ತುಮಕೂರು
ತುಮಕೂರು ಜಿಲ್ಲೆಯಲ್ಲಿ ಶಿಶುಮರಣ ಉಂಟಾಗುತ್ತಿರುವ ಬಗ್ಗೆ ಕಾರಣವನ್ನು ಪತ್ತೆ ಹಚ್ಚಿ ಶಿಶುಮರಣವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ 2019-20ನೇ ಸಾಲಿನ ಮೂರನೇ ತ್ರೈಮಾಸಿಕ ಸಭೆ ನಡೆಸಿ ಅವರು ಮಾತನಾಡಿದರು. ಇತ್ತೀಚೆಗೆ ತಾಲೂಕುವಾರು ಪ್ರಾಥಮಿಕ ಆಸ್ಪತ್ರೆಗಳಿಗೆ ಬರುವ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ. ಸಣ್ಣ-ಪುಟ್ಟ ಸಮಸ್ಯೆಗಳಿರುವ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ ಅಲ್ಲದೆ ಜಿಲ್ಲೆಯಲ್ಲಿ ಶಿಶುಮರಣ ಸಂಖ್ಯೆ ಹೆಚ್ಚಾಗುತ್ತಿದೆ ಇದನ್ನು ನಾನು ಸಹಿಸುವುದಿಲ್ಲ.
ಗುಬ್ಬಿ ತಾಲೂಕು ಆಸ್ಪತ್ರೆಯನ್ನು ನೋಡಿದ್ದೇನೆ. ಅಲ್ಲಿ ಸಂಜೆ 4 ಗಂಟೆಯಾದರೆ ಯಾವ ವೈದ್ಯರು ಇರುವುದಿಲ್ಲ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಜಿಲ್ಲೆಯಲ್ಲಿ ಯಾವ ಸಮಸ್ಯೆಯಿಂದ ಶಿಶುಮರಣವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಆದಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ದೊರೆಯುವಂತಾಗಬೇಕು. ಸಂಕೀರ್ಣ ಸಂದರ್ಭಗಳಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕೆಂದು ಡಿಹೆಚ್‍ಓ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‍ಗಳನ್ನು ಇದುವರೆಗೂ 3,73,960 ಫಲಾನುಭವಿಗಳಿಗೆ ವಿತರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1,02,093, ಸೇವಾ ಸಿಂಧು ಕೇಂದ್ರಗಳಲ್ಲಿ 2,18,003 ತುಮಕೂರು 1 ಕೇಂದ್ರಗಳಲ್ಲಿ 56,465 ಕಾರ್ಡ್‍ಗಳನ್ನು ವಿತರಿಸಲಾಗಿದೆ ಎಂದು ಸಭೆಗೆ ಡಿಹೆಚ್‍ಓ ಡಾ|| ಚಂದ್ರಿಕಾ ಸಭೆಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ 381 ಭವನಗಳ ಪೈಕಿ 174 ಭವನಗಳು ಪೂರ್ಣಗೊಂಡಿದ್ದು, 70 ಭವನಗಳು ವಿವಿಧ ಹಂತದ ಪ್ರಗತಿಯಲ್ಲಿದ್ದು, ಈ ಪೈಕಿ 32 ಭವನಗಳಿಗೆ ಏಜೆನ್ಸಿ ನಿಗಧಿಪಡಿಸಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಲ್ಲದೆ 28 ಭವನಗಳಿಗೆ ನಿವೇಶನ ತಕರಾರಿನಲ್ಲಿದೆ ಎಂದು ಸಭೆಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್‍ನಾಥ್ ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಜಿಲ್ಲೆಯ 10 ತಾಲೂಕಿನಲ್ಲಿ 112 ವಿದ್ಯಾರ್ಥಿನಿಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 68 ಸ್ವಂತ ಕಟ್ಟಡ ಹೊಂದಿದ್ದು, ಪ್ರಸ್ತುತ 10 ವಿದ್ಯಾರ್ಥಿನಿಲಯಗಳ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 32 ನಿವೇಶನಗಳು ಲಭ್ಯವಿರುತ್ತದೆ. ಆದರೆ ಶಿರಾ ಮತ್ತು ಗುಬ್ಬಿ ತಾಲೂಕುಗಳ 02 ವಿದ್ಯಾರ್ಥಿನಿಲಯಗಳಿಗೆ ನಿವೇಶನ ಲಭ್ಯವಾಗಿರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶಿರಾ ಹಾಗೂ ಗುಬ್ಬಿ ತಾಲೂಕಿನಲ್ಲಿ ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ಜನರು ಭಯಭೀತರಾಗಿದ್ದಾರೆ. ಇತ್ತೀಚಿಗೆ ಚಿರತೆ ದಾಳಿ ಮಾಡಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅದಕ್ಕಾಗಿ ದಟ್ಟವಾಗಿರುವ ಪೊದೆಗಳನ್ನು ತೆರವುಗೊಳಿಸಬೇಕು. ಮನುಷ್ಯ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುವ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸಚಿವರು ತಿಳಿಸಿದಾಗ ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿ, ಈಗಾಗಲೇ 30 ಬೋನ್‍ಗಳನ್ನು ಇಟ್ಟಿದ್ದು, ಬನ್ನೇರುಘಟ್ಟ ಅರಣ್ಯದಿಂದ ಬಂದಿರುವ 2 ತಂಡಗಳು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಿತರಿಸುವ ಜಾಬ್ ಕಾರ್ಡ್‍ಗಳ ಗುರಿಯನ್ನು ಹೆಚ್ಚಿಸಬೇಕು. ತೋಟಗಾರಿಕೆ, ಕೃಷಿ ಇಲಾಖೆಗಳ ಸಹಯೋಗದಲ್ಲಿ ಜಾಬ್ ಕಾರ್ಡ್‍ಗಳನ್ನು ಶೀಘ್ರವಾಗಿ ವಿತರಿಸಬೇಕು ಎಂದು ಸಿಇಒ ಅವರಿಗೆ ಸೂಚಿಸಿದರು. ಅಲ್ಲದೇ ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಬೇಕು ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಹೇಮಾವತಿ ನಾಲೆಯಿಂದ ಕುಣಿಗಲ್ ಕೆರೆಗೆ 395 ಎಂ.ಸಿ.ಎಫ್.ಟಿ ಪ್ರಮಾಣದಷ್ಟು ನೀರನ್ನು ಹರಿಸಲಾಗುತ್ತಿದ್ದು, ಪ್ರಸ್ತುತ ಕೆರೆಯಲ್ಲಿ 533 ಎಂ.ಸಿ.ಎಫ್.ಟಿ ನೀರು ಸಂಗ್ರಹಣೆಯಾಗಿರುತ್ತದೆ. ಶಿರಾ ಮತ್ತು ಕಳ್ಳಂಬೆಳ್ಳ ಕೆರೆಗಳ ಯೋಜನೆಯಡಿಯಲ್ಲಿ ಹಂಚಿಕೆಯಾಗಿರುವ 900.00 ಎಂ.ಸಿ.ಎಫ್.ಟಿ ನೀರಿನ ಎದುರಾಗಿ 995.87 ಎಂ.ಸಿ.ಎಫ್.ಟಿ ಹಾಗೂ ಗುಬ್ಬಿ ತಾಲೂಕಿನ ಕಡಬ ಕೆರೆಯಿಂದ 70.44 ಎಂ.ಸಿ.ಎಫ್.ಟಿ ನೀರಿನ ಎದುರಾಗಿ 235 ಎಂ.ಸಿ.ಎಫ್.ಟಿ ನೀರನ್ನು ಹರಿಸಲಾಗಿದೆ. ಗೂಳೂರು-ಹೆಬ್ಬೂರು ಯೋಜನೆಯ ಒಟ್ಟು 49 ಕೆರೆಗಳ ಪೈಕಿ 21 ಕೆರೆಗಳಿಗೆ 130.49 ಎಂ.ಸಿ.ಎಫ್.ಟಿ ನೀರನ್ನು ಪಂಪ್ ಮಾಡಲಾಗಿದೆ ಎಂದು ಹೇಮಾವತಿ ನಾಲಾ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಗೂಳೂರು-ಹೆಬ್ಬೂರು ಕೆರೆಗಳಿಗೆ ನೀರು ಸಂಗ್ರಹದ ಮಟ್ಟ ಕಡಿಮೆಯಿದೆ. ಮುಂದಿನ ಮಾರ್ಚ್‍ನಲ್ಲಿ ಮತ್ತೆ ನೀರು ಹರಿಸಲಾಗುವುದು ಅಲ್ಲಿಯವರೆಗೂ ಆ ವ್ಯಾಪ್ತಿಯ ಗ್ರಾಮಗಳಿಗೆ ನೀರಿನ ಸಮಸ್ಯೆಯಾಗುತ್ತದೆ. ಆದ್ದರಿಂದ ನೀರು ಹರಿಯಲು ಪೈಪ್‍ಲೈನ್ ಸಮಸ್ಯೆಯಾದರೆ ಅದನ್ನು ಬದಲಿಸಿ ನೀರು ಹರಿಸುವಂತೆ ಹೇಮಾವತಿ ನಾಲಾ ಇಂಜಿನಿಯರ್ ಬಾಲಕೃಷ್ಣ ಅವರಿಗೆ ಸೂಚಿಸಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಾಕಿಯಿರುವ ಶೌಚಾಲಯಗಳ ನಿರ್ಮಾಣ ಕಾಮಗಾರಿಗಳನ್ನು ಫೆಬ್ರವರಿ ಮಾಹೆಯೊಳಗಾಗಿ ಪೂರ್ಣಗೊಳಿಸಬೇಕು. ಮುಂದಿನ ಸಭೆಯೊಳಗೆ ಕಾಮಗಾರಿ ನಿಧಾನಗತಿಯಾಗಿರುವುದಕ್ಕೆ ಕಾರಣ ಏನೆಂದು ಮಾಹಿತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ತುಮಕೂರು ಜಿಲ್ಲೆಯಲ್ಲಿ ಆರೋಗ್ಯ ಕಾರ್ಡುಗಳ ವಿತರಣಾ ಕಾರ್ಯವು ಆಂದೋಲನದ ಮಾದರಿಯಲ್ಲಿ ಆಗಬೇಕಿದೆ. ಜಿಲ್ಲೆಯಲ್ಲಿರುವ ಜನಸಂಖ್ಯೆಯನ್ನು ನೋಡಿದರೆ ಇಲ್ಲಿಯವರೆಗೂ ವಿತರಣೆ ಮಾಡಿರುವ ಆರೋಗ್ಯ ಕಾರ್ಡುಗಳು ತೀರಾ ಕಡಿಮೆ ಎಂದು ಸಚಿವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಸಿಇಓ ಅವರು ಗ್ರಾಮ ಪಂಚಾಯತಿಯಲ್ಲಿರುವ ಬಾಪೂಜಿ ಕೇಂದ್ರಗಳ ಮೂಲಕ ಆರೋಗ್ಯ ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು.
ತುಮಕೂರು ನಗರದ ಸುತ್ತ-ಮುತ್ತಲೂ ತರಕಾರಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು. ಇದರಿಂದ ಉತ್ತಮ ಕಾರ್ಯಕ್ರಮವನ್ನು ಸ್ಥಳೀಯವಾಗಿ ಕಲ್ಪಿಸಬೇಕಾಗುತ್ತದೆ. ಆದುದರಿಂದ ತರಕಾರಿ ಬೆಳೆಯುವುದಕ್ಕೆ ಹೆಚ್ಚು ಒತ್ತು ನೀಡಿ ಪ್ರಚಾರ ಮಾಡಿ ಎಂದು ತೋಟಗಾರಿಕಾ ಇಲಾಖಾ ಉಪನಿರ್ದೇಶಕರಿಗೆ ಸೂಚಿಸಿದರು.
ಬೆಂಬಲ ಬೆಲೆ ನೀಡಿ ರಾಗಿ ಖರೀದಿಸುವಾಗ ರೈತರಿಗೆ ತೊಂದರೆಯಾಗದಂತೆ ರೈತರಿಗೆ ಅನುಕೂಲ ಕಲ್ಪಿಸಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜ್ಯೋತಿಗಣೇಶ್, ಸತ್ಯನಾರಾಯಣ, ಬಿ.ಸಿ. ನಾಗೇಶ್, ವೀರಭದ್ರಯ್ಯ, ಪರಿಷತ್ ಶಾಸಕ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‍ಸಿಂಗ್, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಕೋನವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ