ಸಮಸ್ಯೆ ಪರಿಹರಿಸದಿದ್ದರೆ ಶಾಸಕನಾಗಿ ಸುಮ್ಮನಿರಲು ಸಾಧ್ಯವಿಲ್ಲ

ಚಿಕ್ಕನಾಯಕನಹಳ್ಳಿ

      ಗ್ರಾ.ಪಂ. ಅಧಿಕಾರಿಗಳು ಪಂಚಾಯಿತಿಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು, ಗ್ರಾಮ ಮಟ್ಟದಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸದಿದ್ದರೆ ಶಾಸಕನಾಗಿ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಕಾತ್ರಿಕೆಹಾಳ್ ಎಸ್.ಟಿ.ಕಾಲೋನಿಯಲ್ಲಿ ಗಿರಿಜನ ಉಪಯೋಜನೆ- ಯೋಜನೆಯಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ 40 ಲಕ್ಷ ಹಣದ ಬಿಡುಗಡೆ ಆಗಿದ್ದು ಇದರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

      ಸಿ.ಸಿ.ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ಇದೆ. ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಗ್ರಾಮಕ್ಕೆ ಬರುತ್ತಾರೆ ಎಂದು ತಿಳಿದಿದ್ದರೂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಳಚೆ ನಿರ್ಮಾಣವಾಗಿರುವ ಪಕ್ಕದಲ್ಲೆ ಪೂಜೆ ಮಾಡಿಸುತ್ತಿದ್ದಾರೆ. ಜೆಸಿಬಿ ತಂದು ಸ್ವಚ್ಛ ಮಾಡಿಸಿದ್ದರೆ ಅರ್ಧ ಗಂಟೆಯಲ್ಲಿ ಸಮಸ್ಯೆ ಪರಿಹರಿಸಬಹುದಿತ್ತು ಎಂದ ಅವರು, ಶುಚಿತ್ವಕ್ಕೂ ಒತ್ತು ನೀಡಬಹುದು ಎಂದು ಪಿಡಿಓಗೆ ತಿಳುವಳಿಕೆ ಹೇಳಿದರು.

       ದೇವರು ಬಡತನ ನೀಡಿರಬಹುದು, ಆದರೆ ಎಲ್ಲರಂತೆ ಬಾಳಬಾರದು ಎಂದು ಹೇಳಿಲ್ಲ. ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಲ್ಲಿ ಶುಚಿತ್ವ ಕಾಪಾಡಬೇಕು, ಎಲ್ಲಾ ಕಡೆಯೂ ಕೊಳಚೆಯಿಂದಲೆ ಸಮಸ್ಯೆಗಳು ಉದ್ಭವಿಸುವುದು, ನಾನೂ ಸಹ ಹಳ್ಳಿಯಲ್ಲೆ ವಾಸ ಮಾಡುವುದು, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ ಎಂದರು.

ಸಂಸದರ ಆಯ್ಕೆಯಿಂದ ಬಲ ಹೆಚ್ಚಾಗಿದೆ :

      ತುಮಕೂರಿನ ಜನ ಸ್ವಾಭಿಮಾನಕ್ಕೆ ಗೆಲುವು ನೀಡಿದ್ದಾರೆ, ನಮ್ಮ ಶಕ್ತಿ ಹೆಚ್ಚಿಸಿದ್ದಾರೆ. ಹೊರ ಜಿಲ್ಲೆಯಿಂದ ಬಂದಂತಹ ಯಾವುದೇ ಅಭ್ಯರ್ಥಿಯನ್ನು ತುಮಕೂರಿನ ಜನ ಇದುವರೆವಿಗೂ ಗೆಲ್ಲಿಸಿಲ್ಲ, ಕೋದಂಡರಾಮಯ್ಯರವರಿಂದ ಹಿಡಿದು ಈವರೆವಿಗೂ ಸಹ ಹೊರಗಿನವರಿಗೆ ಇಲ್ಲಿ ಸ್ಥಳವಿಲ್ಲ, ಜಿಲ್ಲೆಯವರೆ ಆಯ್ಕೆಯಾಗಿದ್ದಾರೆ. ಜಿ.ಎಸ್.ಬಸವರಾಜುರವರಿಗೆ ಕೇಂದ್ರ ಮಂತ್ರಿ ಸ್ಥಾನ ದೊರಕಲು ಶ್ರಮಿಸುತ್ತೇನೆ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.

      ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್‍ಕುಮಾರ್ ಮಾತನಾಡಿ, ತಾಲ್ಲೂಕಿನ ಕಾತ್ರಿಕೆಹಾಳ್‍ನ ಹೊಸೂರು ನಿರ್ಮಾಣವಾಗಲು ಮಾಧುಸ್ವಾಮಿಯವರ ಶ್ರಮವಿದೆ. ಅವರು ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ನಿವೇಶನ ರಹಿತರನ್ನು ಗುರುತಿಸಿ ಬಗರ್‍ಹುಕುಂನಲ್ಲಿ ನಿವೇಶನ ನೀಡಿ ಮನೆ ನಿರ್ಮಾಣಕ್ಕೆ ಸಹಕರಿಸಿ ಈ ಜಾಗದಲ್ಲಿ ಗ್ರಾಮ ನಿರ್ಮಾಣಕ್ಕೆ ಸಹಕರಿಸಿದ್ದರೂ ಈಗ ಗ್ರಾಮದ ಅಭಿವೃದ್ಧಿಗಾಗಿ ರಸ್ತೆ ನಿರ್ಮಾಣ ಯೋಜನೆಯ ಅಡಿಯಲ್ಲಿ ಹಣ ನೀಡಿದ್ದಾರೆ ಎಂದ ಅವರು, ಶಾಸಕರಾದ ಮಾಧುಸ್ವಾಮಿರವರು ಗುಡ್ಡದಾಚೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದಾರೆ. ರಸ್ತೆ, ಚರಂಡಿ ನಿರ್ಮಾಣ, ಕೆಇಬಿ ಉಪಸ್ಥಾವರ, ಕಾಲೇಜು ಹಲವು ಕಾರ್ಯಕ್ರಮಗಳನ್ನು ಈ ಭಾಗಕ್ಕೆ ತಂದಿದ್ದಾರೆ, ಹಂತ-ಹಂತವಾಗಿ ಎಲ್ಲಾ ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಜೊತೆಗೆ ಈ ಭಾಗಕ್ಕೆ ನೀರಿನ ಅನುಕೂಲ ಮಾಡಲು ಶ್ರಮಿಸುತ್ತಿದ್ದಾರೆ ಎಂದರು.

      ಜಿ.ಪಂ.ಸದಸ್ಯೆ ಮಂಜುಳಮ್ಮ ಮಾತನಾಡಿ, ಶಾಸಕರಾದ ನಂತರ ಮಾಧುಸ್ವಾಮಿಯವರು ಕಂದಿಕೆರೆ ಹೋಬಳಿಗೆ 1ಕೋಟಿಗೂ ಹೆಚ್ಚು ಹಣ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿಗಾಗಿ ಹಣ ನೀಡಿದ್ದಾರೆ ಎಂದ ಅವರು, ಶಾಸಕರು ತಾಲ್ಲೂಕಿನ ನೀರಿನ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಲಿದ್ದಾರೆ ಎಂದರು.

      ತಾ.ಪಂ.ಸದಸ್ಯ ಕೇಶವಮೂರ್ತಿ ಮಾತನಾಡಿ, ಶಾಸಕರಿಗೆ ಗುಡ್ಡಗಾಡು ಭಾಗದ ಗ್ರಾಮಗಳ ಮೇಲೆ ಹೆಚ್ಚಿನ ಅಭಿಮಾನವಿದೆ. ಹಾಗಾಗಿಯೇ ಇಲ್ಲಿನ ಗ್ರಾಮಗಳಿಗೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿದ್ದಾರೆ, ಹಳ್ಳಿಗಳ ಸ್ವಚ್ಛತೆ, ಅಭಿವೃದ್ದಿಗೆ ಗಮನ ಹರಿಸುತ್ತಿದ್ದಾರೆ ಎಂದರು.

       ತೀರ್ಥಪುರ ಭಾಗದ ದೊಡ್ಡರಾಂಪುರದಲ್ಲಿ ಚಿ.ನಾ.ಹಳ್ಳಿ-ಹಾಗಲವಾಡಿ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕಾಮಗಾರಿಯ 1ಕೋಟಿ ವೆಚ್ಚದ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಎ.ಇ.ಇ. ಚಂದ್ರಶೇಖರ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap