ಅಕ್ರಮ ಮಾಡಿದವರು ಬಿಜೆಪಿ ಸೇರಿದರೆ ನಿಷ್ಠಾವಂತರಾಗುತ್ತಾರೆ: ದಿನೇಶ್ ಗುಂಡೂರಾವ್

ತುಮಕೂರು
 
    ಅಕ್ರಮಗಳನ್ನು ಮಾಡಿದವರು ಬಿಜೆಪಿ ಪಕ್ಷಕ್ಕೆ ಸೇರಿದರೆ ನಿಷ್ಠಾವಂತರಾಗುತ್ತಾರೆ. ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಅವರ ಮೇಲೆ ಯಾವುದೇ ಇಲಾಖೆಯೂ ರೈಡ್ ಮಾಡುವುದಿಲ್ಲ. ಇದಕ್ಕಾಗೊ ಬಿಜೆಪಿ ಪಕ್ಷವು ಕ್ಷಮಾದಾನಯೋಜನೆ ಜಾರಿ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವ್ಯಂಗ್ಯ ಮಾಡಿದರು.
     ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಬಿಜೆಪಿ ಪಕ್ಷ ಸೇರಿಕೊಳ್ಳುತ್ತಿದ್ದಂತೆ ಅವರ ಮೇಲಿನ ಪ್ರಕರಣಗಳು ಖುಲಾಸೆಯಾಗುತ್ತವೆ. ಅಲ್ಲದೆ ಅವರ ಮೇಲೆ ಐಟಿ, ಇಡಿ, ಸಿಬಿಐ ಸೇರಿದಂತೆ ಯಾರೂ ಅವರ ಮೇಲಾಗಲಿ ಅವರ ಮನೆಗಳ ಮೇಲಾಗಲಿ ದಾಳಿ ನಡೆಸುವುದಿಲ್ಲ. ಆದರೆ ಯಾರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಅವರ ವಿರುದ್ಧ ಇಡಿ, ಐಟಿ ರೇಡ್‍ಗಳು ನಡೆಯುತ್ತವೆ ಎಂದು ಆರೋಪಿಸಿದರು.
     ಈ ಹಿಂದೆ ಡಿಕೆಶಿಯವರನ್ನು ಬಿಜೆಪಿ ಸೇರುವಂತೆ ಒತ್ತಾಯ ಮಾಡಲಾಗಿತ್ತು. ಆದರೆ ಅವರು ನಾನು ಕಾಂಗ್ರೆಸ್ ನಿಷ್ಠ. ನೀವೇನಾದರೂ ಮಾಡಿಕೊಳ್ಳಿ? ಎಂದು ಹೇಳಿದ ಬಳಿಕ ಐ.ಟಿ, ಇ.ಡಿ. ದಾಳಿ ಮಾಡಿಸಿ ಸೇಡಿನ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಕಾನೂನು ಹೋರಾಟ ಮಾಡುತ್ತಿದ್ದು, ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ. ಬಿಜೆಪಿಯವರು ರಾಜಕೀಯ ಪ್ರೇರಿತ ದಾಳಿಗಳನ್ನು ನಡೆಸುತ್ತಿದ್ದು, ಡಿಕೆಶಿ ಬಳಿ ಬಂದ ಅಧಿಕಾರಿಗಳೇ ನೀವೊಮ್ಮೆ ಬಿಜೆಪಿಯವರೊಂದಿಗೆ ಮಾತನಾಡಿಕೊಂಡು ಸರಿ ಮಾಡಿಕೊಳ್ಳಿ ನಾವು ವಾಪಸ್ ಹೋಗುತ್ತೇವೆ ಎಂದಿದ್ದರು. ಇದಕ್ಕೂ ಒಪ್ಪದ ಮೇಲೆ ಅವರನ್ನು ಬಂಧಿಸಲು ತಂತ್ರ ರೂಪಿಸಲಾಯಿತು ಎಂದರು.
     ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಆಡಳಿತದ ಮೇಲೆ ಕೇಂದ್ರ ಸರ್ಕಾರದ ನಾಯಕರಿಗೆ ವಿಶ್ವಾಸ ಇಲ್ಲದಾಗಿದೆ .ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿ ಗುಜರಾತ್, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಸಲು ಆಂತರಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಿಂದ ನಮಗೇನು ತೊಂದರೆಯಿಲ್ಲ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದೇವೆ ಎಂದರು.
    ಮಧ್ಯಂತರ ಚುನಾವಣೆಗೆ ಸಿದ್ಧರಾಗಲು ಕಾಂಗ್ರೆಸ್ ಪಕ್ಷವನ್ನು ಕೆಳಮಟ್ಟದಿಂದ ಸಂಘಟನೆ ಮಾಡಲಾಗುತ್ತಿದೆ. ಅದಕ್ಕಾಗಿ ವಾರ್ಡ್, ಬೂತ್ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಸಂಘಟನೆ ಮಾಡಲು ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಈಗಾಗಲೇ ತುಮಕೂರಿನ ಬ್ಲಾಕ್‍ಗಳಲ್ಲಿ ಸಭೆಗಳನ್ನು ನಡೆಸಿದ್ದು, ಶುಕ್ರವಾರದಂದು (ಸೆ.6) ತಿಪಟೂರಿನಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿದೆ. ಇದರಿಂದ ಬೂತ್‍ಗಳಲ್ಲಿ ಸ್ಥಿತಿಗತಿಗಳು ಹೇಗಿವೆ ಎಂಬುದನ್ನು ಅರಿಯುವ ಜೊತೆಗೆ ಕಾರ್ಯಕರ್ತರಿಂದ ಸಲಹೆಗಳು, ಅವರ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆ ಪರಿಹರಿಸುವುದರ ಜೊತೆಗೆ ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡುವವರಿಗೆ ಪಕ್ಷದಿಂದ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಎಂದರು.
    ಮನೆ ಮನೆಗೆ ಸರ್ಕಾರದಿಂದಲೇ ಮದ್ಯ ಪೂರೈಕೆ ಯೋಜನೆ ರೂಪಿಸುವ ಬಗ್ಗೆ ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ. ಇದರಿಂದಲೇ ಈ ಬಿಜೆಪಿ ಸರ್ಕಾರದ ಆದ್ಯತೆಗಳೇನು ಎಂಬುದು ಗೊತ್ತಾಗುತ್ತದೆ. ನೆರೆ ಪರಿಸ್ಥಿತಿಯಿದ್ದ ಪ್ರದೇಶಗಳಲ್ಲಿ  ಅಲ್ಲಿನ ಜನರಿಗೆ ಮಧ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಅಬಕಾರಿ ಸಚಿವರು ಮನೆಮನೆಗೆ ಮಧ್ಯ ಸರಬರಾಜು ಮಾಡುವ ಯೋಜನೆಯ ಪ್ರಸ್ತಾಪ ಮಾಡಿರಬಹುದು ಎಂದು ಲೇವಡಿ ಮಾಡಿದರು.
    ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನೆರೆ ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ ಎಂದು ಬಿಜೆಪಿಯವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅವರು ಬರುತ್ತಿರುವುದು ಇಸ್ರೋದಲ್ಲಿ ಚಂದ್ರಯಾನ-2 ಯೋಜನೆ ವೀಕ್ಷಣೆಗಾಗಿ ಹೊರತು ನೆರೆ  ಪ್ರದೇಶಗಳನ್ನು ವೀಕ್ಷಿಸಲು ಅಲ್ಲ. ಹಾಗಾಗಿ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದಾಗ ನೆರೆ ಪರಿಹಾರ ಹಾಗೂ ಕೆಲವೊಂದು ಸಲಹೆಗಳನ್ನು ನೀಡುವ ಮನವಿಯನ್ನು ತಯಾರು ಮಾಡಿದ್ದು, ಅದನ್ನು ಅವರಿಗೆ ತಲುಪಿಸಲು ಸಮಯ ಕೇಳಿದ್ದೇವೆ. ಅವರು ಸಮಯ ನೀಡಿದ್ದಲ್ಲಿ ಮನವಿ ಪತ್ರ ನೀಡಿ ಪರಿಹಾರ್ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದರು.
     ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಮುಸುಕಿನಗುದ್ದಾಟದ ಬಗ್ಗೆ ಮಾತನಾಡಿದ ಅವರು, ಪಕ್ಷದಲ್ಲಿನ ಸಣ್ಣ ಪುಟ್ಟ ವೈಮನಸ್ಸುಗಳು ಸಾಮಾನ್ಯ. ಇದರ ಬಗ್ಗೆ ಆಂತರಿಕ ಚರ್ಚೆಗಳನ್ನು ಮಾಡಬೇಕು. ಅದರ ಬದಲಾಗಿ ಪಕ್ಷಕ್ಕೆ ತೊಡಕು ಉಂಟಾಗುವ ಕೆಲಸಗಳನ್ನು ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಕುರಿತಂತೆ ರಾಜಣ್ಣ ಹಾಗೂ ಇತರೆ ನಾಯಕರುಗಳೊಂದಿಗೆ ಚರ್ಚೆ ಮಾಡಲಾಗುತ್ತದೆ. ಅದಕ್ಕೂ ನಿಗದಿತ ಸಮಯ ಬರುತ್ತದೆ ಎಂದರು.
      ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮ್ಮದ್, ಎಸ್.ಷಫೀ ಅಹಮ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ತುಮಕೂರು ಮಹಾನಗರ ಪಾಲಿಕೆಯ ಉಪಮಹಾಪೌರರಾದ ರೂಪಶ್ರೀ ಶೆಟ್ಟಳಯ್ಯ ಉಪಸ್ಥಿತರಿದ್ದರು.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap