ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಈ ಜಿಲ್ಲೆಯ ಜನತೆ ನನಗೆ ಮಾಡಿಕೊಟ್ಟಿದ್ದು, ನನ್ನ ಅವಧಿಯಲ್ಲಿ ನಾನು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದ್ದು, ಜಿಲ್ಲೆಯ ಜನರ ವಿಶ್ವಾಸವನ್ನು ಗಳಿಸಿದ ನಾನು ಮತ್ತೊಮ್ಮೆ ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಅಭಿಲಾಷೆಯನ್ನು ಹೊಂದಿದ್ದೇನೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಚಿತ್ರನಟ ಶಶಿಕುಮಾರ್ ತಿಳಿಸಿದರು.
ಅವರು, ಗುರುವಾರ ಇಲ್ಲಿನ ಕಾಟಪ್ಪನಹಟ್ಟಿಯ ಖಾಸಗಿ ಗೃಹದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಹ ವ್ಯಕ್ತ ಪಡಿಸಿದರು. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟದ ಸರ್ಕಾರ ಆಡಳಿತ ನಡೆಸುತ್ತಿದ್ದು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲೂ ಸಹ ಮೈತ್ರಿ ಮುಂದುವರೆದಿದೆ. ನಾನು ಈ ಹಿಂದೆಯೇ ಈ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಪಕ್ಷದ ಮುಖಂಡರಲ್ಲಿ ಹಲವಾರು ಬಾರಿ ಮನವಿ ಮಾಡಿದರೂ ಕೊನೆ ಗಳಿಗೆಯಲ್ಲಿ ನನಗೆ ಟಿಕೇಟ್ ನೀಡಲಿಲ್ಲ.
ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಮುಖಂಡರು ನನಗೆ ಭರವಸೆ ನೀಡಿ ಕೊನೆ ಹಂತದಲ್ಲಿ ಟಿಕೇಟ್ ನೀಡುವಲ್ಲಿ ವಿಫಲವಾದರು. ಪ್ರಸ್ತುತ ಮೈತ್ರಿ ಕೂಟದ ಸರ್ಕಾರದ ಬಗ್ಗೆ ರಾಜಕೀಯ ಕ್ಷೇತ್ರವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲವೆಂಬ ಅಭಿಪ್ರಾಯ ಜನರಲ್ಲಿದೆ. ಎರಡೂ ಪಕ್ಷಗಳ ಮುಖಂಡರೂ ಸಹ ಮುಂದಿನ ಸರ್ಕಾರದ ಅವಧಿಯ ಬಗ್ಗೆ ನಿರ್ಧಿಷ್ಟವಾಗಿ ಏನನ್ನೂ ಹೇಳಲು ಬಯಸುತ್ತಿಲ್ಲ. ನಾನು ಸಹ ಮುಂದಿನ ದಿನಗಳ ಬೆಳವಣಿಗೆ ನೋಡಿಕೊಂಡು ಹೆಜ್ಜೆ ಇಡುತ್ತೇನೆಂದರು.
ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಬಹುತೇಕ ರಾಜಕೀಯ ತಜ್ಞರು ಈ ಸರ್ಕಾರದ ಅಳಿವು, ಉಳಿವಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಜನರ ಮನದಲ್ಲಿ ಯಾವ ಸರ್ಕಾರದ ಆಡಳಿತ ಒಳ್ಳೆಯದ್ದು ಎಂಬ ಬಗ್ಗೆ ಅರಿವಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಜಯಭೇರಿ ಬಗ್ಗೆ ಖಚಿತವಾದ ಅಭಿಪ್ರಾಯ ಎಲ್ಲೂ ವ್ಯಕ್ತವಾಗಿಲ್ಲ. ನಾನು ಸಹ ಈ ಸರ್ಕಾರದ ಸ್ಥಿತಿಗತಿಗಳನ್ನು ನೋಡಿ ಮುಂಬರುವ ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ಬಗ್ಗೆ ತೀರ್ಮಾನಕೈಗೊಳ್ಳುತ್ತೇನೆಂದರು. ಈ ಸಂದರ್ಭದಲ್ಲಿ ವಳ್ಳಿಪ್ರಕಾಶ್, ಲಕ್ಷ್ಮಣನಾಯಕ, ರಾಘವೇಂದ್ರ, ಪ್ರಭು, ಕಬೀರ, ಕೆ.ಎಂ.ಜಗದೀರ್ಶ, ನಾಗೇಶ್‍ನಾಯಕ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ