ದಾವಣಗೆರೆ:
ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ಐಎಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರ ತೆರೆಯುವ ಉದ್ದೇಶವಿದೆ ಎಂದು ಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಭಾನುವಾರ ನಗರದ ಉಪ್ಪಾರ ವಿದ್ಯಾರ್ಥಿ ನಿಲಯದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ಐಎಎಸ್ ಹಾಗೂ ಕೆಎಎಸ್ ತರಬೇತಿ ಕೇಂದ್ರ ತೆರೆಯುವುದಲ್ಲದೇ, ಪ್ರತಿಭಾವಂತ ಬಡ ಮಕ್ಕಳಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಅವರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರು.
ಐಎಎಸ್, ಐಪಿಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಮ್ಮ ಸಮಾಜದ ಮಕ್ಕಳು ಹೆಚ್ಚಾಗಿ ತೆಗೆದುಕೊಳ್ಳಬೇಕು. ಇದು ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದರು.
ಧಾರವಾಡದಲ್ಲಿ ಲಕ್ಷ್ಮಣ ಉಪ್ಪಾರ್ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುತ್ತಿದ್ದಾರೆ.
ಈ ತರಬೇತಿಯನ್ನು ಬೇರೆ ಬೇರೆ ಜಿಲ್ಲೆಗಳಲ್ಲೂ ಕೊಡಿಸಲಾಗುವುದು ಎಂದ ಶ್ರೀಗಳು, ದಾವಣಗೆರೆಯಲ್ಲಿ ಉಪ್ಪಾರ ಹಾಸ್ಟೆಲ್ ಅತ್ಯುತ್ತಮವಾಗಿದ್ದು, ಇದೇ ರೀತಿ ರಾಜ್ಯಾದ್ಯಂತ ಉಪ್ಪಾರರ ಹಾಸ್ಟೆಲ್‍ಗಳು ರೂಪುಗೊಂಡು ಸಮಾಜದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ಬಂದು ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ಸಮಾಜದ ಮುಖಂಡರಿಗೆ ಸಲಹೆ ನೀಡಿದರು.
ರಾಜ್ಯದ ಯಾವುದೇ ಭಾಗದಲ್ಲಿ ಉಪ್ಪಾರ ಸಮುದಾಯದ ವಿದ್ಯಾರ್ಥಿ ನಿಲಯಗಳು ದಾವಣಗೆಯಲ್ಲಿರುವಷ್ಟು ಸುಸಜ್ಜಿತವಾಗಿಲ್ಲ. ಈಗ ಇಲ್ಲಿ ಗ್ರಂಥಾಲಯವು ಉದ್ಘಾಟನೆಯಾಗಿದ್ದು, ಹೆಚ್ಚಿನ ಕೊಠಡಿಗಳು ಸಹ ಲಭ್ಯವಾಗಿವೆ. ಇವುಗಳ ಸದುಪಯೋಗ ಪಡೆಯುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಶೈಕ್ಷಣಿಕ ಸಾಧನೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಇಂದು ಗಂಡು ಮಕ್ಕಳಿಗಿಂತಲೂ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮಂದಿದ್ದಾರೆ. ಆದರೆ, ಉಪ್ಪಾರ ಸಮಾಜದಲ್ಲಿ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯಗಳು ಇದುವರೆಗೂ ನಿರ್ಮಿಸಿಲ್ಲ. ವಿದ್ಯಾರ್ಥಿನಿಯರಿಗೂ ವಸತಿ ನಿಲಯ ಸ್ಥಾಪಿಸಲು ಸಮಾಜದ ಮುಖಂಡರು ಮುಂದಾಗಬೇಕೆಂದು ಹೇಳಿದರು.
ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಉಪ್ಪಾರರು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೇ ದೇಶದ ವಿವಿಧ ಭಾಗಗಳಲ್ಲಿದ್ದಾರೆ. ದೇಶದ ಎಲ್ಲೆಡೆ ಉಪ್ಪಾರರ ಸಂಖ್ಯೆ ಹೆಚ್ಚಾಗಿದೆಯಾದರೂ, ಕರ್ನಾಟಕದಲ್ಲಿ ಕಡಿಮೆ ಇದೆ. ಉಪ್ಪಾರ ಸಮುದಾಯದವರು ವಿದ್ಯಾವಂತರಾದರೆ ಬೆಳವಣಿಗೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜಪ್ಪ ತುರ್ಚಘಟ್ಟ ಮಾತನಾಡಿ, ನಮ್ಮ ಉಪ್ಪಾರ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಸಮಾಜವು ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿ. ಆದ್ದರಿಂದ ಇನ್ನೂ ಮುಂದೆ ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸಮಾಜದ ವಿಷಯ ಬಂದಾಗ ಒಂದಾಗಿ ಮುನ್ನಡೆಯೋಣ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ. ರೇವಣ್ಣ ಮಾತನಾಡಿ, ಐಎಎಸ್ ಹಾಗೂ ಕೆಎಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಮಾಜದ ಮಕ್ಕಳಿಂದ ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮಲ್ಲಿ ನಮ್ಮಿಂದ ಸಾಧ್ಯವಿಲ್ಲ ಎಂಬ ಕೀಳಿರಿಮೆ ತೊರೆದು ಸಾಧನೆಗೆ ಮುಂದಾಗಬೇಕು. ಪೋಷಕರು ಸಹ ಅದಕ್ಕೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಹೆಚ್. ತಿಪ್ಪಣ್ಣ ತುರ್ಚಘಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಎಸ್.ಸಿದ್ದಲಿಂಗಪ್ಪ ದೊಡ್ಡಬಾತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ತುರ್ಚಘಟ್ಟ ತಾ.ಪಂ. ಸದಸ್ಯೆ ಮೀನಾ ಶ್ರೀನಿವಾಸ್, ಮಾಯಕೊಂಡ ತಾ.ಪಂ. ಸದಸ್ಯ ಜಿ.ಎನ್. ನಾಗರಾಜ್, ದೊಡ್ಡಬಾತಿ ಗ್ರಾ.ಪಂ. ಅಧ್ಯಕ್ಷ ಎಸ್.ಮಂಜುನಾಥ್, ಕೈದಾಳೆ ಗ್ರಾ.ಪಂ. ಅಧ್ಯಕ್ಷ ವೈ.ಟಿ. ಗುರುಪ್ರಸಾದ್, ಮುಖಂಡರಾದ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







