ದಾವಣಗೆರೆ:
ಗಾಜಿನ ಮನೆ ನಿರ್ಮಾಣ ವಿಚಾರದಲ್ಲಿ ಸಂಬಂಧಿಸಿದಂತೆ ಬಿಜೆಪಿಯವರು ಪತ್ರ ಬರೆದಿದ್ದೆ ನಿಜವಾಗಿದ್ದರೆ ಪ್ರಮಾಣ ಮಾಡಲಿ. ಇಲ್ಲವೇ, ಆ ಪತ್ರ ತೋರಿಸಿದರೆ ತಾವು ಆ ಕ್ಷಣದಿಂದಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸವಾಲು ಹಾಕಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಜಿನ ಮನೆ ನಿರ್ಮಾಣ ವಿಚಾರದಲ್ಲಿ ಹಿಂದೆ ಬಿಜೆಪಿಯವರು ಪತ್ರ ಕೊಟ್ಟಿದ್ದರೆ, ಯಾವುದಾದರೂ ದೇವಸ್ಥಾನದಲ್ಲಿ ಗಂಟೆ ಹೊಡೆದು ಅದನ್ನು ಹೇಳಲಿ. ಇಲ್ಲವೇ, ಬರೆದಿದ್ದ ಪತ್ರವನ್ನು ತೋರಿಸಿದರೆ ಆ ಕ್ಷಣದಿಂದಲೇ ತಾವು ರಾಜಕೀಯ ನಿವೃತ್ತಿ ಪಡೆಯುತ್ತೇವೆ. ಅಕಾಸ್ಮಾತ್ ಪತ್ರ ಬರೆಯದೇ ಇದ್ದರೆ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್ ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಎಂದು ಪ್ರಶ್ನಿಸಿದರು.
ಕುಂದುವಾಡ ಕೆರೆಯ ಬಳಿ ಗಾಜಿನ ಮನೆ ನಿರ್ಮಾಣಕ್ಕಾಗಿ ಬಿಜೆ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಎಸ್.ಎ.ರವೀಂದ್ರನಾಥ್ ಪತ್ರ ಬರೆದು ಒತ್ತಾಯಿಸಿದ್ದರೆಂದು ಸಂಸದ ಸಿದ್ದೇಶ್ವರ ಹೇಳುತ್ತಿದ್ದಾರೆ. ಅಲ್ಲದೆ, ರವೀಂದ್ರನಾಥ ಸಹ ಗಾಜಿನ ಮನೆ ತಮ್ಮ ಕೊಡುಗೆ ಎಂಬುದಾಗಿ ಹೇಳುತ್ತಿದ್ದಾರೆ. ಈ ಇಬ್ಬರೂ ಹಿಂದೆಯೇ ಗಾಜಿನ ಮನೆ ನಿರ್ಮಾಣಕ್ಕೆ ಪತ್ರವನ್ನ ಬರೆದಿದ್ದರೆ ಅದನ್ನು ದಾಖಲೆ ಪ್ರಕಾರ ತೋರಿಸಲಿ ಎಂದು ಹೇಳಿದರು.
ಸಿದ್ದೇಶ್ವರ್‍ಗೆ, ರವೀಂದ್ರನಾಥ್‍ಗೆ ಹಾಗೂ ಬಿಜೆಪಿಯವರಿಗೆ ಗಾಜಿನ ಮನೆಯೆಂದರೇನೆಂಬುದೇ ಗೊತ್ತಿಲ್ಲ. ರಾಜ್ಯದಲ್ಲೇ ಎಲ್ಲೂ ಇಲ್ಲದಂಥಹ ಗಾಜಿನ ಮನೆಯನ್ನು ಕಾಂಗ್ರೆಸ್ ಸರ್ಕಾರದಿಂದ ನಿರ್ಮಾಣ ಮಾಡಿದ್ದೇವೆ. ಆದರೆ, ಈಗ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ ಕಳ್ಳರು ಎಂದು ಹರಿಹಾಯ್ದರು.
ಸಂಸದ ಸಿದ್ದೇಶ್ವರ್ ಎಲ್ಲದಕ್ಕೂ ಪತ್ರ, ಟಪಾಲು ಬರೆದಿದ್ದೇನೆಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಪತ್ರಕ್ಕೆ ಎಲ್ಲಿಯೂ ಯಾವ ಕಿಮ್ಮತ್ತು ಸಹ ಇಲ್ಲ. ಯಾವುದನ್ನಾದರೂ ನೋಡುವುದು, ಅದಕ್ಕೊಂದು ಪತ್ರ ಬರೆದಿದ್ದೇನೆಂದು ಹೇಳಿಕೊಳ್ಳುವುದೇ ಸಂಸದರ ಕಥೆಯಾಗಿದೆ. ಬರೀ ಸುಳ್ಳು ಹೇಳಿಕೊಳ್ಳುತ್ತಲೇ ಬಂದ ಬಿಜೆಪಿಯವರು ಈಗ ಗಾಜಿನ ಮನೆ ವಿಚಾರದಲ್ಲೂ ಸುಳ್ಳು ಹೇಳುತ್ತಿದ್ದಾರೆಂದು ಆಪಾದಿಸಿದರು.
ಗಾಜಿನ ಮನೆಗೆ ಮಹಾನಗರ ಪಾಲಿಕೆಯವರು ಶಾಮನೂರು ಗಾಜಿನ ಮನೆ ಎಂಬುದಾಗಿ ಹೆಸರಿಡಲು ನಿರ್ಧರಿಸಿದ್ದರೆ, ಜಿಲ್ಲಾ ಪಂಚಾಯಿತಿಯವರು ಕುಂದುವಾಡ ಗಾಜಿನ ಮನೆ ಸೇರಿದಂತೆ ಬೇರೆ ಬೇರೆ ಹೆಸರು ಹೇಳುತ್ತಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಹೆಸರು ಹೇಳುತ್ತಿದ್ದಾರೆ. ಜಾತಿ ಪ್ರೇಮದಿಂದ ಕೆಲವರು ಕೆಲ ಹೆಸರು ಹೇಳಿದರೆ, ಮತ್ತೆ ಕೆಲವರು ರಾಷ್ಟ್ರ, ರಾಜ್ಯ ನಾಯಕರ ಹೆಸರು ಹೇಳುತ್ತಿದ್ದಾರೆ. ಶಾಮನೂರೋ? ಶಾಬನೂರೋ ಪಾಲಿಕೆಯವರು ಏನು ಹೆಸರಿಟ್ಟಿದ್ದಾರೋ ಅದೇ ಸೂಕ್ತವಿದೆ. ಬೇಕಿದ್ದರೆ ಶಾಬನೂರು ಗಾಜಿನ ಮನೆ ಅಂತಲೇ ಇಟ್ಟುಕೊಳ್ಳಲಿ. ಶಾಮನೂರು ಗ್ರಾಮಸ್ಥರೂ ಗಾಜಿನ ಮನೆಗೆ ತಮ್ಮ ಊರಿನ ಹೆಸರಿಡಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ಗಾಜಿನ ಮನೆಗೆ ಹೆಸರಿಡುವ ವಿಚಾರದಲ್ಲಿ ಬಿಜೆಪಿಯವರು ಪದೇ, ಪದೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂಥವರ ಮಾತಿಗೆ ಕಿವಿಗೊಡುತ್ತಾ ಹೋದರೆ, ಈಗ ಹೇಳುತ್ತಿರುವ ಹೆಸರುಗಳನ್ನೆಲ್ಲಾ ಬಿಟ್ಟು, ಕೊನೆಗೊಂದು ದಿನ ಗಾಜಿನ ಮನೆಗೆ ನಮ್ಮವೇ ಹೆಸರಿಡಿ ಅಂದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಲೇವಡಿ ಮಾಡಿದರು.ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ