ತಿಂಗಳಲ್ಲೇ ಮ್ಯಾನುವಲ್ ಸ್ಕ್ಯಾವೆಂಜರ್ಸ್ ಗುರುತಿಸಿ

ದಾವಣಗೆರೆ:

    ಜಿಲ್ಲೆಯ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಮ್ಯಾನುವೆಲ್ ಸ್ಕ್ಯಾವೆಂಜರ್ಸ್‍ಗಳನ್ನು ಒಂದು ತಿಂಗಳೊಳಗೆ ಗುರುತಿಸಬೇಕೆಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಸೂಚಿಸಿದರು.

    ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಜಿಲ್ಲಾ ಕಾವಲು ಸಮಿತಿ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಮತ್ತು ಸಫಾಯಿ ಕರ್ಮಚಾರಿಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

    ಈಗಾಗಲೇ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 156, ಹರಿಹರ ನಗರಸಭೆಯಲ್ಲಿ 48 ಜನ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಇದ್ದಾರೆಂಬುದಾಗಿ ಹೇಳುತ್ತಿದ್ದೀರಿ, ಇನ್ನುಳಿದಂತೆ ಬೇರೆ ಸ್ಥಳೀಯ ಸಂಸ್ಥೆಗಳಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಆಗಲಿ ಹಾಗೂ ಇವರ ವಾರಸುದಾರರು ಯಾರೂ ಇಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

    ಇದಕ್ಕೆ ಉತ್ತರಿಸಿದ ಆಯಾ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಜಗಳೂರು, ಮಲೆಬೆನ್ನೂರು, ಹೊನ್ನಾಳಿ ಹಾಗೂ ಚನ್ನಗಿರಿ ಇಲ್ಲೆಲ್ಲೂ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಇಲ್ಲ ಎಂಬುದಾಗಿ ಮಾಹಿತಿ ನೀಡಿದರು.ಆಗ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ಇವರ ಬಗ್ಗೆ ಹೇಗೆ ಸಮೀಕ್ಷೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

      ಇದಕ್ಕೆ ಉತ್ತರಿಸದ ಆಯುಕ್ತರು ಪತ್ರಿಕಾ ಪ್ರಕಟಣೆ ನೀಡಿ, 15 ದಿನಗಳ ಕಾಲಾವಕಾಶ ನೀಡಿ, ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಹಾಗೂ ಅವರ ವಾರಸುದಾರರು ಯಾರಾದರೂ ಇದ್ದರೆ, ಬಂದು ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ, ಈ ವರೆಗೂ ಯಾರೂ ಸಹ ಹೆಸರು ನೋಂದಾಯಿಸಿಕೊಂಡಿಲ್ಲ ಎಂದು ವರದಿ ಒಪ್ಪಿಸಿದರು.

      ಇದರಿಂದ ಕೂಪಿತರಾದ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ನನಗೆ ತಿಳಿದಿರುವಂತೆ ಎಲ್ಲ ಕಡೆಗಳಲ್ಲಿಯೂ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಇದ್ದಾರೆ. ಆದರೆ, ನೀವು ಗೊಂದಲದಲ್ಲಿ ಇರುವುದರಿಂದ ಯಾರೂ ಇಲ್ಲ ಎಂಬುದಾಗಿ ಮಾಹಿತಿ ನೀಡುತ್ತಿದ್ದೀರಿ. ನಿಮ್ಮ ಊರುಗಳಿಗೆ ಸಕ್ಕಿಂಗ್ ಮೆಷಿನ್‍ಗಳು ಬಂದು ಐದು ವರ್ಷಗಳಷ್ಟೆಯಾಗಿದೆ.

     ಈ ಯಂತ್ರ ಬರುವ ಮುನ್ನ ಮಲದ ಗುಂಡಿಗೆ ಇಳಿದು ಕೆಲಸ ಯಾರು ಕೆಲಸ ಮಾಡುತ್ತಿದ್ದರು?, ನಾನು ಬಂದು ನಿಮಗೆ ಮ್ಯಾನುವೆಲ್ ಸ್ಕ್ಯಾವೆಂಜರ್ಸ್‍ನ ತೋರಿಸಲಾ ಎಂದು ಖಾರವಾಗಿ ಪ್ರಶ್ನಿಸಿದರು.ನೀವು ಪತ್ರಿಕಾ ಪ್ರಕಟಣೆ ಕೊಟ್ಟು ಸಮೀಕ್ಷೆ ನಡೆಸಿದರೆ ಮ್ಯಾನುವೆಲ್ ಸ್ಕ್ಯಾವೆಂಜರ್ಸ್‍ಗಳು ಬಂದು ಹೆಸರು ನೋಂದಾಯಿಸಿಕೊಂಡು ಬಿಡುತ್ತಾರಾ? ಅವರಿಗೆ ಪೇಪರ್ ಓದಲಿಕ್ಕೆ ಬಂದಿದ್ದರೆ, ಅವರ್ಯಾರೂ ಆ ಕೆಲಸ ಮಾಡುತ್ತಿರಲಿಲ್ಲ. ಎಲ್ಲರೂ ಇಲ್ಲಿ ಬಂದು ಕೂರುತಿದ್ರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

      ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲೂ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಇದ್ದಾರೆ. ಆದರೆ, ಇವರನ್ನು ಗುರುತಿಸದ ಪಿಡಿಓಗಳು ಬರೀ ರಾಜಕಾರಣ ಮಾಡಿಕೊಂಡು ಓಡಾಡ್ತಾರೆ. ಪ್ರತಿ ಗ್ರಾ.ಪಂ. ಮಟ್ಟದಲ್ಲೂ ಐದಾರು ಕುಟುಂಬಗಳು ಇದ್ದೇ ಇರುತ್ತವೆ. ಹೀಗಾಗಿ ಪಿಡಿಓಗಳಿಂದಲೂ ಸಮೀಕ್ಷೆ ಮಾಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

       ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮ್ಯಾನುವೆಲ್ ಸ್ಕಾವೆಂಜರ್ಸ್‍ಗಳನ್ನು ಗುರುತಿಸಲು ಇನ್ನೂ 15 ದಿನಗಳ ಕಾಲಾವಕಾಶ ತೆಗೆದುಕೊಂಡು, ಇವರನ್ನು ಗುರುತಿಸಲು ಬರೀ ಪತ್ರಿಕಾ ಪ್ರಕಟಣೆಗಳನ್ನು ನೀಡದೇ, ಹಳೇಯ ಪೌರ ಕಾರ್ಮಿಕರನ್ನು ಮಾತನಾಡಿಸಿ, ಮಾಹಿತಿ ಪಡೆದು, ಯಾರಾದರೂ ನಿಮ್ಮ, ನಿಮ್ಮ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಇದ್ದರೆ, ಪತ್ತೆ ಹೆಚ್ಚಿ ಎಂದು ಸಲಹೆ ನೀಡಿದರು.

      ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಮಾತನಾಡಿ, ಇನ್ನೂ 15 ದಿನಗಳಲ್ಲಿ ಅಧಿಕಾರಿಗಳು, ಕಾವಲು ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಯಲ್ಲಿ ಎಷ್ಟು ಜನ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಇದ್ದಾರೆ ಎಂಬುದರ ಬಗ್ಗೆ ವರದಿ ತಯಾರಿಸಬೇಕು. ಅಲ್ಲದೇ, ಸಮಿತಿಯ ಸದಸ್ಯರು ಅಧಿಕಾರಿಗಳೊಂದಿಗೆ ಸೇರಿಕೊಂಡು ವರದಿಯಲ್ಲಿರುವ ಹೆಸರನ್ನು ಪರಿಶೀಲಿಸಿ, ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಯಾರು ಮತ್ತು ಸಫಾಯಿ ಕರ್ಮಚಾರಿಗಳು ಯಾರು ಎಂಬುದರ ಬಗ್ಗೆ ಎರಡು ಪಟ್ಟಿ ಮಾಡಿ, ಒಂದು ತಿಂಗಳಲ್ಲಿಯೇ ಜಿಲ್ಲೆಯಲ್ಲಿರುವ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಅವರನ್ನು ಗುರುತಿಸಬೇಕೆಂದು ತಾಕೀತು ಮಾಡಿದರು.

       ಇನ್ನೂ ಈ ವರೆಗೂ ಅವರ ಸಮೀಕ್ಷೆ ಮಾಡುವುದರಲ್ಲೇ ಇದ್ದೇವೆ. ಯಾರಿಗೂ ಸಹ ಪುನರ್ವಸತಿ ಕಲ್ಪಿಸಲಾಗಿಲ್ಲ. ಎಷ್ಟು ಜನ ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿದ್ದಾರೆಂಬುದು ಗೊತ್ತಾದರೆ, ಅವರ ಖಾತೆಗೆ 40 ಸಾವಿರ ರೂ.ಗಳನ್ನು ನೇರವಾಗಿ ಜಮೆ ಮಾಡಲಾಗುವುದು. ಅಲ್ಲದೇ, ಸ್ವಯಂ ಉದ್ಯೋಗ ಕೈಗೊಳ್ಳಲು 25 ಲಕ್ಷ ರೂ.ಗಳ ವರೆಗೆ ಕೇಂದ್ರ ಸರ್ಕಾರವೇ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಕೊಡಿಸಲಿದೆ ಎಂದು ಹೇಳಿದರು.

       ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್‍ಗಳಿಗೆ ಶೇ.50 ರಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂದು ಹೇಳಿದರು.ಕಾವಲು ಸಮಿತಿ ಸದಸ್ಯ ಸುಭಾಷ್ ಮಾತನಾಡಿ, ಪಾಲಿಕೆ ಪೇ ಅಂಡ್ ಯೂಸ್ ಟಾಯಲೆಟ್‍ಗಳನ್ನು ಗುತ್ತಿಗೆದಾರರಿಗೆ 25 ವರ್ಷಗಳ ವರೆಗೆ ನಿರ್ವಹಣೆ ಮಾಡಲು ಗುತ್ತಿಗೆ ನೀಡಿದೆ. ಹೀಗಾಗಿ ಅಲ್ಲಿ ಸ್ಥಳೀಯರು ಹೋಗಿ ಶೌಚಾಲಗಳನ್ನು ಶುಚಿಗೊಳಿಸಿ, ಪುಡಿಗಾಸು ಕೂಲಿ ಪಡೆದು ಬರುತ್ತಾರೆ.

      ಆದರೆ, ಎಲ್ಲಿಂದಲೋ ಬಂದವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ ಕಮ್ಯುನಿಟಿ ಟಾಯಲೇಟ್‍ಗಳನ್ನು ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಹಾಗೂ ಅವರ ವಾರಸುದಾರರಿಗೆ ನಿರ್ವಹಿಸಲು ಬಿಡಬೇಕೆಂದು ಒತ್ತಾಯಿಸಿದರು.
ಹೊರ ರಾಜ್ಯಗಳಿಂದ ಬಂದು ಇಲ್ಲಿ ಪೇ ಅಂಡ್ ಯೂಸ್ ಟಾಯಲೇಟ್‍ಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅವರ ಬದಲಿ ಇರಿಗೆ ಅವುಗಳನ್ನು ನಿರ್ವಹಣೆ ಮಾಡಲು ಕೊಟ್ಟರೇ ಇವರಿಗೂ ಪುನರ್ವಸತಿ ಕಲ್ಪಿಸದಂತಾಗಲಿದೆ. ಆದ್ದರಿಂದ ಪಾಲಿಕೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಸೂಚನೆ ನೀಡಿದರು.

     ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ ಮಾತನಾಡಿ, ನೇರಪಾವತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಖಾಯಂ ಗೊಳಿಸಬೇಕು ಹಾಗೂ ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗಾಗಿ ಮನೆ ನಿರ್ಮಿಸುತ್ತಿರುವುದು ವಿಳಂಬವಾಗಿತ್ತಿದ್ದು, ಕೆಲ ಪೌರ ಕಾರ್ಮಿಕರು ನಾವು ಜೀವಂತವಾಗಿರುವಾಗಲೇ ಮನೆ ಕೊಡ್ತಾರಾ? ಎಂಬುದಾಗಿ ಪ್ರಶ್ನಿಸುತ್ತಿದ್ದಾರೆ.

      ಆದ್ದರಿಂದ ಮನೆ ನಿರ್ಮಾಣವನ್ನು ತಕ್ಷಣ ಪೂರ್ಣ ಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಬೇಕೆಂದು ಆಗ್ರಹಿಸಿದರು.ಶಂಕರ್ ಮಾತನಾಡಿ , ಪೌರ ಕಾರ್ಮಿಕರೆ ಹೆಚ್ಚು ವಾಸವಾಗಿರುವ ಗಾಂಧಿ ನಗರದಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಹಾಗೂ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

    ಸಭೆಯಲ್ಲಿ ಹೆಚ್ಚುವರಿ ಎಸ್‍ಪಿ ರವೀಶ್, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಕುಂಬಾರ್, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ವಿಶ್ವನಾಥ್, ಜಿಲ್ಲಾ ಕಾವಲು ಸಮಿತಿಯ ನೀಲಗಿರಿಯಪ್ಪ, ಮಂಜುಳಾ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಹಾಗೂ ಅಧಿಕಾರಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap