ವಿಧಾನಸಭೆಯಲ್ಲಿ ಪ್ರತೇಕ ರಾಜ್ಯದ ಕೂಗು ಮೊಳಗಿಸುವೆ : ಉಮೇಶ್ ಕತ್ತಿ

ಬೆಂಗಳೂರು

     ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಅಲಕ್ಷಿಸಿದೆ ಎಂದು ಕಿಡಿ ಕಾರಿರುವ ಬಿಜೆಪಿಯ ಹಿರಿಯ ನಾಯಕ ಉಮೇಶ್ ಕತ್ತಿ,ಇದೇ ಕಾರಣಕ್ಕಾಗಿ ವಿಧಾನಸಭೆಯಲ್ಲೇ ಪ್ರತ್ಯೇಕ ರಾಜ್ಯದ ಕೂಗು ಮೊಳಗಿಸುವುದಾಗಿ ಗುಡುಗಿದ್ದಾರೆ.

     ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ ಅವರು,ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗದೆ ಬೇರೆ ದಾರಿಯೇ ಇಲ್ಲ.ಇನ್ನು ಅಖಂಡ ಕರ್ನಾಟಕದಲ್ಲಿದ್ದು ಉದ್ದಾರವಾಗುತ್ತೇವೆ ಎಂಬ ಭ್ರಮೆಯೂ ಇಲ್ಲ ಎಂದಿದ್ದಾರೆ.ಕರ್ನಾಟಕವನ್ನು ಪ್ರತ್ಯೇಕಿಸಬೇಕು ಎಂಬ ಇಚ್ಚೆ ನನಗೇನೂ ಇರಲಿಲ್ಲ.ಆದರೆ ಕಳೆದ ಹಲವು ವರ್ಷಗಳಿಂದ ಉತ್ತರ ಕರ್ನಾಟಕಕ್ಕೆ ಆಗುತ್ತಾ ಬಂದ ಅನ್ಯಾಯ ಈಗ ಯಡಿಯೂರಪ್ಪ ಕಾಲದಲ್ಲಿ ಅಬಾಧಿತವಾಗಿ ಮುಂದುವರಿದಿದ್ದು ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೀದಿ ಹೋರಾಟಕ್ಕಿಳಿಯಲೂ ನಾನು ಸಿದ್ದ ಎಂದು ಉಮೇಶ್ ಕತ್ತಿ ನುಡಿದರು.

    ಬಿಜೆಪಿ ಶಾಸಕನಾಗಿ ನಾನು ಮಾತ್ರವಲ್ಲ,ಆ ಭಾಗದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರ ತ್ಯಾಗಕ್ಕೆ ಸಜ್ಜಾಗಬೇಕು.ಇಲ್ಲದಿದ್ದರೆ ಆ ಭಾಗಕ್ಕೆ ಆಗುತ್ತಾ ಬಂದಿರುವ ಅನ್ಯಾಯಕ್ಕೆ ಭವಿಷ್ಯದಲ್ಲಿ ಉತ್ತರ ಕೊಡಬೇಕಾದ ಸ್ಥಿತಿ ಬರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

    ಕೃಷ್ಣಾ ನದಿ ಪಾತ್ರದ ಯೋಜನೆಗಳನ್ನು ಜಾರಿಗೊಳಿಸುವ ವಿಷಯದಲ್ಲಿ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ತೋರುತ್ತಾ ಬಂದಿವೆ.ಈಗ ಯಡಿಯೂರಪ್ಪ ಅವರ ಕಾಲದಲ್ಲೂ ಈ ಅನ್ಯಾಯ ಮುಂದುವರಿದಿದೆ ಎಂದು ಉಮೇಶ್ ಕತ್ತಿ ಗುಡುಗಿದರು.ಕೃಷ್ಣಾ ನದಿ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆದೇ ಇಲ್ಲ.ಕೃಷ್ಣಾ ನದಿಯಿಂದ ಇನ್ನೂ 400 ಟಿಎಂಸಿಗಳಷ್ಟು ಹೆಚ್ಚುವರಿ ನೀರನ್ನು ಬಳಸಿಕೊಳ್ಳಬೇಕು.ಆ ಕೆಲಸ ಆಗದೆ ಇರುವುದರಿಂದ ಉತ್ತರ ಕರ್ನಾಟಕ ಭಾಗದ ಜನ ಪ್ರವಾಹಕ್ಕೆ ಗುರಿಯಾಗಿ ತಮ್ಮ ನೆಲೆ,ಬೆಲೆಯನ್ನು ಕಳೆದುಕೊಳ್ಳುವ ಸಂಕಷ್ಟ ಎದುರಾಗಿದೆ.

    ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡುತ್ತೇವೆ ಎಂದರೆ ಸಾಲದು.ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಬೇಕು .ಇಲ್ಲದಿದ್ದರೆ ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದೆ ಪ್ರವಾಹದಂತಹ ಸನ್ನಿವೇಶಗಳೂ ಎದುರಾಗುತ್ತವೆ.ಆ ಭಾಗದ ಅಭಿವೃದ್ಧಿಗೂ ಮಾರಕವಾಗುತ್ತದೆ ಎಂದರು.

     ಕೃಷ್ಣಾ ನದಿ ಪಾತ್ರದಲ್ಲಿ ಭೂಸ್ವಾಧೀನ ಕಾರ್ಯ ಮಾಡಲು ಒಂದು ಲಕ್ಷ ಕೋಟಿ ರೂ ಬೇಕು.ಆದರೆ ಮುಖ್ಯಮಂತ್ರಿಗಳು 10 ಸಾವಿರ ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ.ಆದರೆ ಈ ದುಡ್ಡೂ ಬರುತ್ತದೆ ಎಂಬ ನಂಬಿಕೆ ನನಗಿಲ್ಲ.ಸಿದ್ಧರಾಮಯ್ಯ ಅವರ ಸರ್ಕಾರವೇ ಇರಬಹುದು,ಕುಮಾರಸ್ವಾಮಿ ಅವರ ಸರ್ಕಾರವೇ ಇರಬಹುದು.ಮತ್ತೀಗ ಯಡಿಯೂರಪ್ಪ ಅವರ ಸರ್ಕಾರವೇ ಇರಬಹುದು.ಉತ್ತರ ಕರ್ನಾಟಕವನ್ನು ಅಲಕ್ಷಿಸಿದ ಪರಿಣಾಮವಾಗಿ ಜನ ಘೋರ ಪರಿಸ್ಥಿತಿಯಲ್ಲಿದ್ದಾರೆ.

     ಸಿದ್ಧರಾಮಯ್ಯ ಅವರ ಕಾಲದಲ್ಲಿ ಕೃಷ್ಣಾ ನದಿ ನೀರನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರೆ ರಿಪೇರಿ ಕಾಮಗಾರಿಗಳ ಮೇಲೆ ಗಮನ ಹರಿಸಿ ನಿರ್ಲಕ್ಷ್ಯ ತೋರಿದರು ಎಂದ ಅವರು,ಈಗ ಯಡಿಯೂರಪ್ಪನವರೂ ನೆಪ ಮಾತ್ರಕ್ಕೆ ಕೃಷ್ಣಾ ನದಿ ಪಾತ್ರದ ಯೋಜನೆಗಳಿಗೆ ಹತ್ತು ಸಾವಿರ ಕೋಟಿ ರೂಪಾಯಿ ಕೊಡುತ್ತೇನೆ ಎಂದಿದ್ದಾರೆ.

     ಆ ದುಡ್ಡೂ ಬರುವುದಿಲ್ಲ.ಮಹದಾಯಿಗೆ ಕೊಡುವುದಾಗಿ ಹೇಳಿರುವ 500 ಕೋಟಿ ರೂಪಾಯಿಗಳೂ ಬರುವುದಿಲ್ಲ.ಹಾಗೆ ನೋಡಿದರೆ ಈ ಬಜೆಟ್ ಉತ್ತರ ಕರ್ನಾಟಕದ ಪರವಾಗಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕ ಭಾಗದ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡಿದ ಕೂಡಲೇ ಆ ಭಾಗಕ್ಕೆ ಯಾವ ಲಾಭವೂ ಆಗುವುದಿಲ್ಲ.ಮೂಲತ: ಆ ಹುದ್ದೆಗಳಿಗೆ ಸಾಂವಿಧಾನಿಕ ಮಾನ್ಯತೆಯೂ ಇಲ್ಲ.ಇವತ್ತು ಉತ್ತರ ಕರ್ನಾಟಕ ಭಾಗದ ಜನ ತಮ್ಮ ಬದುಕು ಕಟ್ಟಿಕೊಳ್ಳಬೇಕೋ?ಇವರು ಇಬ್ಬರನ್ನು ಉಪಮುಖ್ಯಮಂತ್ರಿ ಮಾಡಿದರು ಎಂದು ಸಂಭ್ರಮಪಡುತ್ತಾ ಕೂರಬೇಕೋ?ಎಂದು ಅವರು ಪ್ರಶ್ನಿಸಿದರು.

      ನಿಮಗೆ ಬೆಂಗಳೂರನ್ನು ಉದ್ದಾರ ಮಾಡಲು ದುಡ್ಡಿದೆ.ಚಿತ್ರನಗರಿಗೆ ಕೊಡಲು ದುಡ್ಡಿದೆ.ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಕೊಡಲು ದುಡ್ಡಿಲ್ಲ.ಕೃಷ್ಣಾ ನದಿ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ವಿಚಾರವೂ ಇಲ್ಲ.ಪರಿಸ್ಥಿತಿ ಹೀಗಿರುವಾಗ ದಶಕಗಳು ಕಳೆದರೂ ಉತ್ತರ ಕರ್ನಾಟಕದ ಗೋಳು ತಪ್ಪುವುದಿಲ್ಲ ಎಂದರು.

      ಇಂತಹ ಸ್ಥಿತಿಯಲ್ಲಿ ಕರ್ನಾಟಕದಿಂದ ಉತ್ತರ ಕರ್ನಾಟಕ ಪ್ರತ್ಯೇಕವಾಗಲೇಬೇಕು.ಪ್ರತ್ಯೇಕ ರಾಜ್ಯವಾಗದ ಹೊರತು ಉತ್ತರ ಕರ್ನಾಟಕ ಭಾಗದ ಗೋಳು ತಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap