ಇಲಾಖೆ ಹೆಸರಿಗೆ ಕಳಂಕ ತರಲು ನನಗೆ ಇಷ್ಟವಿಲ್ಲ : ಮೊಕಾಶಿ

ಮಧುಗಿರಿ

     ಕಳೆದ 9 ತಿಂಗಳಿನಿಂದ ಪಿಡಿಓ ಮೊಕಾಶಿ ಬೇಡತ್ತೂರು ಗ್ರಾಪಂ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆಂದು ತಾಪಂ ಇಓ ನಂದಿನಿ ಅಭಿಪ್ರಾಯಪಟ್ಟರು.

     ಪಟ್ಟಣದ ತಾಪಂ ಕಚೇರಿಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮೊಕಾಶಿರವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೌಲಸಾಬ್ ಮೊಕಾಶಿ ಸುಮಾರು 17 ವರ್ಷ ಭಾರತೀಯ ಸೈನ್ಯದ ಮರಾಠ ಇನ್‍ಫೆಂಟ್ರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಂತರ ಸರಕಾರಿ ನೌಕರರ ಉದ್ಯೋಗ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾಣಿಜ್ಯ ಇಲಾಖೆಯಲ್ಲಿ ವೃತ್ತ್ತ ನಿರೀಕ್ಷಕರಾಗಿ ಕೆಲ ತಿಂಗಳು ಹಾಗೂ ಪಿಡಿಓ ಆಗಿ ಸುಮಾರು 9 ತಿಂಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ ಎಂದರು.

      ಈ ಕಾಲಾವಧಿಯಲ್ಲಿ ಬೇಡತ್ತೂರು ಗ್ರಾಪಂನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇವರ ರಾಜೀನಾಮೆ ಹಿಂಪಡೆಯುವ ಬಗ್ಗೆ ಕೆಲ ಸಹಪಾಠಿಗಳು ಇಷ್ಟು ಬೇಗ ಇಂತಹ ನಿರ್ಣಯಗಳಿಗೆ ಕೈ ಹಾಕುವುದು ಬೇಡ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಆದರೂ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿರುವುದು ಆಶ್ಚರ್ಯ ತಂದಿದೆ. ಅವರ ಮತ್ತು ಕುಟುಂಬದ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

     ಪಿಡಿಓ ಮೌಲಸಾಬ್ ಮೊಕಾಶಿ ಮಾತನಾಡಿ, ನಾನು ಹೊರ ಜಿಲ್ಲೆಯಾದ ಬಿಜಾಪುರದ ಬಿಜ್ಜರಿಗೆ ಗ್ರಾಮದ ವಾಸಿಯಾಗಿದ್ದು, ನನ್ನ ಕುಟುಂಬದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಇಲ್ಲಿ ಸೇವೆ ಸಲ್ಲಿಸಲು ಆಗುತ್ತಿಲ್ಲ. ನಾನು ಸಾರ್ವಜನಿಕರ ಸೇವೆ ಮಾಡುವ ಉದ್ದೇಶದಿಂದ ಈ ಇಲಾಖೆಗೆ ಬಂದೆ. ಮಾಸಿಕ ವೇತನ ಪಡೆಯುವ ಇಲಾಖೆಯ ಹೆಸರಿಗೆ ಕಳಂಕ ತರುವಂತಹ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಲು ನನಗೆ ಇಷ್ಟವಿಲ್ಲ.

      ಆದರೆ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಲು ಒಬ್ಬನಿಂದ ಸಾಧ್ಯವಿಲ್ಲ. ಏಪ್ರಿಲ್ 1 ರಂದು ರಾಜೀನಾಮೆ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದೆ. ಯಾವುದೇ ಕಾರಣಕ್ಕೂ ಸಿಹಿಯಾದ ಮಧುಗಿರಿ ಏಕಾಶಿಲಾ ಪರ್ವತವನ್ನು ನಾ ಮರೆಯಲಾರೆ. ಇಷ್ಟೂ ತಿಂಗಳು ನನಗೆ ಕಾರ್ಯ ನಿರ್ವಹಿಸಲು ಸಹಕರಿಸಿದ ತಾಪಂ ಅಧಿಕಾರಿಗಳ ವರ್ಗ ಹಾಗೂ ಸಹಪಾಠಿಗಳು ಮತ್ತು ಗ್ರಾಮಸ್ಥರಿಗೆ ಅಭಿನಂದಿಸುವುದಾಗಿ ತಿಳಿಸಿದರು. ಬೀಳ್ಕೊಡುಗೆ ಸಮಾರಂಭದಲ್ಲಿ ಎಡಿಓ ದೊಡ್ಡಸಿದ್ದಪ್ಪ, ಪಿಡಿಓ ಗೌಡಪ್ಪ, ಲಕ್ಷ್ಮೀನಾರಾಯಣ್, ಧನಂಜಯ, ನವೀನ್, ರವಿಚಂದ್ರ, ವೆಂಕಟಾಚಲಪತಿ, ಶಿವಕುಮಾರ್, ಸುಬ್ಬರಾಜ್ ಅರಸ್, ರಮೇಶ್, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap