ರಾಹುಲ್ ಗಾಂಧಿ ಪ್ರಧಾನಿಯಾಗಬೇಕಾದರೆ ಕನಿಷ್ಠ 22 ಲೋಕಸಭಾ ಸ್ಥಾನ ಗೆಲ್ಲಬೇಕು:ಎಚ್ ಕೆ. ಪಾಟೀಲ್

ಬೆಂಗಳೂರು

      ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಬೇಕಾದರೆ ರಾಜ್ಯದಲ್ಲಿ ಕನಿಷ್ಠ 22 ಲೋಕಸಭಾ ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆ ಇದೆ, ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಪಕ್ಷದ ಉನ್ನತಿಗೆ ಶ್ರಮಿಸುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅದ್ಯಕ್ಷ ಎಚ್ ಕೆ. ಪಾಟೀಲ್ ಹೇಳಿದ್ದಾರೆ.

       ನಗರದ ಅರಮನೆ ಮೈದಾನದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದ ಹೊಸ ಜವಬ್ದಾರಿ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಅಂಬಾನಿ, ಅದಾನಿಗಳು ಪ್ರಧಾನಿ ಕಚೇರಿ ಪ್ರವೇಶಿಸಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಗುಡುಗಿದ್ದಾರೆ.

        ರೈತರ ಸಾಲ ಮನ್ನಾ ಮಾಡದೆ, ಕೈಗಾರಿಕೋದ್ಯಮಿಗಳು ಬ್ಯಾಂಕುಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಸೂಕ್ತ ಸಮಯ ಬಂದಿದೆ. ಬಿಜೆಪಿ ಮತ್ತು ಮೋದಿ ಸರ್ಕಾರದ ಅಧಃಪತನ ಎರಡೂ ರಾಜ್ಯದಿಂದಲೇ ಆರಂಭವಾಗಲಿದೆ ಎಂದರು. 

       ಕಾಂಗ್ರೆಸ್ ಪಕ್ಷ 60 ವರ್ಷ ದೇಶಕ್ಕೆ ಏನನ್ನು ನೀಡಿಲ್ಲ ಎಂಬ ಮಾತು ಕೇವಲ ಜ್ಞಾನವಿಲ್ಲದವರು ಅರಿವಿಲ್ಲದವರು ಆಡುವ ಮಾತು. ದೇಶದ ಹಾಗೂ ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಗೊತ್ತಿರುವವರು ಯಾರೂ ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಲು ಸಾಧ್ಯವಿಲ್ಲ.

        ಪಕ್ಷದ ತತ್ವ ,ಸಿದ್ಧಾಂತ ಹಾಗೂ ಆಶಯವನ್ನು ಜನರ ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಪ್ರತಿಯೊಬ್ಬರ ಮನೆಗೆ, ಪ್ರತಿಯೊಬ್ಬರ ಮನಕೆ ಕಾಂಗ್ರೆಸ್ ಪಕ್ಷದ ಸಂದೇಶ ತಲುಪಿಸುತ್ತೇನೆ ಎಂದರು.

      ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಿರುವವರೇ ದೇಶದಲ್ಲಿ ಮುಕ್ತ ವಾಗುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಕಾಂಗ್ರೆಸ್ ಕೊಡುಗೆ ಬಹಳ ಪ್ರಮುಖವಾಗಿದೆ. ಕಾಂಗ್ರೆಸ್ ಸಾಧನೆ ಅಷ್ಟಿಷ್ಟಲ್ಲ. ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಲಾಠಿ ಏಟು ತಿಂದ ಸಂದರ್ಭ ಭಾರತ್ ಮಾತಾ ಕೀ ಜೈ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದರು ಆದರೆ ಈಗ ಬಿಜೆಪಿ ನಾಯಕರು ದೇಶ ಪ್ರೇಮದ ಪಾಠ ಹೇಳಿಕೊಡಲು ಹೊರಟಿದ್ದಾರೆ.ಇದು ಅನಾವಶ್ಯಕ ನಮಗೆ ಬಿಜೆಪಿ ಒಣ ಉಪದೇಶ ಬೇಡವಾಗಿದೆ ಇದರಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದರು.

      ದೇಶದ ಪ್ರಗತಿಯಲ್ಲಿ ಕಾಂಗ್ರೆಸ್ ಕೊಡುಗೆ ಸಾಕಷ್ಟಿದೆ. ಬಡತನದಲ್ಲಿದ್ದ 30 ಕೋಟಿ ಜನರನ್ನು ಮಧ್ಯಮವರ್ಗಕ್ಕೆ ಕರೆತಂದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ನಾವು 78 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆವು ಬಿಜೆಪಿ ನಾಯಕರಿಂದ 12 ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಆಗಿಲ್ಲ. ಮೇಲಾಗಿ 1.72 ಕೋಟಿ ಉದ್ಯೋಗ ಕಡಿತ ಮಾಡಿರುವುದೇ ಬಿಜೆಪಿ ಸಾಧನೆ ಎಂದು ಲೇವಡಿ ಮಾಡಿದರು.

         ಬಿಜೆಪಿ ನಾಯಕರು ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ನಾವು ಸಾಕಷ್ಟು ಯುದ್ಧವನ್ನು ಗೆದ್ದವರು. ಆದರೂ ಎಲ್ಲಿಯೂ ಪ್ರಚಾರ ಪಡೆಯುವ ಕಾರ್ಯ ಮಾಡಿಲ್ಲ. ವಿಭಜಿತ ಪಾಕಿಸ್ತಾನದವರನ್ನು ಒಂದು ಮಾಡಿದವರು ನಾವು. ದೇಶದ ವಿಚಾರವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ನಿಮ್ಮಿಂದ ಬುದ್ದಿ ಕಲಿಯಬೇಕಿಲ್ಲ, ತಂತ್ರಜ್ಞಾನ, ಕೃಷಿ ಕ್ರಾಂತಿ ನಿಮ್ಮಿಂದ ಕಲಿಯುವ ಅಗತ್ಯವಿಲ್ಲ. 2 ಕೋಟಿ ಉದ್ಯೋಗ, ಬಡವರಿಗೆ 15 ಲಕ್ಷ ಖಾತೆಗೆ ಹಣ ಹಾಕುವುದಾಗಿ ಹೇಳಿ ಮೋಸ ಮಾಡಿದವರು ನಂಬಿಕೆಗೆ ಅರ್ಹರಲ್ಲ ಎಂಬುದು ಜನತೆಗೆ ಗೊತ್ತಾಗಿದೆ ಎಂದರು.

          ಮೋದಿ ಸರ್ಕಾರ ಲೋಕಪಾಲ್ ಮಸೂದೆ ಜಾರಿ ಮಾತನ್ನು ಉಳಿಸಿಕೊಂಡಿಲ್ಲ. ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆ, ಸಿಬಿಐ ನಿರ್ದೇಶಕರ ಕಾರ್ಯನಿರ್ವಹಣೆಗೆ ಅಡ್ಡಿ, ಆರ್ ಬಿಐ ಗವರ್ನರ್ ಅಧಿಕಾರ ತ್ಯಾಗ, ಯೋಜನಾ ಆಯೋಗ ತೆಗೆದು ಹಾಕಿ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ಚಾಟಿ ಬೀಸಿದರು.

        ರಫೆಲ್ ವಿಚಾರದಲ್ಲಿ ಮೋದಿ ಸರ್ಕಾರ ರಾಹುಲ್ ಪ್ರಶ್ನೆಗೆ ಉತ್ತರಿಸಲಿಲ್ಲ. ಮೋದಿ ನಡೆ ಅನುಮಾನ ಮೂಡಿಸಿದೆ. ವಿದೇಶಕ್ಕೆ ಬೇರೆ ಬೇರೆ ಕಾಪೆರ್ರೇಟ್ ಕಂಪನಿಗಳ ಪ್ರತಿನಿಧಿಗಳನ್ನು ಕರೆದುಕೊಂಡು ಹೋದರು ಹೋಗುವಾಗ ಎಷ್ಟು ಬ್ಯಾಗ್ ಒಯ್ದರು, ಎಷ್ಟು ವಾಪಸ್ ತಂದರು ಎಂಬ ಕಟುಸತ್ಯವನ್ನು ಬಹಿರಂಗಪಡಿಸುತ್ತೇವೆ ಎಂದು ಪಾಟೀಲ್ ಗುಡುಗಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap