ದಾವಣಗೆರೆ:
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಟಿಕೇಟ್ ನೀಡಿದರೆ, ತಾವು ಸ್ಪರ್ಧಿಸುವುದಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಕರೆದು ಟಿಕೇಟ್ ನೀಡಿದರೆ, ನಾನು ಸಹ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಸಿದ್ಧನಿದ್ದೇನೆ. ಆದರೆ, ನಾನಾಗಿ ಟಿಕೇಟ್ ಕೊಡಿ ಎಂದು ಕೇಳುವುದಿಲ್ಲ. ಅವರಾಗಿಯೇ ನಿಲ್ಲಿ ಎಂದು ಮನೆ ಬಾಗಿಲಿಗೆ ಟಿಕೇಟ್ ತಂದುಕೊಟ್ಟರೆ ನಿಲ್ಲಲು ತಯಾರಿ ಮಾಡಿಕೊಳ್ಳುತ್ತೇನೆ ಎಂದರು.
ಎಚ್.ಎಂ.ರೇವಣ್ಣ ಸೇರಿದಂತೆ ದಾವಣಗೆರೆಯಿಂದ ಯಾರೇ ಬಂದೂ ಸ್ಪರ್ಧೆ ಮಾಡಬಹುದು. ಅವರನ್ನು ನಾವು ಬೇಡ ಎನ್ನುವುದಿಲ್ಲ. ಎಸ್.ಎಸ್.ಮಲ್ಲಿಕಾರ್ಜುನ್ ನಿಂತು ಗೆದ್ದು ಬರಲಿ ಅವರನ್ನು ಸಹ ಬೇಡ ಎನ್ನುವುದಿಲ್ಲ. ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಬೆಂಬಲ ನೀಡುತ್ತೇನೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೊಂದರಿಂದಲೇ ನಾನು 50 ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಮೊದಲು ಭಿನ್ನಾಭಿಪ್ರಾಯ ಉಂಟಾಗಿದೆ. ಮೊದಲು ಹಾಗೆಯೇ ಇರುತ್ತದೆ. ಆದರೆ, ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭೆ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮತ್ತೆ ಶುರುವಾಗಿದೆ. ವೀರಶೈವ-ಲಿಂಗಾಯತ ಎರಡೂ ಒಂದೇ, ದೆಹಲಿ ಸೇರಿದಂತೆ ಎಲ್ಲಿಯಾದರು ಹೋರಾಟ ಮಾಡಿಕೊಳ್ಳಲಿ ಅವು ಎಲ್ಲಿ ಇರುತ್ತವೆಯೋ ಅಲ್ಲಿಯೆ ಸಾಯುತ್ತವೆ. ನಾನು ಹೇಳಿದಂತೆ ವೀರಶೈವರು ಲಿಂಗಾಯತರು ಒಂದಾಗಿದ್ದಾರೆ. ಒಂದಾಗಿಯೇ ಇರುತ್ತಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ