ಬೆಂಗಳೂರು
ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಒಳಗಿನ ಹಿತಶತ್ರುಗಳ ವಿರುದ್ಧ ಹೋರಾಟ ಅಸಾಧ್ಯ.ಆ ಕಾರಣದಿಂದ ನಾನು ನನ್ನ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೆ ನಿನ್ನೆ ರಾತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ತಮ್ಮ ಆಪ್ತರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ್ದು. ಇದಕ್ಕೆ ಸಿದ್ದರಾಮಯ್ಯ ಅವರು ತಮ್ಮ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ನನ್ನ ಹೋರಾಟ ಏನಿದ್ದರೂ ಬಿಜೆಪಿ ಪಕ್ಷದ ವಿರುದ್ಧ. ಇದನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ, ಆದರೆ. ಪಕ್ಷದ ಒಳಗಿನ ಹಿತಶತ್ರುಗಳ ವಿರುದ್ಧ ಹೋರಾಟ ಅಸಾಧ್ಯ. ಇದೇ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದು ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ.
ಉಪಚುನಾವಣೆಯಲ್ಲಿ ಪದೇ ಪದೇ ಜೆಡಿಎಸ್-ಕಾಂಗ್ರೆಸ್ ಮರು ಮೈತ್ರಿಯ ಬಗ್ಗೆ ಪ್ರಸ್ತಾಪಿಸಿದ್ದು, ಸೋಲಿಗೆ ಕಾರಣವಾಯಿತು ಎಂದು ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.
ನಿವೃತ್ತಿ ಮಾತು
ತಮ್ಮ ಆಪ್ತರ ಜತೆಗಿನ ಸಭೆಯಲ್ಲಿ ಪದೇ ಪದೇ ಹಿತಶತ್ರುಗಳ ಕಾಟದಿಂದ ಜರ್ಝರಿತನಾಗಿದ್ದೇನೆ. ಚುನಾವಣಾ ರಾಜಕೀಯ ಸಾಕಾಗಿದೆ. 2023ರ ಚುನಾವಣೆಗೆ ನಿಲ್ಲಲ್ಲ. ಅಲ್ಲಿಯವರೆಗೂ ಹೈಕಮಾಂಡ್ ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು ಎನ್ನಲಾಗಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾಯಲ್ಲಿನಿವೃತ್ತಿಯ ಮಾತು ಕೇಳಿ ಆಘಾತಕ್ಕೊಳಗಾದ ಅವರ ಆಪ್ತರು, ನೀವು ಈಗೆಲ್ಲ ಮಾತನಾಡಬೇಡಿ.
ಹೈಕಮಾಂಡ್ನ ಭೇಟಿ ಮಾಡಿ ಎಲ್ಲವನ್ನೂ ಹೇಳೋಣ, ಪಕ್ಷ ಸಂಘಟಿಸೋಣ, ಪಕ್ಷ ಎಂದ ಮೇಲೆ ಹಿತ ಶತ್ರುಗಳು ಇದ್ದೇ ಇರುತ್ತಾರೆ. ಹೈಕಮಾಂಡ್ ಗಮನಕ್ಕೆ ಎಲ್ಲವನ್ನೂ ತಂದು ಮುಂದಿನ ನಡೆ ಏನು ಎಂಬುದನ್ನು ತೀರ್ಮಾನಿಸೋಣ ಎಂದು ಹೇಳಿದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ನಡೆದಿದ್ದು, ಮೂಲ ಕಾಂಗ್ರೆಸ್ಸಿಗರು ತಮ್ಮನ್ನು ವ್ಯವಸ್ಥಿತವಾಗಿ ಮೂಲೆ ಗುಂಪು ಮಾಡಲು ಸಂಚು ರೂಪಿಸಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳದೆ ಇದ್ದದ್ದು, ಸೋಲಿಗೆ ಕಾರಣ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ತಡರಾತ್ರಿಯವರೆಗೂ ನಡೆದ ಈ ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಹಾಗೂ ಶಾಸಕರಾದ ಕೃಷ್ಣಬೈರೇಗೌಡ, ರಿಜ್ವಾನ್ ಅರ್ಷದ್, ವಿ.ಎಸ್. ಉಗ್ರಪ್ಪ, ಭೈರತಿ ಸುರೇಶ್ ಸೇರಿದಂತೆ ಸಿದ್ದರಾಮಯ್ಯನವರ ಹಲವು ಆಪ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
