ದಾವಣಗೆರೆ
ನೌಕರರ ವೇತನ ಸೇರಿದಂತೆ ಇತರೆ ಸೌಲಭ್ಯಗಳ ಹೆಚ್ಚಳಕ್ಕೆ ಆಯಕಟ್ಟಿನ ಜಾಗದಲ್ಲಿರುವ ಐಎಎಸ್ ಅಧಿಕಾರಿಗಳೇ ಅಡ್ಡಿಯಾಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಆರೋಪಿಸಿದ್ದಾರೆ.
ನಗರದ ಹದಡಿ ರಸ್ತೆಯಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿರು.
ಸಮಾಜದ ಅಂಕುಡೊಂಕು ತಿದ್ದಿ, ಭವಿಷ್ಯದ ಪ್ರಜೆಗಳನ್ನು ತಯಾರಿಸುವ ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ, ಮುಷ್ಕರ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಶಿಕ್ಷಕರು ಸೇರಿದಂತೆ ನೌಕರರ ಬೇಡಿಕೆಗಳ ಈಡೇರಿಕೆಗೆ ಜನಪ್ರತಿನಿಧಿಗಳು ಅಡ್ಡಿಯಾಗಿದ್ದಾರೆಂಬುದಾಗಿ ಅಪಪ್ರಚಾರ ಮಾಡುತ್ತಿರುವುದು ಶುದ್ಧ ಸುಳ್ಳು. ನಿಮ್ಮ ಬೇಡಿಕೆಗಳು ಈಡೇರದಂತೆ ತಡೆದಿರುವುದು ಆಯಕಟ್ಟಿನ ಜಾಗದಲ್ಲಿರುವ ಐಎಎಸ್ ಅಧಿಕಾರಿಗಳೇ ಹೊರತು, ರಾಜಕಾರಣಿಗಳಲ್ಲ ಎಂದು ಸ್ಪಷ್ಟಪಡಿಸಿದರು.
ನಲವತ್ತು ವರ್ಷ ಸೇವೆ ಸಲ್ಲಿಸುವ ಸರ್ಕಾರಿ ನೌಕರ ನಿವೃತ್ತಿಯ ನಂತರ ಬರಿಗೈಲಿ ಮನೆಗೆ ಹೋಗುವಂತಹ ನೀತಿ ಜಾರಿಗೆ ತಂದಿರುವುದು ಅವೈಜ್ಞಾನಿಕವಾಗಿದೆ. ನ್ಯಾಯಾಧೀಶರ ವೇತನ ಇದ್ದಕ್ಕಿದ್ದಂತೆಯೆ 2.50 ಲಕ್ಷ ರೂಗಳಿಗೆ ಏರಿಕೆ ಆಗುತ್ತದೆ. ಅದೇರೀತಿ ಲೋಕಸಭಾ ಸದಸ್ಯರು ಗೌರವಧನ ಸಹ ಮೂರುಪಟ್ಟು ಹೆಚ್ಚಾಗುತ್ತದೆ. ಆದರೆ, 40 ವರ್ಷಗಳ ಕಾಲ ಜನರ ಸೇವೆ ಮಾಡುವ ನೌಕರರು ತಮ್ಮ ಸಂವಿಧಾನಬದ್ದ ಸೌಲಭ್ಯಗಳನ್ನು ಕೇಳಿದರೆ, ದೊಡ್ಡ ಚರ್ಚೆ ಆರಂಭಿಸುತ್ತಾರೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರ ವಿವಿಧ ಬೇಡಿಕೆಗಳಿಗಾಗಿ ರಾಜ್ಯದ ಎಲ್ಲಾ 14 ಜನ ವಿಧಾನ ಪರಿಷತ್ ಸದಸ್ಯರು ಸಹ ಪಕ್ಷ ಭೇದ ಮರೆತು ಹೋರಾಟ ನಡೆಸಿದ್ದು, ಶಿಕ್ಷಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದ್ದು, ನಿಮ್ಮ ಐದಾರು ಬೇಡಿಕೆಗಳು ಶೀಘ್ರದಲ್ಲಿಯೇ ಈಡೇರಲಿವೆ ಎಂದು ಘೋಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕು. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಸಹ ನೂರಕ್ಕೆ ನೂರು ಫಲಿತಾಂಶ ಪಡೆದಿವೆ. ಇದೇರೀತಿ ಎಲ್ಲಾ ಶಾಲೆಗಳಲ್ಲೂ ಉತ್ತಮ ಫಲಿತಾಂಶ ತರಲು ಶಿಕ್ಷಕರು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ.ಮಂಜುನಾಥ್ ಮಾತನಾಡಿ, ಶಿಕ್ಷಕರ ಮೇಲಿರುವ ಹೊರೆ ಇಳಿಸಿದರೆ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ. ಇದೇರೀತಿಯ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೆ, ರೈತರ ಮಾದರಿಯಲ್ಲಿ ಶಿಕ್ಷಕರು ಕೂಡ ಆತ್ಮಹತ್ಯೆಯ ದಾರಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಶಿಕ್ಷಕರಿಗೆ ಇರುವ ಕಾರ್ಯದೊತ್ತಡವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಶೇ. 100 ಫಲಿತಾಂಶ ಪಡೆದ ಸರ್ಕಾರಿ ಶಾಲೆಯ ಶಿಕ್ಷಕರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಡಾ.ವೈ.ಎ.ನಾರಾಯಣಸ್ವಾಮಿ, ಆರ್.ಚೌಡರೆಡ್ಡಿ ತೂಪಲ್ಲಿ, ರಮೇಶ್ ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಬಿ.ಎಂ.ನಿರಂಜನ ಮೂರ್ತಿ , ಬಿ.ಆರ್.ಬಸವರಾಜಪ್ಪ, ಬಿ.ಸಿ.ಸಿದ್ದಪ್ಪ, ಉಷಾಕುಮಾರಿ, ಪುಷ್ಪಲತಾ, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ