ಬೆಂಗಳೂರು
ನಾನು ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಹೊರತು ಜಾತಿ ನಾಯಕನಾಗಿ ಅಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಒಕ್ಕಲಿಗ ತಂತ್ರ ಹೂಡಲಾಗಿದೆ. ಇದಕ್ಕಾಗಿಯೇ ದಿ. ಐಎಎಸ್ ಅಧಿಕಾರಿ ಡಿಕೆ ರವಿ ಅವರ ಹೆಂಡತಿ ಕುಸುಮಾ ಅವರನ್ನು ಕಣಕ್ಕೆ ಇಳಿಸಲಾಗಿದೆ. ಡಿಕೆ ಶಿವಕುಮಾರ್ ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದರು.
ಈ ಟೀಕೆಗಳಿಗೆಲ್ಲಾ ಉತ್ತರಿಸಿರುವ ಅವರು, ನನ್ನ ಪೋಷಕರು ಒಕ್ಕಲಿಗರು ಆದ ಕಾರಣ ನಾನು ಒಕ್ಕಲಿಗನಾದೆ. ನಾನು ಒಕ್ಕಲಿಗ ಜಾತಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೇಂದ ಮಾತ್ರಕ್ಕೆ ನಾನು ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಒಂದು ಜಾತಿಗೆ ಸೀಮಿತವಾಗಿ ರಾಜಕೀಯ ಮಾಡುವುದಿಲ್ಲ. ನನ್ನ ತಂದೆ ತಾಯಿ ಒಕ್ಕಲಿಗರು. ನಾನು ಮೂಲತಃ ಕೃಷಿಕ, ಹೀಗಾಗಿ ಒಕ್ಕಲಿಗ. ಶಾಲೆಯಲ್ಲಿ ಅರ್ಜಿ ನೀಡುವಾಗ ಒಕ್ಕಲಿಗ ಎಂದು ಕೊಟ್ಟಿದ್ದೇನೆ. ಆದರೆ ಜಾತಿ ಮೇಲೆ ರಾಜಕೀಯ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷವೇ ನನ್ನ ಜಾತಿ.
– @DKShivakumar pic.twitter.com/Q7xQd1hbef— Karnataka Congress (@INCKarnataka) October 17, 2020
ಕಾಂಗ್ರೆಸ್ ಸದಸ್ಯ, ಕೆಪಿಸಿಸಿ ಅಧ್ಯಕ್ಷನಾಗಿರುವ ನನ್ನ ಜಾತಿ ಕಾಂಗ್ರೆಸ್ ಮಾತ್ರ. ಹಾಗಿದ್ದಾಗ ಬೇರೆ ಜಾತಿ ಬಗ್ಗೆ ನಾನ್ಯಾಕೆ ಮಾತನಾಡಲಿ. ಜನರನ್ನು ಪಕ್ಷದತ್ತ ಸೆಳೆಯಲು ಯಾವುದೇ ರಾಜಕೀಯ ನಡೆಯುವುದಿಲ್ಲ. ಈ ರೀತಿಯ ಜಾತಿ ವಿಷಯಗಳ ಮುನ್ನಲೆಗೆ ಬರುವುದು ಚುನಾವಣೆ ವೇಳೆ ಮಾತ್ರ. ಚುನಾವಣೆ ಸಮಯದಲ್ಲಿ ನಮ್ಮ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಮ್ಮ ನಾಯಕರನ್ನು ಭೇಟಿಯಾಗುತ್ತಾರೆ. ಇದು ಸಾಮಾನ್ಯವಾಗಿ ನಡೆಯುವಂತಹದ್ದು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಆರ್ಆರ್ನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಯಕವಾಗಿರುವುದರಿಂದ ಎರಡು ಪಕ್ಷದ ನಾಯಕರು ಸಮುದಾಯದ ಜನರನ್ನು ಸೆಳೆಯುವಲ್ಲಿ ಹರಸಾಹಸ ನಡೆಸುತ್ತಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿನ ಗೆಲುವು ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ಗೆ ಅನಿವಾರ್ಯವಾಗಿದ್ದು, ಈ ಹಿನ್ನಲೆ ಈ ಕಣ ಪ್ರತಿಷ್ಠೆಯಾಗಿ ರೂಪುಗೊಂಡಿದೆ.
ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಇಬ್ಬರು ಒಕ್ಕಲಿಗ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಒಕ್ಕಲಿಗರ ಸಮುದಾಯವೂ ರಾಜ್ಯದ ಪ್ರಮುಖ ನಿರ್ಣಯ ಮತಗಳಾಗಿದೆ. ಹಳೇ ಮೈಸೂರು ಭಾಗದಲ್ಲಿ ಅತಿಹೆಚ್ಚಿನ ಮತಗಳನ್ನು ಈ ಸಮುದಾಯ ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
