ನಿರ್ಲಕ್ಷ್ಯ ವಹಿಸಿದರೆ ಮೇ 3ರ ಬಳಿಕವೂ ಲಾಕ್‍ಡೌನ್

ದಾವಣಗೆರೆ:

     ತೀವ್ರತರವಾಗಿ ಹಬ್ಬುತ್ತಿರುವ ಕೊರೋನಾ ಸೋಂಕನ್ನು ನಿರ್ಲಕ್ಷಿಸದೆ, ಪ್ರತಿಯೊಬ್ಬರೂ ಲಾಕ್‍ಡೌನ್ ನಿಯಮಾವಳಿ ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ ಸಲಹೆ ನೀಡಿದರು.ಇಲ್ಲಿನ ಮಹಾನಗರ ಪಾಲಿಕೆ 25ನೇ ವಾರ್ಡ್ ವ್ಯಾಪ್ತಿಯ ಡಿಸಿಎಂ ಟೌನ್‍ಶಿಪ್‍ನಲ್ಲಿರುವ ರಾಜನಹಳ್ಳಿ ಹನುಮಂತಪ್ಪ ಉದ್ಯಾನವನದಲ್ಲಿ ಬುಧವಾರ ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

    ಪ್ರಸ್ತುತ ಕೋವಿಡ್-19 ಇಡೀ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ನಮ್ಮ ದೇಶದಲ್ಲಿ ಸಾಕಷ್ಟು ಮುಂಜಾಗೃತೆ ವಹಿಸಿ, ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರೂ, ಸೋಂಕು ಹರಡುವುದು ನಿಂತಿಲ್ಲ. ಇದಕ್ಕೆ ಜನರ ನಿರ್ಲಕ್ಷ್ಯವೇ ಕಾರಣವಾಗಿದೆ. ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರಗಳ ಪ್ರಯತ್ನಕ್ಕೆ ಜನರು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.

    ಲಾಕ್‍ಡೌನ್ ಅವಧಿಯಲ್ಲಿ ಅಗತ್ಯ ಸೇವೆ ಮತ್ತು ವಸ್ತುಗಳ ಪೂರೈಕೆಗೆ ಸರ್ಕಾರಗಳು ಕ್ರಮ ಕೈಗೊಂಡಿವೆ. ಆದರೂ ಜನರು ಲಾಕ್‍ಡೌನ್ ಉಲ್ಲಂಘಿಸಿ ಬೀದಿಗೆ ಬರುವುದು ತಪ್ಪಿಲ್ಲ. ದೇಶ ಹಾಗೂ ರಾಜ್ಯದಲ್ಲಿ ದಿನೇದಿನೇ ಹೊಸ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕೋಟ್ಯಂತರ ಜನರಿಗೆ ಸೋಂಕು ಹರಡಲಿದೆ. ಆದ್ದರಿಂದ ಜನರು ಅಲಕ್ಷ್ಯ ಮಾಡದೆ, ಸರ್ಕಾರಗಳ ಸೂಚನೆಗಳನ್ನು ಪಾಲಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

      ಜನರು ಕಟ್ಟುನಿಟ್ಟಾಗಿ ಲಾಕ್‍ಡೌನ್ ಪಾಲಿಸಿದ್ದರೆ ಏ.14ಕ್ಕೇ ಕೊರೋನಾ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಜನರು ನಿರ್ಲಕ್ಷ್ಯ ಮಾಡಿದ್ದರಿಂದ ಕೊರೋನಾ ಸೋಂಕು ಹೆಚ್ಚಾಗಿ, ಮೇ 3ರವರೆಗೂ ಎರಡನೇ ಹಂತದ ಲಾಕ್‍ಡೌನ್ ಜಾರಿಯಾಗಿದೆ. ಈಗಲೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಮೇ 3ರ ನಂತರವೂ ಲಾಕ್‍ಡೌನ್ ಮುಂದುವರೆಯುವುದರಲ್ಲಿ ಅನುಮಾನವಿಲ್ಲ. ಇದರಿಂದಾಗಿ ಜನಸಾಮಾನ್ಯರು, ಕೂಲಿ ಕಾರ್ಮಿಕರು ಕಷ್ಟಪಡಬೇಕಾಗುತ್ತದೆ.

     ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಜನರು ಮನೆಯಿಂದ ಹೊರಬಾರದೆ ಕೊರೋನಾ ವಿರುದ್ಧದ ಸಮರಕ್ಕೆ ಕೈಜೋಡಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದರು.ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಒಳ್ಳೆಯ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗದವರು ಹಗಲಿರುಳೂ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿಲ್ಲ. ಇನ್ನು ಮುಂದೆಯೂ ಜಿಲ್ಲೆಯು ಕೊರೋನಾಮುಕ್ತವಾಗಿರಲು ಎಲ್ಲರ ಸಹಕಾರ ಅಗತ್ಯ ಎಂದು ಅವರು ನುಡಿದರು.

     ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಸದಸ್ಯ ಎಸ್.ಟಿ.ವೀರೇಶ್, ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗನಗೌಡ, ದಕ್ಷಿಣ ಕ್ಷೇತ್ರದ ಅಧ್ಯಕ್ಷ ಆನಂದರಾವ್ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap