ರಾಮುಲು ಮಾಡಿರೋ ಅನ್ಯಾಯ ನಾನು ಮಾಡುವುದಿಲ್ಲ: ಡಿಕೆಶಿ

ಬಳ್ಳಾರಿ

      ನನಗೆ ಬಳ್ಳಾರಿ ಬೇಡವೆಂದರೂ, ಬಳ್ಳಾರಿ ನನ್ನನ್ನು ಬಿಡುತ್ತಿಲ್ಲ. ಅದು ಅಂಟಿಕೊಂಡೇ ಬಂದಿದೆ. ಈ ಹಿಂದೆ ಮರು ಚುನಾವಣೆ ಉಸ್ತುವಾರಿ ವಹಿಸಿಕೊಟ್ಟಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಜತೆಗೆ ಮರುಚುನಾವಣೆ ಉಸ್ತುವಾರಿಯನ್ನೂ ನೀಡಿದ್ದಾರೆ. ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸದೇ ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ನಿಮ್ಮ ಸೇವೆ ಮಾಡಲು ನನಗೆ ಹೆಚ್ಚಿನ ರಾಜಕೀಯ ಶಕ್ತಿ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

       ನಾನು ಬಳ್ಳಾರಿಗೆ ಜನರ ಸ್ನೇಹ ಸಂಪಾದನೆಗಾಗಿ ಬಂದಿದ್ದೇನೆಯೇ ಹೊರತು ಶತ್ರುಗಳನ್ನಾಗಿ ಮಾಡಿಕೊಳ್ಳಲು ಅಲ್ಲ. ಹತ್ತು ವರ್ಷಗಳಲ್ಲಿ ಜಿಲ್ಕೆ ಪ್ರಗತಿ ಬಗ್ಗೆ ಸಂಸತ್ತಿನಲ್ಲಿ ಒಮ್ಮೆಯೂ ತುಟಿ ಬಿಚ್ಚದ ಶ್ರೀರಾಮುಲು ಅಣ್ಣ ಇಲ್ಲಿನ ಜನರಿಗೆ ಮಾಡಿರುವ ಅನ್ಯಾಯವನ್ನು ನಾನಂತೂ ಮಾಡುವುದಿಲ್ಲ. ನೀವು ರಾಮುಲು, ಜನಾರ್ಧನ ರೆಡ್ಡಿ ಆಳ್ವಿಕೆ ನೋಡಿದ್ದೀರಿ. ಅವರೇನು ಮಾಡಿದ್ದಾರೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ನಾವೇನು ವಿವರಿಸೋ ಅಗತ್ಯವಿಲ್ಲ. ನಮಗೆ ಶಕ್ತಿ ಕೊಡಿ. ಅದು ನಿಮ್ಮ ಋಣವಾಗಿ ನಮ್ಮ ಮೇಲಿರುತ್ತದೆ. ನಿಮ್ಮ ಸೇವೆ ಮಾಡಿ ಅದನ್ನು ತೀರಿಸುತ್ತೇವೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ತಿಳಿಸಿದರು. ಅವರು ಹೇಳಿದ್ದಿಷ್ಟು: ಸರಕಾರ ಬೀಳಿಸೋಕೆ ಸಾಕಷ್ಟು ಜನ ಪ್ರಯತ್ನ ನಡೆಸುತ್ತಿದ್ದಾರೆ. ಅದು ಅಷ್ಟು ಸುಲಭವಲ್ಲ. ಸರಕಾರ ಬೀಳದಂತೆ ನಾವು ಮ್ಯಾನೇಜ್ ಮಾಡುತ್ತೇವೆ. ಐದು ವರ್ಷ ಸಮ್ಮಿಶ್ರ ಸರಕಾರ ಪೂರ್ಣಗೊಳಿಸುತ್ತದೆ.

        ಇಂಧನ ಸಚಿವ ಸ್ಥಾನ ಪಡೆಯುವ ಕಾಲಕ್ಕೆ ಇಂತಹ ಖಾತೆಯನ್ನು ಪಡೆದು ಕೆಟ್ಟ ಹೆಸರು ಪಡೆಯುತ್ತೀಯಾ ಎಂದು ನಮ್ಮ ಆಪ್ತರು ಹೇಳಿದ್ದರು. ಆದರೆ ರಾಜ್ಯದಲ್ಲಿ 13 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು 20 ಸಾವಿರಕ್ಕೆ ಹೆಚ್ಚಿಸದ್ದೇವೆ. ಅಂತೆಯೇ ಇದೀಗ ಬಳ್ಳಾರಿಗೆ ಗೆಳೆಯರನ್ನು ಮಾಡಿಕೊಳ್ಳುವುದಕ್ಕೆ ಬಂದಿದ್ದೇನೆ. ಶತ್ರುಗಳನ್ನು ಮಾಡಿಕೊಂಡು ಹೋಗುವುದಕ್ಕೆ ಬಂದಿಲ್ಲ. ನಾಲ್ಕು ಜನರಿಗೆ ಕೆಲಸ ಕೊಡುವ ವರ್ತಕರು ಬಲಿಷ್ಟವಿದ್ದರೆ, ಇಡೀ ಸರಕಾರವು ಬಲಿಷ್ಟವಾಗಿರುತ್ತದೆ. ಇಂತಹ ಸತ್ಯವನ್ನು ಎಸ್.ಎಂ. ಕೃಷ್ಣ ಅವರು ಮುಖ್ಯನಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿದ್ದ ನಮಗೆ ಹೇಳಿ ಕೊಟ್ಟಿದ್ದಾರೆ.

        ಬಿಜೆಪಿ ಅಧಿಕಾರದಲ್ಲಿದ್ದಾಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಒಂದು ಸಣ್ಣ ಕುಟುಂಬ(ರೆಡ್ಡಿ ಕುಟುಂಬ)ದಿಂದ ಇಡೀ ದೇಶದ ಕೈಗಾರಿಕೆಗಳ ಮೇಲೆ ದೊಡ್ಡ ಪ್ರತಿಕೂಲ ಪರಿಣಾಮ ಬಿದ್ದಿದೆ. ಅಕ್ರಮ ಗಣಿಗಾರಿಕೆಯಿಂದಾಗಿ ಗಣಿ ಉದ್ಯಮದ ಮೇಲಾಗಿರುವ ಪರಿಣಾಮ ದೊಡ್ಡದಾಗಿದೆ. ಯಾರೋ ಮಾಡಿದ ತಪ್ಪಿಗೆ ಎಲ್ಲಾ ವರ್ಗದ ಜನರು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಬಳ್ಳಾರಿಗೆ ಹೆಣ್ಣು ಕೊಡಬೇಕಾದರೆ ಖಾಲಿ ಕೈ ಇದೆ ಎಂದು ಯೋಚನೆ ಮಾಡುತ್ತಿದ್ದಾರೆ.

       ಕೇಂದ್ರ ಸರಕಾರದ ಸ್ನೇಹಿತರು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿದ್ದಾರೆ. ಸರಿಯಾಗಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಗಣಿಗಾರಿಕೆಯಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಹೋಟೆಲ್ ಉದ್ಯಮ ಸೇರಿದಂತೆ ಹಲವು ಉದ್ಯಮಗಳು ನೆಲಕಚ್ಚಿವೆ. ಹೋಟೆಲ್ ನಡೆಸುತ್ತಿರುವ ಶಾಸಕರೊಬ್ಬರ ಪುತ್ರರು, ತಮ್ಮ ಉದ್ಯಮ ಬಿಟ್ಟು, ತಮ್ಮ ಹೋಟೆಲನ್ನು 6 ಲಕ್ಷ ರೂ.ಗಳಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಹೋಟೆಲ್ ಉದ್ಯಮ ನಡೆಸುವುದು ಕಷ್ಟವಾಗಿದೆ. ನಾನು ವ್ಯಾಪಾರ ಕಲಿಯಲು ಬೆಂಗಳೂರಿನಲ್ಲಿ ಒಂದು ಸಣ್ಣ ಹೋಟೆಲ್ ಮಾಡಿದ್ದೇನೆ. ನಾನು ಹುಟ್ಟಿನಿಂದ ರೈತ. ಉದ್ಯಮಿಯಾಗಿ ಬೆಳೆದು, ಇದೀಗ ಸೇವೆಗಾಗಿ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ.

        ಆಕಸ್ಮಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನಾನು ಬಳ್ಳಾರಿಗೆ ಏನಾದರೂ ಕೆಲಸ ಮಾಡಿಕೊಟ್ಟಬೇಕೆಂಬ ಸಂಕಲ್ಪ ಹೊಂದಿದ್ದೇನೆ. ವ್ಯಾಪಾರಸ್ಥರು ನೀವು ಕೊಡು-ಕೊಳ್ಳುವ ವ್ಯವಹಾರ ಇಟ್ಟುಕೊಳ್ಳಬೇಕು (ಮತ ಹಾಕುವ ಮೂಲಕ). ನಿಮ್ಮ ಋಣ ತೀರಿಸುತ್ತೇವೆ. ಗ್ರಾಹಕರನ್ನು ಹೇಗೆ ಸೆರೆ ಹಿಡಿಯಬೇಕೆಂಬುದು ನಿಮಗೆ ಗೊತ್ತಿರುತ್ತದೆ, ಅದನ್ನು ನಾನು ಹೇಳಿಕೊಡಬೇಕಾಗಿಲ್ಲ.

     ಉಗ್ರಪ್ಪ ಅವರನ್ನು ಅಳೆದು-ತೂಗಿ ಬಳ್ಳಾರಿ ಮರು ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಉಗ್ರಪ್ಪ ಸ್ವಲ್ಪ ಹೆಚ್ಚು ಮಾತನಾಡುತ್ತಾರೆ. ಆದರೆ ಒಳ್ಳೆಯ ಕೆಲಸಗಾರ. ಶ್ರೀರಾಮುಲು ಐದು ವರ್ಷಗಳ ಸಂಸದರಾಗಿ ಏನು ಕೆಲಸ ಮಾಡಿದರು? ಒಂದು ಬಾರಿಯು ಸಂಸದರಾಗಿ ಲೋಕಸಭೆಯಲ್ಲಿ ಬಾಯಿ ಬಿಟ್ಟು ಮಾತನಾಡದೆ, ಬರೀ ಸಹಿ ಹಾಕಿ ಬರುವ ಕೆಲಸ ಮಾಡಿದ್ದಾರೆ. ಅಂಥವರು ನಿಮಗೆ ಬೇಕಾ?

       ವಿಮ್ಸ್‍ನಲ್ಲಿ ಸಣ್ಣಪುಟ್ಟ ಸರ್ಜರಿಯಲ್ಲ, ಮೇಜರ್ ಸರ್ಜರಿ ಮಾಡಬೇಕಾಗಿದೆ, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ರಾಜ್ಯದಲ್ಲಿ ಸುಮಾರು 57 ಮೆಡಿಕಲ್ ಕಾಲೇಜುಗಳಿದ್ದು, ದೇಶದಲ್ಲಿ ಅತಿಹೆಚ್ಚು ವೈದ್ಯರು ರಾಜ್ಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿ ದ್ದಾರೆ, ವೈದ್ಯಕೀಯ ಕಾಲೇಜುಗಳನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕಾಗಿದೆ.

       ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಮಾತನಾಡಿ, ಶ್ರೀರಾಮುಲು ಅವರು ಮೂರು ಬಾರಿ ರಾಜೀನಾಮೆಯನ್ನು ಯಾವ ಪುರುಷಾರ್ಥಕ್ಕೆ ಕೊಟ್ಟಿದ್ದಾರೆ. ಈಗ ಎದುರಾಗಿರುವ ಮರು ಚುನಾವಣೆಗೆ 8 ಕೋಟಿ ರೂ.ಗಳು ಖರ್ಚಾಗುತ್ತದೆ. ಇದು ಜನರ ತೆರಿಗೆ ದುಡ್ಡು. ಇದೀಗ ಬಳ್ಳಾರಿ ಜನರಿಗೆ ಸಮರ್ಥನಾಯಕನನ್ನು ಆಯ್ಕೆ ಮಾಡುವ ಅವಕಾಶ ಬಂದಿದೆ. ಉಗ್ರಪ್ಪ ಅವರು ಸಂಸದರಾಗಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದರು. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯವರು ನಾನಾ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ರಮೇಶ್‍ಗೋಪಾಲ್, ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ಆಂಜಿನೇಯಲು ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap