ಹುದ್ದೆ ಭರ್ತಿಗೆ, ಹಳೇ ಪಿಂಚಣಿಗೆ ಧ್ವನಿಯಾಗುವೆ

ದಾವಣಗೆರೆ:

      ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಸರ್ಕಾರ ತಕ್ಷಣವೇ ಭರ್ತಿ ಮಾಡಬೇಕು ಹಾಗೂ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಬರುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭರವಸೆ ನೀಡಿದರು.

     ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲೆಯ ನೂತನ ಸಚಿವರು ಮತ್ತು ಶಾಸಕರ ಸನ್ಮಾನ ಸಮಾರಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ರಾಜ್ಯದಲ್ಲಿ ಸುಮಾರು 82 ಸಾವಿರ ಹುದ್ದೆಗಳು ಖಾಲಿ ಇವೆ. ಹತ್ತು ನೌಕರರು ಕೆಲಸ ಮಾಡುವ ಜಾಗದಲ್ಲಿ ಕೇವಲ ಐವರು ನೌಕರರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನೌಕರರಲ್ಲಿ ಕಾರ್ಯದೊತ್ತಡ ಹೆಚ್ಚಿದೆ. ಆದ್ದರಿಂದ ತಕ್ಷಣವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಗಮನ ಹರಿಸಬೇಕು ಹಾಗೂ ನೌಕರರಿಗೆ ಹಳೇಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಬರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

     ಶಾಸಕಾಂಗ ಹಾಗೂ ಕಾರ್ಯಾಂಗ ಎರಡು ಸಂಪರ್ಕ ಕೊಂಡಿಗಳಿದ್ದ ಹಾಗೇ. ಇವೆರಡೂ ಒಂದಾಗಿ ಕೆಲಸ ಮಾಡಿದರೆ, ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಶಾಸಕರು ಯೋಜನೆಗಳನ್ನು ರೂಪಿಸಬಹುದು. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ನೌಕರರ ಮೇಲಿದೆ. ಹೀಗಾಗಿ ದೇಶದ ಪ್ರಗತಿಯಲ್ಲಿ ನೌಕರರ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನೌಕರರು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು

     ಇನ್ನೂ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದೇಶಕ್ಕೆ ಆಸ್ತಿಯನ್ನಾಗಿ ಮಾಡಬೇಕು. ಪ್ರೋತ್ಸಾಹದ ಕೊರತೆಯಿಂದ ಎಷ್ಟೋ ಮಕ್ಕಳು ಶಾಲಾ-ಕಾಲೇಜುಗಳನ್ನು ಬಿಟ್ಟು ಊರುಗಳ ಕಡೆ ಮುಖ ಮಾಡಿದ್ದಾರೆ. ಆದ್ದರಿಂದ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಶಿಕ್ಷಕರು ಸೂಕ್ತ ಪ್ರೋತ್ಸಾಹ ನೀಡಬೇಕು. ಆದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದು ಹೇಳಿದರು.

     ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ನಾವು ಸಹ ಸರ್ಕಾರಿ ಸಂಬಳ ಪಡೆಯುತ್ತಿದ್ದೇವೆ. ನಾವು ಸಹ ನಿಮ್ಮಗಳ ಸೇವಕರು. ನಮ್ಮನ್ನು ಕರೆಸಿ ಹಾರ, ತೂರಾಯಿ ಹಾಕಿ ಬರೀ ಸನ್ಮಾನ ಮಾಡದೇ, ನಮ್ಮಿಂದ ಆಗಬಹುದಾದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಸರ್ಕಾರಿ ನೌಕರರಿಗೆ ಅನ್ಯಾಯವಾದರೆ, ಸದಾ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದರು.

     ಪ್ರತಿಭಾವಂತ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಹುದ್ದೆಗಳನ್ನು ಪಡೆಯುವಂತೆ ಆಗಬೇಕು. ಅದಕ್ಕೆ ಪ್ರೋತ್ಸಾಹ ನೀಡಬೇಕು. ಇನ್ನೂ ಪ್ರತಿಭಾ ಪುರಸ್ಕಾರಕ್ಕೆ ನನ್ನ ಒಂದು ತಿಂಗಳ ಸಂಬಳವನ್ನು (50 ಸಾವಿರ ರೂಪಾಯಿಗಳನ್ನು) ಮುಂದಿನ ಬಾರಿ ನೀಡಲಾಗುವುದು ಎಂದರು.

       ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ರಾಜ್ಯ ಸರ್ಕಾರಿ ನೌಕರರಿಯಲ್ಲಿರುವ 1.50 ಲಕ್ಷ ನೌಕರರು 2006ರಲ್ಲಿ ಜಾರಿಗೆ ಬಂದ ಹೊಸ ಪಿಂಚಣಿ ಯೋಜನೆಗೆ ಸೇರಿದ್ದು, ಅವರಿಗೆ ಹಳೆ ಪಿಂಚಣಿ ಯೋಜನೆ ನೀಡಬೇಕು. ಹೊಸ ಪಿಂಚಣಿ ಯೋಜನೆಗಾಗಿ ಸರ್ಕಾರ ಶೇ.10ರಷ್ಟು ಮತ್ತು ನೌಕರರಿಂದ ವೇತನದಲ್ಲಿ ಶೇ.10ರಷ್ಟು ಹಣ ಮುರಿದುಕೊಳ್ಳುತ್ತಿದ್ದು, ಇದರಿಂದ 12 ಸಾವಿರ ಕೋಟಿಯಷ್ಟು ಹಣ ಸರ್ಕಾರದಲ್ಲಿ ಇದ್ದು, ಎಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎನ್ನುವ ಕುರಿತು ಮಾಹಿತಿಯೇ ಇಲ್ಲ. ಈಗಾಗಲೇ ಎನ್‍ಪಿಎಸ್‍ಗೆ ಒಳಪಡುವ 600 ನೌಕರರು ಮರಣ ಹೊಂದಿದ್ದಾರೆ. ಅವರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

      ಇದೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಸಕರಿಗೆ ಸನ್ಮಾನ ನೀಡಿ ಗೌರವಿಸಲಾಯಿತು

      ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ  ಎಸ್.ಹಾಲೇಶಪ್ಪ,  ಮಾಲತೇಶ್ ವೈ.ಅಣ್ಣಿಗೇರಿ, ಕೋಶಾ` ಸಿ.ಎಸ್.ಷಡಾಕ್ಷರಿ,  ವಿ.ಎಂ.ನಾರಾಯಣ ಸ್ವಾಮಿ, ಎ.ಪುಟ್ಟಸ್ವಾಮಿ, ಸಿ.ಪರಶುರಾಮಪ್ಪ, ಕೃಷ್ಣಮೂರ್ತಿ, ಬಿ.ಮಂಜುನಾಥ್, ಬಿ.ಆರ್.ತಿಪ್ಪೇಸ್ವಾಮಿ, ಎಸ್.ಆನಂದಪ್ಪ, ಎಚ್.ಡಿ.ನಾಗರಾಜ್, ಎಂ.ವಿ.ಹೊರಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap