ತುರುವೇಕೆರೆ
ಮೂರು ಕಂಟೈನರ್‍ಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 74 ರಾಸುಗಳನ್ನು ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ತಿಪಟೂರು ತಾಲ್ಲೂಕು ಕೈದಾಳ ಸಂತೆಯಿಂದ ಕೊಂಡಿರುವ ರಾಸುಗಳನ್ನು 3 ಕಂಟೈನರ್‍ಗಳಲ್ಲಿ ತುಂಬಿಕೊಂಡು ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕಂಟೈನರ್‍ಗಳಲ್ಲಿ ಉಸಿರಾಡಲೂ ಸಹ ಆಗದ ಸ್ಥಿತಿಯಲ್ಲಿ ರಾಸುಗಳನ್ನು ಕಟ್ಟಲಾಗಿತ್ತು. ಬೆಳಗ್ಗೆಯೇ ಕೈದಾಳ ಸಂತೆಯಿಂದ ರಾಸುಗಳನ್ನು ಕೊಂಡ ಮಾಹಿತಿಯನ್ನು ಪಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಗೂ ಭಜರಂಗದಳದ ಕಾರ್ಯಕರ್ತರು ತುರುವೇಕೆರೆ ಮಾರ್ಗವಾಗಿ ರಾಸುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿದು ಸ್ಥಳೀಯ ಆರೆಸ್ಸೆಸ್ ಮತ್ತು ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಕತ್ಪರರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ನವೀನ್ ಬಾಬು, ಕೃಷ್ಣಮೂರ್ತಿ, ಸುರೇಶ್, ಕಿಸಾನ್ ಸಂಘದ ಅಧ್ಯಕ್ಷ ಗಂಗಾಧರ್, ಶಿವಕುಮಾರ್, ಸತೀಶ್, ಜಗದೀಶ್ ಮೃತ್ಯಂಜಯ ಮತ್ತಿತರರು ವಾಹನದ ಸಂಖ್ಯೆ ಸಹಿತ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆ ಎದುರು ವಾಹನ ಸಾಗುವ ದಾರಿಯಲ್ಲಿ ಕಾದು ಕುಳಿತರು.
ನಿರೀಕ್ಷೆಯಂತೆ ರಾಸುಗಳನ್ನು ಹೊತ್ತ ಮೂರು ಕಂಟೈನರ್‍ಗಳು ಪೊಲೀಸ್ ಠಾಣೆ ಮೂಲಕವೇ ಸಾಗಿತು. ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಜಿ.ಪಿ.ರಾಜು ಸೇರಿದಂತೆ ಸಿಬ್ಬಂದಿ ಅನುಮಾನಾಸ್ಪದ ಲಾರಿಗಳನ್ನು ತಡೆದು ಪರಿಶೀಲಿಸಲಾಗಿ ಮೂರು ವಾಹನಗಳಲ್ಲಿ ರಾಸುಗಳು ಇದ್ದದ್ದು ಪತ್ತೆಯಾಯಿತು. ಕೂಡಲೇ ಲಾರಿಯ ಚಾಲಕರು ಮತ್ತು ಕ್ಲೀನರ್‍ಗಳನ್ನು ವಶಕ್ಕೆ ತೆಗೆದುಕೊಂಡರು.
ಮೈಸೂರು ಗೋಶಾಲೆಗೆ – ವಿಷಯ ತಿಳಿಯುತ್ತಿದ್ದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದರು. ಕಾಕತಾಳೀಯ ಎಂಬಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಗೋಪಿನಾಥ್ ಸಹ ಆಗಮಿಸಿದ್ದರು. ಹಿಂದೂ ಸಂಘಟನಾ ಕಾರ್ಯಕರ್ತರು ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಸಹಾಯಕ ಸ್ಥಿತಿ – ಬೆಳಗ್ಗೆಯೇ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸ್ ಠಾಣೆಯ ಮುಂದೆ ತಂದು ನಿಲ್ಲಿಸಲಾಗಿತ್ತು.
ಸಾಯಂಕಾಲದವರೆಗೂ ಕಾನೂನು ಕ್ರಮದ ನಿಯಮಗಳನ್ನು ಅನುಸರಿಸಬೇಕಾದ ಕಾರಣ ಹಾಗೂ ತಾಂತ್ರಿಕ ಕಾರಣಗಳಿಂದ ಎಫ್‍ಐಆರ್ ತಯಾರಾಗಲು ತಡವಾಯಿತು. ಆ ವೇಳೆ ನೀರಿಲ್ಲದೆ, ಮೇವಿಲ್ಲದೆ ಪರದಾಟುತ್ತಿದ್ದ ರಾಸುಗಳು ನಿತ್ರಾಣಗೊಂಡಿದ್ದವು. ಅವುಗಳಿಗೆ ನೀರು ಕುಡಿಸಲು ಅಥವಾ ಮೇವು ಹಾಕಲು ಆಗದ ಸ್ಥಿತಿ ಇತ್ತು. ಎಲ್ಲಾ ರಾಸುಗಳ ಕುತ್ತಿಗೆಗೆ ಹಗ್ಗಕಟ್ಟಿ ಮೇಲಕ್ಕೆ ಕಟ್ಟಲಾಗಿತ್ತು. ಹಾಗಾಗಿ ರಾಸುಗಳು ಕೆಳಗಡೆ ಮುಖ ಮಾಡದ ಸ್ಥಿತಿ ಇತ್ತು.
ಅಲ್ಲದೆ ಅವುಗಳನ್ನು ಕೆಳಕ್ಕೆ ಇಳಿಸಿ ನೀರುಣಿಸುವ ಅಥವಾ ಮೇವು ಹಾಕುವ ಪರಿಸ್ಥಿತಿಯೂ ಇರಲಿಲ್ಲ. ಕೆಳಗೆ ಇಳಿಸಿದಲ್ಲಿ ಅವುಗಳನ್ನು ಪುನಃ ವಾಹನದಲ್ಲಿ ಹತ್ತಿಸಿ ಮೈಸೂರು ಗೋಶಾಲೆಗೆ ಕಳಿಸುವುದು ಅಸಾಧ್ಯದ ಮಾತಾಗಿತ್ತು. ಇದು ಪೊಲೀಸರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಬಹಳ ತಲೆ ನೋವಿನ ಕೆಲಸವಾಗಿತ್ತು. ಅಂತಿಮವಾಗಿ ತಾಂತ್ರಿಕ ಸಮಸ್ಯೆ ಬಗೆಹರಿದ ಕೂಡಲೇ ಬೇರೆ ಚಾಲಕರನ್ನು ನೇಮಕ ಮಾಡಿ ಗೋವುಗಳನ್ನು ಅದೇ ವಾಹನದಲ್ಲಿ ಮೈಸೂರಿನ ಗೋಶಾಲೆಗೆ ರವಾನಿಸಲಾಯಿತು.
ಪ್ರಕರಣ ದಾಖಲು – ಅಕ್ರಮವಾಗಿ ರಾಸುಗಳನ್ನು ಸಾಗಣೆ ಮಾಡಿರುವ ಹಾಗೂ ಪ್ರಾಣಿಗಳಿಗೆ ಹಿಂಸೆ ನೀಡಿರುವ ಹಾಗೂ ಇನ್ನಿತರ ಅಂಶಗಳ ಅಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಕಲಿ ನಂಬರ್ ಪ್ಲೇಟ್ – ಕಂಟೈನರ್‍ವೊಂದರ ನಂಬರ್ ಪ್ಲೇಟ್ ನಕಲಿ ಎಂಬುದು ಪತ್ತೆ ಮಾಡಲಾಗಿದೆ. ವಾಹನದ ಮೇಲೆ ಇರುವ ಸಂಖ್ಯೆಯೇ ಒಂದಾದರೆ, ಆ ನಂಬರ್ ಮೇಲೆ ಹಳದಿ ಸ್ಟಿಕ್ಕರ್‍ನಿಂದ ಬೇರೊಂದು ನಂಬರ್ ಅಂಟಿಸಲಾಗಿದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾಸುಗಳ ಸಾವು – ಬೆಳಗ್ಗೆಯಿಂದ ಹಸಿವು ಮತ್ತು ನೀರಡಿಕೆಯಿಂದ ಬಳಲಿದ್ದ ಒಂದೆರಡು ಹಸುಗಳು ವಾಹನದಲ್ಲೇ ಸಾವಿಗೀಡಾಗಿದ್ದವು ಎಂದು ತಿಳಿದುಬಂದಿದೆ. ವಾಹನದೊಳಗೆ ನಿಲ್ಲಲೂ ಸಾಧ್ಯವಿಲ್ಲದ ಹಾಗೆ ಗೋವುಗಳನ್ನು ತುಂಬಿದ್ದರಿಂದ ಸಾವಿಗೀಡಾದ ಹಸುವಿಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ಕೆಳಗೆ ಬಿದ್ದಿದೆ. ಉಳಿದ ರಾಸುಗಳು ಸಾವಿಗೀಡಾದ ಹಸುವನ್ನು ತುಳಿದ ಕಾರಣ ಗಾಯವಾಗಿ ರಕ್ತ ವಾಹನದಿಂದ ಹೊರಬರುತ್ತಿದ್ದ ದೃಶ್ಯ ಪೊಲೀಸ್ ಠಾಣೆ ಮುಂದೆ ಕಂಡುಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
