ನಾಯಕ ಸಾಮಾಜದ ನಂಬಿಕೆಗೆ ದ್ರೋಹ ಬಗೆಯಲ್ಲ : ಯಡಿಯೂರಪ್ಪ

ದಾವಣಗೆರೆ:

    ನನ್ನ ಮೇಲೆ ವಾಲ್ಮೀಕಿ ನಾಯಕ ಸಾಮಾಜದವರು ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ ಹಾಗೂ ಅವುಗಳಿಗೆ ಧಕ್ಕೆ ತರುವ ಕೆಲಸ ಮಾಡಲ್ಲ. ನ್ಯಾ.ನಾಗಮೋಹನದಾಸ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ ತಕ್ಷಣವೇ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸುವುದರ ಜೊತೆಗೆ ನಿಮಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

     ಜಿಲ್ಲೆಯ ಹರಿಹರ ತಾಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ವಾಲ್ಮೀಕಿ ಜಾತ್ರೆಯ ಅಂಗವಾಗಿ ನಡೆದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂಬುದು ಸಮಾಜದ ಬಹುದಿನದ ಬೇಡಿಕೆಯಾಗಿದೆ. ಇದಕ್ಕಾಗಿ ನ್ಯಾ.ನಾಗಮೋಹನದಾಸ್ ಸಮಿತಿ ರಚಿಸಿದ್ದು, ಶೀಘ್ರವೇ ವರದಿ ಸಲ್ಲಿಸುವಂತೆ ಲಿಖಿತವಾಗಿ ಪತ್ರ ಬರೆದಿದ್ದೇವೆ. ಅವರೂ ಸಹ ನೀಡಿರುವ ಟೈಂ ಬಾಂಡ್‍ನಲ್ಲಿ ವರದಿ ಸಲ್ಲಿಸುವುದಾಗಿ ಪತ್ರ ಬರೆದಿದ್ದಾರೆ. ಈ ವರದಿ ಸಲ್ಲಿಸಿದ ತಕ್ಷಣವೇ ಈಗ ನೀಡುತ್ತಿರುವ ಶೇ.3 ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ವಾಗ್ದಾನ ಮಾಡಿದರು.

     ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನಾಯಕ ಸಮುದಾಯದ ಡಾ.ರಂಗರಾಜ ವನದುರ್ಗ ಅವರನ್ನು ನೇಮಕ ಮಾಡಿರುವುದು ನಾನು ನಾಯಕ ಸಮುದಾಯದ ಮೇಲೆ ಇಟ್ಟಿರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಸಮಾಜದ ಬೇಡಿಕೆಯಂತೆ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ಎಸ್ಸಿ, ಎಸ್ಟಿ ಮಾತ್ರವಲ್ಲದೆ ಎಲ್ಲ ವರ್ಗಗಳ ಏಳಿಗೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದ ಅವರು, ವಾಲ್ಮೀಕಿ ರಾಮಾಯಣವು ಭಾರತದ ಸಂಸ್ಕøತಿ ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಸರ್ವರಿಗೂ ಸಮಪಾಲು-ಸಮಬಾಳು ಎಂಬ ಸಂವಿಧಾನದ ಆಶಯವನ್ನೇ ರಾಮಾಯಣ ಬಿಂಬಿಸಿದೆ. ಮನುಕುಲದ ಸಾಕಷ್ಟು ಸಮಸ್ಯೆಗಳಿಗೆ ರಾಮಾಯಣದಲ್ಲಿ ಉತ್ತರವಿದೆ ಎಂದು ನುಡಿದರು.

    ಶೋಷಿತರ ಉದ್ಧಾರಕ್ಕೆ ಶಿಕ್ಷಣ ಅಗತ್ಯವಾಗಿದ್ದು, ಸರ್ಕಾರ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಅನೇಕ ಯೋಜನೆ, ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳ ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.

    ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿಯಲ್ಲಿ ಅತಿಹೆಚ್ಚು ಎಸ್ಸಿ/ಎಸ್ಟಿ ಶಾಸಕರಿದ್ದು, ಇದು ದೇಶಾದ್ಯಂತ ಪರಿಶಿಷ್ಟರು ಬಿಜೆಪಿಗೆ ಬೆಂಬಲವಾಗಿ ನಿಂತಿರುವುದಕ್ಕೆ ಉದಾಹರಣೆಯಾಗಿದೆ. ಅದರಂತೆ ಬಿಜೆಪಿ ಸರ್ಕಾರ ಎಲ್ಲರ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

    ವಾಲ್ಮೀಕಿ ಜಯಂತಿ ಆಚರಣೆಯನ್ನು ಮೊಟ್ಟಮೊದಲು ಜಾರಿಗೆ ತಂದಿದ್ದು ಸಹ ಯಡಿಯೂರಪ್ಪ ಸರ್ಕಾರ ಎಂಬುದನ್ನು ಯಾರೂ ಸಹ ಮರೆಯಬಾರದು. ಹಿಂದೆ ಪರಿಶಿಷ್ಟರ ಕಾಲೋನಿಗಳಲ್ಲಿ ಒಳ್ಳೆಯ ರಸ್ತೆ, ಸಮುದಾಯ ಭವನಗಳೇ ಇರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 6900 ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಜಗಜೀವರಾಮ್ ಭವನ, ಸೇವಾಲಾಲ್ ಭವನ ನಿರ್ಮಿಸಲು ಅನುದಾನ ಒದಗಿಸಿದ್ದರು. ಕೆಪಿಎಸ್ಸಿಯಲ್ಲಿ ಖಾಲಿ ಇದ್ದ 2 ಸ್ಥಾನಗಳಿಗೆ ಪರಿಶಿಷ್ಟರನ್ನೇ ನೇಮಕ ಮಾಡಿದ್ದು, ವಾಲ್ಮೀಕಿ ಗುರುಪೀಠದ ಅಭಿವೃದ್ಧಿಗೆ 4.47 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

    ಪ್ರಾಸ್ತಾವಿಕ ಮಾತನಾಡಿದ ಶಾಸಕರು, ಸಮಾಜದ ಹಿರಿಯ ಮುಖಂಡರು ಆದ ಸತೀಶ ಜಾರಕಿಹೊಳಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಶೇ.3 ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು. ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪರಿಶಿಷ್ಟ ವರ್ಗದವರಿಗೆ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯ ಅಥವಾ ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರನ್ನು ನಾಮಕರಣ ಮಾಡಬೇಕು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಾಜದ ಬಿನ್ನವತ್ತಳೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.ಇದೇ ವೇಳೆ ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.

    ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಸಿ.ಪಾಟೀಲ್, ಬಸವರಾಜ ಬೊಮ್ಮಾಯಿ, ಸಂಸದರಾದ ಜಿ.ಎಂ.ಸಿದ್ದೇಶ್ವರ, ದೇವೇಂದ್ರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ರಾಜ ವೆಂಕಟಪ್ಪ ನಾಯಕ, ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಯು.ಬಿ.ಬಣಕಾರ್, ವಿರೂಪಾಕ್ಷಪ್ಪ, ಮಾನಪ್ಪ ವಜ್ಜಲ್, ಎಸ್.ರಾಮಪ್ಪ, ಅನಿಲ್ ಚಿಕ್ಕಮಾದು, ಟಿ.ರಘುಮೂರ್ತಿ, ಜೆ.ಎನ್.ಗಣೇಶ, ನೆಹರೂ ಓಲೆಕಾರ್, ಅಬ್ದುಲ್ ಜಬ್ಬಾರ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸಾಹಿತಿ ಡಾ.ಬಿ.ಎಲ್.ವೇಣು, ಚಿತ್ರನಟ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link