ಸರ್ಕಾರ ಬಯಸಿದರೆ ಸಬ್ಸಿಡಿ ಹಣ ಫಲಾನುಭವಿಗಳ ಖಾತೆಗೆ : ರಾಮ್ ವಿಲಾಸ್ ಪಾಸ್ವಾನ್

ಬೆಂಗಳೂರು

       ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯದ 6.11 ಕೋಟಿ ಜನರ ಪೈಕಿ 4.33 ಕೋಟಿ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸುತ್ತಿದ್ದು, ರಾಜ್ಯ ಸರ್ಕಾರ ಬಯಸಿದರೆ ಸಬ್ಸಿಡಿ ಹಣವನ್ನು ನೇರವಾಗಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

        ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಕೆ.ಜಿ.ಗೆ 30 ರೂ ದರದಂತೆ ಖರೀದಿಸಿ ಅದನ್ನು 3 ರೂ ದರದಲ್ಲಿ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಒಟ್ಟು 4.33 ಕೋಟಿ ಪಡಿತರ ಚೀಟಿದಾರರಿಗೆ ಅಗತ್ಯ ಬಿದ್ದಲ್ಲಿ ನೇರ ನಗದು ವರ್ಗಾವಣೆ ಯೋಜನೆಯಡಿ ಸಬ್ಸಿಡಿ ಹಣವನ್ನು ಖಾತೆಗಳಿಗೆ ಜಮಾ ಮಾಡಲಾಗವುದು. ಆದರೆ ಇದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದರು.

        ಪ್ರಸ್ತುತ ಚಂಡಿಗಢ, ಪುದುಚೇರಿ ಮತ್ತು ದಾದರ್ ಹವೇಲಿಯಲ್ಲಿ ಅಕ್ಕಿ ಬದಲಿಗೆ ಸಬ್ಸಿಡಿ ಹಣವನ್ನು ಖಾತೆಗೆ ಜಮಾ ಮಾಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಆದರೆ ಪುದುಚೇರಿಯಿಂದ ಹಣ ಬೇಡ. ಅಕ್ಕಿಯನ್ನೇ ನೀಡುವಂತೆ ಮನವಿ ಬಂದಿದೆ. ಯಾವುದೇ ರಾಜ್ಯ ಸರ್ಕಾರಗಳು ಅಕ್ಕಿ ಬದಲು ಸಬ್ಸಿಡಿ ಹಣ ನೀಡುವಂತೆ ಮನವಿ ಮಾಡಿದರೆ ಕೇಂದ್ರ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಿದೆ ಎಂದು ಹೇಳಿದರು.

         ರಾಜ್ಯಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 1100 ಕೋಟಿ ರೂ.ಗಳ ಸಬ್ಸಿಡಿ ಹಣ ಕೊಡಬೇಕಿದ್ದು, ಈ ಪೈಕಿ 300 ಕೋಟಿ ರೂ ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಖರ್ಚುವೆಚ್ಚದ ಬಿಲ್ ಗಳನ್ನು ರಾಜ್ಯ ಸರ್ಕಾರ ತಡವಾಗಿ ಕಳುಹಿಸಿದ್ದರಿಂದ ಹಣ ಬಿಡುಗಡೆ ವಿಳಂಬವಾಗಿದೆ ಎಂದು ಪ್ರಶ್ನೆಯೊಂದಕ್ಕೆ ರಾಮ್ ವಿಲಾಸ್ ಪಾಸ್ವಾನ್ ಪ್ರತಿಕ್ರಿಯೆ ನೀಡಿದರು.

         ಪ್ರಸಕ್ತ ಸಾಲಿನಲ್ಲಿ ದೇಶದಲ್ಲಿ 997 ಲಕ್ಷ ಮೆಟ್ರಿಕ್ ಟನ್ ಭತ್ತ ಮತ್ತು ಗೋಧಿ ಉತ್ಪಾದನೆ ಆಗಿದ್ದು, ಬೆಂಬಲ ಬೆಲೆ ಯೋಜನೆಯಡಿ 357 ಲಕ್ಷ ಮೆಟ್ರಿಕ್ ಟನ್‍ಗೂ ಹೆಚ್ಚು ಖರೀದಿ ಮಾಡಲಾಗಿದೆ. ಕೇಂದ್ರದ ಉಗ್ರಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರಧಾನ್ಯ ದಾಸ್ತಾನು ಇದ್ದು, ಆಹಾರ ಭದ್ರತಾ ಕಾಯಿದೆ ಅಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 387.51 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿದರು.

         ಗ್ರಾಹಕರ ಹಿತರಕ್ಷಣಾ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದ್ದು, ರಾಜ್ಯ ಸಭೆಯ ಅನುಮೋದನೆ ಅಗತ್ಯವಾಗಿದೆ. ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಹಿರಿಯರ ಮನೆಯಲ್ಲಿ ಅಂಗೀಕಾರ ದೊರೆಯುವ ನಿರೀಕ್ಷೆಯಿದೆ. ಈ ಮಸೂದೆಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಅಳವಡಿಸಿದ್ದು, ಗ್ರಾಹಕರ ರಕ್ಷಣೆಗೆ ಪ್ರಧಾನ ಆದ್ಯತೆ ನೀಡಲಾಗಿದೆ. ಆಕರ್ಷಕ ಜಾಹೀರಾತುಗಳ ಮೂಲಕ ಜನರನ್ನು ವಂಚಿಸುವುದನ್ನು ತಡೆಯುವ ಅಂಶಗಳನ್ನು ಸಹ ಇದರಡಿ ಸೇರಿಸಲಾಗಿದೆ. ಜಾಹೀರಾತು ನೀಡುವ ಸೆಲೆಬ್ರೆಟಿಗಳು ಹಾಗೂ ಉತ್ಪನ್ನಗಳ ಉತ್ಪಾದಕರನ್ನು ಸಹ ಜವಾಬ್ದಾರನ್ನಾಗಿ ಮಾಡಲಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap