ಅಸ್ತಿತ್ವಕ್ಕಾಗಿ ರಾಜಕೀಯ ಮಾಡುವ ಪ್ರಮೇಯವಿಲ್ಲ: ತಿರುಗೇಟು

ತುರುವೇಕೆರೆ

      3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂ.ಟಿ.ಕೃಷ್ಣಪ್ಪ ಅವರು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ರಾಜಕೀಯ ಮಾಡುವ ಪ್ರಮೇಯವಿಲ್ಲ. ಇದನ್ನು ಬಿಜೆಪಿ ಮುಖಂಡರು ಅರಿಯಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೋಳಾಲಗಂಗಾಧರ್ ತಿರುಗೇಟು ನೀಡಿದರು.

     ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ಹೇಮಾವತಿ ನಾಲಾ ನೀರಿನ ವಿಚಾರದಲ್ಲಿ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಬಗ್ಗೆ ಬಿಜೆಪಿ ಮುಖಂಡರ ಟೀಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

       ಬಿಜೆಪಿಯ ಕೆಲವು ಮುಖಂಡರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ನೀರಾವರಿ ಹೋರಾಟವನ್ನು ರಾಜಕೀಯ ಗಿಮಿಕ್ ಎಂದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂಬ ಮಾತುಗಳನ್ನಾಡಿರುವುದು ಅವರ ಅಸಹಾಯಕತೆಯನ್ನು ಸೂಚಿಸುತ್ತದೆ. ಎಂ.ಟಿ.ಕೃಷ್ಣಪ್ಪ ರಾಜಕೀಯಕ್ಕೆ ಬರುವ 9 ವರ್ಷಗಳ ಮುನ್ನ ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ.

      ಅವರಿಗೆ ಆಡಳಿತ ನಡೆಸಿರುವ ಅನುಭವವೂ ಇದೆ. ಅವರಿಗೆ ಪ್ರಚಾರ ಅನವಶ್ಯಕ. ಅವರು ಒಬ್ಬ ಹುಟ್ಟು ಹೋರಾಟಗಾರರು ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಇಂತಹ ವ್ಯಕ್ತಿತ್ವ ಹೊಂದಿರುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಬಗ್ಗೆ ಲಘುವಾಗಿ ಮಾತನಾಡುವುದು ಬಿಜೆಪಿ ಮುಖಂಡರಿಗೆ ಶೋಭೆ ತರುವಂಥದ್ದಲ್ಲ. ಅಧಿಕಾರದಲ್ಲಿ ಇಲ್ಲದಿದ್ದರೂ ಇವರ ಪ್ರಭಾವ ಎಂತಹದ್ದೆಂದು ತಾಲ್ಲೂಕಿನ ಜನತೆಗೆ ಈಗಾಗಲೆ ತಿಳಿದಿದೆ. ಕಾಂಗ್ರೆಸ್-ಜೆಡಿಎಸ್‍ನ ಸಮ್ಮಿಶ್ರ ಸರ್ಕಾರ ಬಿಜೆಪಿ ಶಾಸಕರಿಗೆ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ್ದಾರೆ.

      ಆದರೆ ಎಂ.ಟಿ.ಕೃಷ್ಣಪ್ಪನವರು ಅಧಿಕಾರದಲಿದ್ದಾಗ ಎರಡು ಬಾರಿಯು ವಿರೋಧ ಪಕ್ಷದ ಸ್ಥಾನದಲ್ಲಿಯೇ ಇದ್ದವರು ಹಾಗೂ ಕಳೆದ ಬಾರಿ ಬರಗಾಲವಿದ್ದರೂ ಅವರು ಎಂದಿಗೂ ಎದೆಗುಂದದೆ ತಾಲ್ಲೂಕಿನ ರೈತರನ್ನು ಕಟ್ಟಿಕೊಂಡು ಕೆರೆಗಳನ್ನು ತುಂಬಿಸಿ, ಬರದ ಅನುದಾನ ಪಡೆದವರು. ಹಾಲಿ ಶಾಸಕರು ತನ್ನ ಜವಾಬ್ದಾರಿ ಅರಿತು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿ. ಈಗ ಚುನಾವಣೆ ನಡೆದರೂ ಸಹ ಮಾಜಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

       ಮೊನ್ನೆ ನೀರಾವರಿ ಹೋರಾಟಕ್ಕೆ ಇಳಿದ ಸಂದರ್ಭದಲ್ಲಿ ಕಾನೂನಾತ್ಮಕ ತೊಡಕು ಆಗಬಹುದು ಎಂದು ಅರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಕೃಷ್ಣಪ್ಪನವರೊಂದಿಗೆ ಹಾಗೂ ಎಂಜಿನಿಯರ್‍ಗಳೊಂದಿಗೆ ಮಾತನಾಡಿ ನೀರು ಹರಿಸಲು ಕಾರಣರಾದರು. ಇದು ಕೃಷ್ಣಪ್ಪನವರ ಶಕ್ತಿಯನ್ನು ಬಿಂಬಿಸುತ್ತದೆ. ಅವರ ಅವಧಿಯಲ್ಲಿ ಮಾಡಿರುವ ಸಾಧನೆಗಳು ಏನು ಎಂಬುದು ಇಡೀ ಜಿಲ್ಲೆಗೆ ತಿಳಿದಿದೆ.

       ಕೃಷ್ಣಪ್ಪನವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ರಸ್ತೆ ಚರಂಡಿ ನಿರ್ಮಾಣವನ್ನು ಬಿಜೆಪಿ ಮುಖಂಡರು ಒಮ್ಮೆ ಅವಲೋಕಿಸಿಕೊಳ್ಳಲಿ . ಸದ್ಯ ಕೃಷ್ಣಪ್ಪನವರು ಮಾಡಿರುವ ರಸ್ತೆಗಳ ಗುಂಡಿ ಮುಚ್ಚಿ, ಸರ್ಕಾರಿ ಕಟ್ಟಡಗಳ ದುರಸ್ಥಿ ಮಾಡಿ ಸುಣ್ಣಬಣ್ಣ ಹೊಡಿಸಲಿ ಸಾಕು ಎಂದು ಕೋಳಾಲ ಗಂಗಾಧರ್ ಬಿಜೆಪಿ ಮುಖಂಡರಿಗೆ ನೇರ ಸವಾಲು ಹಾಕಿದರು.

      ಎಪಿಎಂಸಿ ನಿರ್ದೇಶಕ ನರಸಿಂಹರಾಜು ಮಾತನಾಡಿ ಕೃಷ್ಣಪ್ಪನವರ 15 ವರ್ಷಗಳ ಆಡಳಿತಾವಧಿಯಲ್ಲಿ ಆಗಿರುವ ಲೋಪ ದೋಷಗಳನ್ನು ತನಿಖೆಗೆ ಒಪ್ಪಿಸಲಿ. ಬಿಜೆಪಿಯ ಶಾಸಕರೇ ಅಧಿಕಾರದಲ್ಲಿದ್ದಾರೆ. ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಹಾಲಿ ಶಾಸಕ ಮಸಾಲಾ ಜಯರಾಮ್‍ರವರ ಆಡಳಿತ ವೈಖರಿಯನ್ನು ಗಮನಿಸಿರುವ ಕ್ಷೇತ್ರದ ಜನರು ಭ್ರಮನಿರಸನರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ. ಆಡಳಿತ ನಡೆಸುವ ಅನನುಭವ ಕಾಡುತ್ತಿದೆ. ಈ ಬಾರಿಯೂ ಕೃಷ್ಣಪ್ಪನವರನ್ನೇ ಗೆಲ್ಲಿಸಬೇಕಿತ್ತು ಎಂದು ಜನರು ಮರುಗುತ್ತಿದ್ದಾರೆ ಎಂದು ಜೆಡಿಎಸ್‍ನ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್‍ಮೂರ್ತಿ ಹೇಳಿದರು.

      ಹಾಲಿ ಶಾಸಕರು ಕಣ್ಣೀರು ಹಾಕದೆ ಹೋರಾಟ ಮಾಡಿದ್ದರೆ ತಾಲ್ಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸಬಹುದಿತ್ತು. ಕಣ್ಣೀರು ಹಾಕುವುದನ್ನು ಕೈಬಿಟ್ಟು ಹೋರಾಟ ಮಾಡಿ ಎಂದು ಮಾಚೇನಹಳ್ಳಿ ರವಿ ತಿಳಿಸಿದರು.ಸುದ್ದಿ ಗೋಷ್ಠಿಯಲ್ಲಿ ಚೇತನ್ ಮತ್ತು ಜೆಡಿಎಸ್ ಮುಖಂಡರು ಇದ್ದರು.

Recent Articles

spot_img

Related Stories

Share via
Copy link