ಶಿರಾಗೇಟ್ ಐಡಿಎಸ್‍ಎಂಟಿ ಲೇಔಟ್: ಕ್ರಮಕ್ಕೆ ತೀರ್ಮಾನ

ತುಮಕೂರು

     ತುಮಕೂರು ನಗರದ ಶಿರಾಗೇಟ್‍ನ ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿಸಮಿತಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಇವುಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿದೆ.

    ಸಮಿತಿಯ ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್-ಅರಳಿಮರದ ಪಾಳ್ಯ-ಜೆಡಿಎಸ್) ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದು, ಪ್ರತ್ಯೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಐ.ಡಿ.ಎಸ್.ಎಂ.ಟಿ. ಯೋಜನೆಗಾಗಿ 108 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಗೊಂಡ ಜಮೀನಿನ ಮಾಲೀಕರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಖಾಲಿನಿವೇಶನಗಳನ್ನು ಪರಿಶೀಲಿಸಿ, ಭೂಮಾಲೀಕರಿಗೆ ಹಂಚಿಕೆ ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಸರೋಜಮ್ಮ ಎಂಬುವವರ ಹೆಸರಿನಲ್ಲಿ 2.38 ಎಕರೆ-ಗುಂಟೆ ಜಮೀನಿದ್ದು, ಅದರಲ್ಲಿ 2.35 ಎಕರೆ-ಗುಂಟೆ ಜಮೀನನ್ನು ಐಡಿಎಸ್‍ಎಂಟಿ ಯೋಜನೆಗೆ ಭೂಸ್ವಾಧಿನಪಡಿಸಿದ್ದು, ಉಳಿದ 0,3 ಗುಂಟೆ ಜಮೀನು ಈ ಲೇಔಟ್ ವ್ಯಾಪ್ತಿಯಲ್ಲಿ ಸೇರಿಕೊಂಡಿದೆ. ಇದನ್ನು ಗುರುತಿಸಿ ಕೊಡುವಂತೆ ಅರ್ಜಿದಾರರು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಫಲಕಾರಿಯಾಗಿಲ್ಲ ಎಂಬ ಬಗ್ಗೆ ಚರ್ಚೆ ನಡೆದು, ಈ ಬಗ್ಗೆ ತುರ್ತಾಗಿ ಪರಿಶೀಲಿಸಿ ಉಳಿಕೆ ಭೂಮಿಯನ್ನು ಗುರುತಿಸಿಕೊಡುವಂತೆ ನಿರ್ದೇಶಿಸಲಾಯಿತು. ಇದೇ ರೀತಿ ರಾಜಣ್ಣ ಎಂಬುವವರ ತಂದೆಯವರ ಸಮಾಧಿ ಜಾಗವೂ ಈ ಲೇಔಟ್‍ನಲ್ಲಿ ಸೇರಿಹೋಗಿದ್ದು, ಆ ಸಮಾಧಿ ಜಾಗವನ್ನು ಸಂಬಂಧಿಸಿದವರಿಗೆ ಬಿಟ್ಟುಕೊಡಬೇಕೆಂದು ಸೂಚನೆ ನೀಡಲಾಯಿತು.
ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಹೆಚ್ಚುವರಿ ಇರುವ ಜಾಗವನ್ನು ಗುರುತಿಸಲು ತುರ್ತಾಗಿ ಸರ್ವೆ ನಡೆಸುವಂತೆ ನಿರ್ದೇಶನ ನೀಡಲಾಯಿತು.

ನಿಗದಿತ ಕಚೇರಿ ಜಾಗಗಳಿಗೆ ನಾಮಫಲಕ ಹಾಕಬೇಕು:

     ಐ.ಡಿ.ಎಸ್.ಎಂ.ಟಿ. ಲೇಔಟ್‍ನಲ್ಲಿ ಸಹಕಾರ ಸಂಘ, ಸಾಂಸ್ಕøತಿಕ ಸಂಘ, ಚಲನಚಿತ್ರ ಮಂದಿರ, ಪೊಲೀಸ್ ಠಾಣೆ, ಅಂಚೆ ಮತ್ತು ತಂತಿ ಇಲಾಖೆ, ಗ್ರಂಥಾಲಯ, ಸಮುದಾಯ ಭವನಕ್ಕೆಂದು ಜಾಗಗಳನ್ನು ಮೀಸಲಾಗಿರಿಸಿದೆ. ಆ ಜಾಗಗಳನ್ನು ಗುರುತಿಸಿ ನಾಮಪತ್ರ ಹಾಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಲೇಔಟ್‍ನÀಲ್ಲಿ ನಿಯಮಾನುಸಾರ ಚಲನಚಿತ್ರ ಮಂದಿರವನ್ನು ಈವರೆಗೂ ಸಂಬಂಧಿಸಿದವರು ನಿರ್ಮಿಸದಿರುವ ಕಾರಣ, ಅವರಿಗೆ ನೋಟೀಸ್ ಜಾರಿಗೊಳಿಸಲು ತೀರ್ಮಾನಿಸಲಾಯಿತು.

    ಇದೇ ಲೇಔಟ್ ನಲ್ಲಿರುವ ಪಶು ಚಿಕಿತ್ಸಾಲಯ ಮತ್ತು ಪ್ರಾಥಮಿಕ ಆರೋಗ್ಯಕೇಂದ್ರದ ಜಾಗವು ಒತ್ತುವರಿ ಆಗಿದೆಯೆಂಬ ಬಗ್ಗೆಯೂ ಚರ್ಚೆ ನಡೆದು, ಈ ಹಿನ್ನೆಲೆಯಲ್ಲಿ ಸದರಿ ಸರ್ಕಾರಿ ಜಾಗವಷ್ಟೇ ಅಲ್ಲದೆ ಇಡೀ ಲೇಔಟ್ ಅನ್ನೇ ಸಂಪೂರ್ಣವಾಗಿ ಸರ್ವೆ ಮಾಡಿಸುವಂತೆ ಪಾಲಿಕೆಯ ಕಂದಾಯ ಶಾಖೆಗೆ ಸೂಚಿಸಲಾಯಿತು.

   ಇದೇ ರೀತಿ ಐ.ಡಿ.ಎಸ್.ಎಂ.ಟಿ. ವಾಣಿಜ್ಯ ಸಂಕೀರ್ಣದ ಪರಿಸ್ಥಿತಿಯನ್ನೂ ಸಭೆಯಲ್ಲಿ ಚರ್ಚಿಸಲಾಯಿತು. ಇಲ್ಲಿ ಶೌಚಾಲಯ ಕ್ಕೆಂದು ಮೀಸಲಾಗಿದ್ದ ಕೊಠಡಿಯನ್ನೂ ಎರಡೂ ಕಡೆ ಶೆಟರ್ ಹಾಕಿ ಅನಧಿಕೃತವಾಗಿ ಬಾಡಿಗೆಗೆ ನೀಡಿದ್ದ ಬಗ್ಗೆ ಪರಿಶೀಲಿಸಲಾಯಿತು. ಇದೇ ವಾಣಿಜ್ಯ ಸಂಕೀರ್ಣದಲ್ಲೇ ಒಂದು ಮಳಿಗೆಯನ್ನು ಅಂಗನವಾಡಿಗೆ ನೀಡಲು, ಇನ್ನೊಂದು ಮಳಿಗೆಯನ್ನು ಔಟ್ ಪೊಲೀಸ್ ಠಾಣೆಗೆ ನೀಡಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲು ತೀರ್ಮಾನಿಸಲಾಯಿತು.

    ಇದೇ ಲೇಔಟ್‍ನಲ್ಲಿ ವಾಣಿಜ್ಯ ಉದ್ದೇಶಕ್ಕೆ ಮೀಸಲಿರುವ ನಿವೇಶನದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆಂಬ ವಿಷಯವೂ ಪ್ರಸ್ತಾಪವಾಗಿ, ಈ ಬಗ್ಗೆ ತನಿಖೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ರೀತಿ ಇನ್ನೂ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap