ಹೊಳಲ್ಕೆರೆ:
ಮುಂಬರುವ ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಸರ್ಕಾರದಿಂದ ಎಷ್ಟು ಕೋಟಿ ಹಣವನ್ನಾದರು ನಾನು ತರುತ್ತೇನೆ ಎಲ್ಲಿಯು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನಿಗಾ ವಹಿಸಬೇಕೆಂದು ಶಾಸಕ ಎಂ.ಚಂದ್ರಪ್ಪ ಗ್ರಾಮ.ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳ(ಪಿಡಿಓಗಳ) ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೆ ಬೇಸಿಗೆ ಸಮೀಪಿಸಿದಂತೆ ಹಲವಾರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕುಸಿದಿದೆ. ನೀರು ಭೂಮಿಯ ಆಳಕ್ಕೆ ಹೋಗಿರುವುದರಿಂದ ಈಗಿರುವ ಕೊಳವೆ ಬಾವಿಗಳಿಗೆ ಹೆಚ್ಚುವರಿ ಪೈಪುಗಳನ್ನು ಅಳವಡಿಸಿ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಪಿಡಿಓಗಳಿಗೆ ಶಾಸಕರು ತಿಳಿಸಿ ಈ ಕರ್ತವ್ಯದಲ್ಲಿ ಲೋಪವೆಸಗಿದವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮತೆಗೆದುಕೊಳ್ಳುತ್ತೇನೆ. ಜೊತೆಗೆ ಅಂತಹವರನ್ನು ಸೇವೆಯಿಂದ ಅಮಾನತ್ತು ಮಾಡಲಾಗುವುದು ಎಂದು ಶಾಸಕರು ಕಟುವಾಗಿ ತಿಳಿಸಿದರು.
ಇಡೀ ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ಸೂಳೆಕೆರೆಯಿಂದ ಎರಡು ಕಡೆ ಪೈಪ್‍ಲೈನ್ ಮಾಡಲಾಗಿದ್ದು ಸುಮಾರು 12 ಸಾವಿರ ದಶಲಕ್ಷ ಲೀಟರ್ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಶಾಸಕರು ತಿಳಿಸಿ ಯಾವಾ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ತಲೆದೂರಿರುವ ಬಗ್ಗೆ ತಕ್ಷಣವೇ ಟಾಸ್ಕ್ ಫೋರಸ್ ಸಮಿತಿಗೆ ತಿಳಿಸುವುದಲ್ಲದೆ ತಮ್ಮ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.
ಪ್ರತಿ ಗ್ರಾಮ ಪಂಚವಾಯಿತಿಯ ಪಿಡಿಓಗಳು 24 ಗಂಟೆ ತಮ್ಮ ಸ್ವಸ್ಥಾನದಲ್ಲಿ ಹಾಜರಿರಬೇಕು. ಯಾವಾಗ ಕುಡಿಯುವ ನೀರಿನ ಸಮಸ್ಯೆಗಳು ಉಂಟಾದರೆ ಅದಕ್ಕೆಲ್ಲ ನೀವೆ ಭಾಗಿಗಳಾಗುತ್ತೀರಾ ಇದು ನಿಮ್ಮ ಗಮನದಲ್ಲಿರಲಿ. ಸರ್ಕಾರ ತಮಗೆ ಸಾಕಷ್ಟು ವೇತನ ನೀಡುತ್ತಿದೆ. ನಿಮ್ಮ ಜೀವನ ಸುಖಮಯವಾಗಿದೆ. ಈ ದೃಷ್ಟಿಯಿಂದ ಸರ್ಕಾರಕ್ಕಾಗಲಿ ಸಾರ್ವಜನಿಕರಾಗಲಿ ಯಾವುದೇ ದ್ರೋಹ ವಂಚನೆ ಮತ್ತು ಮೋಸ ಮಾಡದೆ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯವನ್ನು ಇಚ್ಚಾಶಕ್ತಿತಯಿಂದ ನಿರ್ವಹಿಸಬೇಕೆಂದು ಶಾಸಕರು ಪಿಡಿಓಗಳಿಗೆ ಕಿರು ನೀರಾವರಿ ಇಂಜಿನಿಯರ್‍ಗಳಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಸರ್ಕಾರಿ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.
ಎರಡನೇ ಹಂತದಲ್ಲಿ ಸೂಳೆಕೆರೆಯಿಂದ 165 ಕೋಟಿ ರೂ. ವೆಚ್ಚದಲ್ಲಿ ಚನ್ನಗಿರಿ ತಾಲ್ಲೂಕಿಗೆ ಸೇರಿದ 70 ಹಳ್ಳಿ ಮತ್ತು ಹೊಳಲ್ಕೆರೆ ತಾಲ್ಲೂಕಿನ 16 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಈಗಾಗಲೆ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ ಈ ಭಾಗದಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಿ ಜನರ ಮತ್ತು ಜಾನುವಾರುಗಳ ದಾಹವನ್ನು ಇಂಗಿಸುವ ಕರ್ತವ್ಯದಲ್ಲಿ ಪ್ರತಿಯೊಬ್ಬರು ಭಾಗಿಗಳಾಗಬೇಕು. ಅಗತ್ಯವಿದ್ದಲ್ಲಿ ಯಾವ ಹಳ್ಳಿಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇಲ್ಲ ಅಂತಹ ಗ್ರಾಮಗಳ ಸಮೀಪದಲ್ಲಿ ಜಲ ಶಿಲ್ಪಿಗಳಿಂದ ನೀರಿನ ಲಭ್ಯತೆಯನ್ನು ಗುರುತಿಸಿ ಅಂತಹ ಕಡೆ ಪಂಪುಗಳನ್ನು ಅಳವಡಿಸಬೇಕು. ಜೊತೆಗೆ ಈ ಪಂಪ್‍ಸೆಟ್‍ಗಳಿಗೆ ಉತ್ತಮ ಗುಣಮಟ್ಟದ ಪರಿಕರಗಳನ್ನು ಹಾಕಬೇಕು. ನೆಲದೊಳಗೆ ಕನಿಷ್ಟ 2 ಅಡಿ ಆಳದಲ್ಲಿ 6 ಇಂಚು ಒಳ್ಳೆ ಗೇಜಿನ ಪೈಪುಗಳನ್ನು ಅಳವಡಿಸಬೇಕು. ಕನಿಷ್ಟ ದರ್ಜೆಯ ಪೈಪುಗಳನ್ನು ಬಳಸಿದಲ್ಲಿ ಅಂತಹ ಅಧಿಕಾರಿಗಳ ವಿರುಧ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು.
ಚನ್ನಗಿರಿ ಮೂಲಕ ಬರುವ ನೀರಿನ ಸರಬರಾಜನ್ನು ದುಮ್ಮಿ, ಕಾಲ್ಕೆರೆ, ದೊಗ್ಗನಾಳ್, ತುಪ್ಪದಹಳ್ಳಿ ಮುಂತಾದ ಕಡೆಗೆ ಹರಿಸಲು ದುಮ್ಮಿ ಗುಡ್ಡದ ಮೇಲೆ ಓವರ್‍ಹೆಡ್ ಟ್ಯಾಂಕ್ ನಿರ್ಮಿಸಿ ಆ ಮೂಲಕ ಆಭಾಗದ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು. ಅದೇ ಪೈಪಿನಿಂದ ಕುಡಿನೀರಕಟ್ಟೆ ಕೆರೆಯ ಪಕ್ಕದಲ್ಲಿರುವ ಗುಡ್ಡದ ಮೇಲೆ 5 ಲಕ್ಷ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್‍ನ್ನು ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಬಿದುರ್ಗ ಹೋಬಳಿಗೆ ಸೇರಿದ ಎಲ್ಲಾ ಗ್ರಾಮಗಳಿಗೆ ಮೊದಲ ಹಂತದ ಸೂಳೆ ಕೆರೆಯಿಂದ ಪೂರೈಕೆ ಆಗುವ ಕುಡಿಯುವ ನೀರನ್ನು ಹರಿಸುವ ಬಗ್ಗೆ ಈಗಾಗಲೆ ಯೋಜನೆ ತಯಾರಾಗಿದ್ದು ಕೆಲವು ಗ್ರಾಮಗಳಿಗೆ ಸದ್ಯ ನೀರನ್ನು ಪೈಪುಗಳ ಮೂಲಕ ಒದಗಿಸಲಾಗಿದೆ. ಉಳಿದ ಗ್ರಾಮಗಳಿಗೆ ಅಲ್ಲಿಂದ ಪೈಪುಗಳ ಮೂಲಕ ನೀರನ್ನು ಹರಿಸುವ ಕೆಲಸ ಅತಿ ಶೀಘ್ರದಲ್ಲಿ ಕೈಗೊಳ್ಳಲಿದೆ ಎಂದು ಆ ಭಾಗದ ನಾಗರೀಕರಿಗೆ ತಿಳಿಸಿದ್ದಲ್ಲದೆ ಈ ಭಾಗದ ಗ್ರಾಮ ಪಂಚಾಯಿತಿಯ ಪಿಡಿಓಗಳು ಹಗಲು ರಾತ್ರ ಎನ್ನದೆ ನಾಗರೀಕರಿಗೆ ಸಕಾಲದಲ್ಲಿ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಯಾವುದೇ ದೂರು ನಾಗರೀಕರಿಂದ ಬಂದಲ್ಲಿ ಅಂತಹವರನ್ನು ಕೂಡಲೆ ಸೇವೆಯಿಂದ ಬಿಡುಗಡೆ ಮಾಡಬೇಕಾಗುತ್ತದೆ ಶಾಸಕರು ಸೂಚಿಸಿದರು.
ಯಾವುದೇ ಕಾರಣಕ್ಕೂ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರನ್ನು ಯಾವ ಗ್ರಾಮಗಳಿಗೂ ಸರಬರಾಜು ಮಾಡಕೂಡದು. ಎಷ್ಟೇ ಕಷ್ಟವಾದರು ನೀರು ಎಲ್ಲಿ ಲಭ್ಯ ಎಂಬ ಬಗ್ಗೆ ಮಾಹಿತಿಯನ್ನು ಪಡೆದು ಅಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಬೇಕು. ಇದಕ್ಕೆ ಬೇಕಾದ ವಿದ್ಯುತ್ ಸಂಪರ್ಕವನ್ನು ಬೆಸ್ಕಂ ಇಲಾಖೆ ತಕ್ಷಣವೇ ಕಲ್ಪಿಸಬೇಕೆಂದು ಸಭೆಯಲ್ಲಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಶಾಸಕರು ತಾಕೀತು ಮಾಡಿದರು.
ತಾ.ಪಂ. ಅಧ್ಯಕ್ಷೆ ಸುಜಾತ ಧನಂಜಯ್‍ನಾಯ್ಕ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ತಾ.ಪಂ ಸದಸ್ಯ ಆಡನೂರು ಶಿವಕುಮಾರ್ ಇಓ, ಮಹಾಂತೇಶ್, ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
