕ್ಕೂ ಮುನ್ನ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಆಗಮಿಸುವಾಗ ಮೇರವಣಿಗೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಸಿವಕುಮಾರ್, ಇದು ಕೇವಲ ಆರಂಭ. ಅಂತ್ಯವಲ್ಲ. ಇದು ಒಂದು ದಿನದ ಹೋರಾಟವಲ್ಲ. ನಾನು ಹೆದರಿಕೊಂಡು ಹಿಂದಕ್ಕೆ ಓಡಿ ಹೋಗುವವನಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುತ್ತೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap