ಅವಿಶ್ವಾಸ ನಿರ್ಣಯ: ನಿಮಗೆ ತಾಕತ್ತಿದ್ದರೆ ಮಂಡಿಸಿ ಬಿಜೆಪಿಗೆ ಮೈತ್ರಿ ಪಕ್ಷದ ಸವಾಲು

ಬೆಂಗಳೂರು

       ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಪ್ರತಿಪಕ್ಷ ಬಿಜೆಪಿ,ತಾಕತ್ತಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಕಾಂಗ್ರೆಸ್-ಜೆಡಿಎಸ್ ಸವಾಲು,ಪ್ರತಿಸವಾಲು ಒಡ್ಡಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿಂದು ಭಾರೀ ವಾಗ್ಯುದ್ಧ ನಡೆಯಿತಲ್ಲದೆ ಅಂತಿಮವಾಗಿ ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

       ಇಂದು ಸದನ ಸೇರುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದು ಧರಣಿ ಆರಂಭಿಸಿದ್ದಲ್ಲದೆ ಬಹುಮತವಿಲ್ಲದ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಮೊಳಗಿಸತೊಡಗಿದರು.

        ಬಹುಮತವಿಲ್ಲದ ಸರ್ಕಾರಕ್ಕೆ ಮುಂದುವರಿಯುವ ಹಕ್ಕಿಲ್ಲ.ಡೌನ್ ಡೌನ್,ಚೀಫ್ ಮಿನಿಸ್ಟರ್ ಡೌನ್ ಡೌನ್ ಎಂದು ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಕೂಗತೊಡಗಿದಾಗ ಮೇಲೆದ್ದು ನಿಂತ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ,ಪ್ರಿಯಾಂಕ್ ಖರ್ಗೆ ಮತ್ತಿತರರು , ಸರ್ಕಾರಕ್ಕೆ ಬಹುಮತವಿಲ್ಲ ಎಂಬ ನಂಬಿಕೆಯಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದು ತಿರುಗೇಟು ಹೊಡೆದರು.

         ಈ ಮಧ್ಯೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಧರಣಿ ನಿರತ ಬಿಜೆಪಿ ಸದಸ್ಯರತ್ತ ನೋಡಿ,ನೀರಿಲ್ಲದ ಬಾವಿಯಲ್ಲಿ ಬಿದ್ದಿದ್ದೀರಿ ಎಂದು ಹಾಸ್ಯ ಚಟಾಕಿ ಹಾರಿಸಿದರಲ್ಲದೆ ಸಭೆಯ ಮುಂದಿರುವ ಕಾಗದ ಪತ್ರಗಳನ್ನು ಮಂಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ,ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತಿತರ ಸಚಿವರಿಗೆ ಸೂಚಿಸಿದರು.

        ಸಭಾಧ್ಯಕ್ಷರ ಸೂಚನೆಯ ಅನುಸಾರ ಎಲ್ಲರೂ ತಮ್ಮ ತಮ್ಮ ಮುಂದಿದ್ದ ಕಾಗದ ಪತ್ರಗಳನ್ನು ಸಭೆಯ ಮುಂದೆ ಮಂಡಿಸತೊಡಗಿದಾಗ ಯಥಾ ಪ್ರಕಾರ ಧರಣಿ ನಿರತ ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿದ್ದಲ್ಲದೆ ಬಹುಮತವಿಲ್ಲದ ಸರ್ಕಾರ ಮುಂದುವರಿಯಬಾರದು ಎಂದರು.

          ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಬಜೆಪಿ ಸದಸ್ಯರ ವಿರುದ್ಧ ವಾಗ್ಧಾಳಿ ನಡೆಸತೊಡಗಿದರಲ್ಲದೆ ಸರ್ಕಾರಕ್ಕೆ ಬಹುಮತವಿದೆ ಎಂಬ ಕಾರಣಕ್ಕಾಗಿಯೇ ನೀವು ಧರಣಿ ನಡೆಸುತ್ತಿರುವುದು.ಒಂದು ವೇಳೆ ನಿಮಗೆ ಸಂಖ್ಯಾ ಬಲವಿದ್ದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

         ಈಗಲೂ ನಿಮಗೆ ಶಕ್ತಿಯಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ,ಸದನದಲ್ಲೇ ಬಲಾಬಲ ನಿರ್ಣಯವಾಗಲಿ.ಅದನ್ನು ಬಿಟ್ಟು ನೀವು ಧರಣಿ ನಡೆಸುತ್ತಿರುವುದು ಕೇವಲ ರಾಜಕೀಯ ಪ್ರಚಾರಕ್ಕಾಗಿಯೇ ಹೊರತು ಇನ್ಯಾವ ಕಾರಣಕ್ಕಾಗಿಯೂ ಅಲ್ಲ ಎಂದು ಕಾಂಗ್ರೆಸ್ ಸದಸ್ಯರು ಟೀಕಿಸತೊಡಗಿದರು.

          ಆದರೂ ಧರಣಿ ನಿರತ ಬಿಜೆಪಿ ಸದಸ್ಯರ ಕೋಲಾಹಲ ಮುಂದುವರಿದಾಗ ಸಭಾಧ್ಯಕ್ಷ ರಮೇಶ್ ಕುಮಾರ್,ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಬೆಂಬಲ ಕೊಡಬೇಕು.ಆದರೆ ನೀವು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೀರಿ.ಇದು ಸಂಸದೀಯ ಪ್ರಜಾಸತ್ತೆಯಲ್ಲಿ ಕಾಣದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಹೀಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸೂಚಿಸಿದ ಅವರು ಆಡಳಿತಾರೂಢ ಪಕ್ಷದ ಸದಸ್ಯರಾದ ಎಸ್.ಟಿ.ಸೋಮಶೇಖರ ಅವರಿಗೆ ಭಾಷಣ ಆರಂಭಿಸುವಂತೆ ಸೂಚನೆ ನೀಡಿದರು.

        ಸಭಾಧ್ಯಕ್ಷರ ಸೂಚನೆಯ ಅನುಸಾರ ಸದಸ್ಯ ಎಸ್.ಟಿ.ಸೋಮಶೇಖರ್ ಅವರು,ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯವನ್ನು ಹಸಿರು ಕರ್ನಾಟಕ ಮಾಡಲು 652 ಲಕ್ಷ ಸಸಿಗಳನ್ನು ರಾಜ್ಯಾದ್ಯಂತ ನೆಡಲು ತೀರ್ಮಾನಿಸಿದೆ ಎಂದು ಪ್ರಶಂಸಿಸಿದರು.

        ಆದರೆ ಅವರು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದರೆ ಇತ್ತ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಮೊಳಗಿಸತೊಡಗಿದರು.

      ಬಹುಮತವೇ ಇಲ್ಲದೆ ಮುಂದುವರಿಯುತ್ತಿದ್ದೀರಿ.ನಿಮಗೆ ನೈತಿಕ ಹಕ್ಕೇ ಇಲ್ಲ.ಹೀಗಾಗಿ ತಕ್ಷಣವೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು.ನೀವು ರಾಜೀನಾಮೆ ಕೊಡುವವರೆಗೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಕೂಗತೊಡಗಿದರು.ಹೀಗೆ ಅವರ ಕೂಗು ಒಂದೇ ಸಮನೆ ಮುಂದುವರಿದಾಗ ಬೇರೆ ದಾರಿ ಕಾಣದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿ ಹೊರ ನಡೆದರು.

        ಹತ್ತು ನಿಮಿಷಗಳ ನಂತರ ಮರಳಿ ಸದನ ಕಲಾಪ ಆರಂಭವಾದಾಗ ಯಥಾ ಪ್ರಕಾರ ಧರಣಿ ಮುಂದುವರಿಸಿದ ಬಿಜೆಪಿ ಸದಸ್ಯರು,ಡೌನ್ ಡೌನ್ ಕುಮಾರಸ್ವಾಮಿ ಡೌನ್ ಡೌನ್ ಎಂದು ಅಬ್ಬರಿಸತೊಡಗಿದರು.

        ಪರಿಸ್ಥಿತಿ ಏನೇ ಮಾಡಿದರೂ ಹತೋಟಿಗೆ ಬರದೆ ಹೋದಾಗ ಅಸಹಾಯಕರಾದ ರಮೇಶ್ ಕುಮಾರ್ ಅವರು,ಈ ತರ ನೀವೆಲ್ಲ ನಡೆದುಕೊಂಡರೆ ಸದನವನ್ನು ನಡೆಸುವುದು ಹೇಗೆ?ಎಂದು ಪ್ರಶ್ನಿಸಿದರಲ್ಲದೆ,ಸದನವನ್ನು ಶುಕ್ರವಾರ ಮಧ್ಯಾಹ್ನ 12:30 ಕ್ಕೆ ಮುಂದೂಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap