ಕೊರೋನಾ ಹೊರಾಟದಲ್ಲಿ ಪ್ರಧಾನಮಂತ್ರಿಯನ್ನು ಬೆಂಬಲಿಸುತ್ತೇನೆ : ಹೆಚ್ ಡಿ ದೇವೇಗೌಡ

ಬೆಂಗಳೂರು

     ಕೊರೋನಾ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಇದರ ವಿರುದ್ಧ ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ನಾವು ಬೆಂಬಲ ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಕೋಚ ಇಲ್ಲ. ಸರ್ಕಾರದ ನಿರ್ಧಾರಗಳಿಗೆ ಬೆಂಬಲ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿಗಳು ಮೇ 3 ರವರೆಗೂ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಕೋರೋನಾ ನಿಯಂತ್ರಿಸಲು ಮಹಡಿಯ ಮೇಲೆ ನಿಂತು ಶಬ್ಧ ಮಾಡುವುದು. ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಸಂದೇಶದೊಂದಿಗೆ ದೀಪ ಹಚ್ಚುವುದು…ಹೀಗೆ ಪ್ರಧಾನಿ ಗಳ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ರಾಜಕಾರಣ ಬೇರೆ. ಆದರೆ ದೇಶದ ವಿಚಾರದಲ್ಲಿ ನಾವು ಜೊತೆಗಿರುತ್ತೇವೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ದೋಷಗಳಿವೆ. ಅನೇಕ ಕೂಲಿ ಕಾರ್ಮಿಕರು ಕಾಲ್ನಡಿಗೆಯಲಿ ಗುಳೆ ಹೋಗುತ್ತಿದ್ದಾರೆ. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುತ್ತಿಲ್ಲ. ಗುತ್ತಿಗೆದಾರರಿಗೆ ಕಾರ್ಮಿಕರ ರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ಕೊಟ್ಟಿದ್ದರೂ ಅನೇಕ ಕಡೆ ಇದನ್ನು ಪಾಲಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

     ಆರ್ಥಿಕವಾಗಿ ಕೆಲವು ಸಂಕಷ್ಟ ಇದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ವಿಡಿಯೊ ಕಾನ್ಫರೆನ್ಸ್ ಮಾಡಿದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದುವರೆಗೂ ಪ್ರಧಾನಿಯಿಂದ ಯಾವುದೆ ಉತ್ತರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೇರೆ ರಾಷ್ಟ್ರಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ನಮ್ಮ ದೇಶದಲ್ಲಿ ಜನ ಸಂಖ್ಯೆಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ ಇದೆ. ಲಾಕ್ ಡೌನ್‍ನಿಂದಾಗಿ ಬಡವರು ನಾನಾ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಮೋದಿ ಅವರ ಗಮನಕ್ಕೆ ಬಂದಿದೆ. ಕೆಲವರಿಗೆ ಊಟವೂ ಸಿಗುತ್ತಿಲ್ಲ. ದೆಹಲಿ, ಉತ್ತರ ಪ್ರದೇಶ ಹೀಗೆ ಅನೇಕ ಕಡೆಗೆ ಜನ ಗುಳೆ ಹೋಗುತ್ತಿದ್ದಾರೆ. ಮಾಲೀಕರಿಗೆ ಸಂಬಳ ಕೊಡಿ ಎಂದರೂ ಅವರು ಕಾರ್ಮಿಕರಿಗೆ ಕೊಡುತ್ತಿಲ್ಲ. ಸರ್ಕಾರದ ಸೂಚನೆಯನ್ನು ಕಟ್ಟಡ ಮಾಲೀಕರು ಪಾಲನೆ ಮಾಡಿಲ್ಲ. ಅನೇಕ ರಾಜ್ಯದಲ್ಲಿ ಇದು ಜಾರಿಗೆ ಬಂದಿಲ್ಲ. ಕೆಲ ರಾಜ್ಯದಲ್ಲಿ ಮಾತ್ರ ಇದು ಜಾರಿಗೆ ಬಂದಿದೆ ಎಂದು ಹೇಳಿದರು.

     ದೆಹಲಿಯಲ್ಲಿ 5 ಸಾವಿರ, ಬೇರೆ ಕಡೆ 2 ಸಾವಿರ ಕೊಡುತ್ತಿದ್ದಾರೆ. ಕೆಲವು ಕಡೆ ಕಾರ್ಮಿಕರಿಗೆ ಸಂಬಳ ಕೊಡುತ್ತಿಲ್ಲ. ನಾಳೆ ಕೆಲ ಘೋಷಣೆ ಮಾಡುವುದಾಗಿ ಪ್ರಧಾನಿ ಹೇಳಿದ್ದಾರೆ. ನಾಳಿನ ಘೋಷಣೆ ನೋಡಿಕೊಂಡು ಏನು ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಪ್ರಧಾನಿಗಳು ಘೋಷಣೆ ನಂತರ ನಾನು ಮಾತಾಡುತ್ತೇನೆ ಎಂದು ಹೇಳಿದರು.

     ಪ್ರಧಾನಿಗೆ ಬರೆದಿರುವ ನನ್ನ ಪತ್ರಕ್ಕೆ ಇನ್ನು ಉತ್ತರ ಬಂದಿಲ್ಲ. ನಾನು ಕೇವಲ ನಮ್ಮ ರಾಜ್ಯಕ್ಕಾಗಿ ಪತ್ರ ಬರೆದಿಲ್ಲ. ಎಲ್ಲಾ ರಾಜ್ಯದ ವಿಚಾರ ಗ್ರಹಿಸಿ ಪತ್ರ ಬರೆದಿದ್ದೇನೆ. ಪತ್ರದಲ್ಲಿ ನನ್ನ ಅನುಭವದ ಅನೇಕ ಸಲಹೆ ನೀಡಿದ್ದೇನೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link