ಗಾರೆ ನರಸಯ್ಯನ ಕಟ್ಡೆ: ಒತ್ತುವರಿ ತೆರವಿಗೆ ನಿರ್ಧಾರ

ತುಮಕೂರು
     ತುಮಕೂರು ನಗರದ ಸಪ್ತಗಿರಿ ಬಡಾವಣೆಗೆ ಹೊಂದಿಕೊಂಡಂತೆ ಇರುವ ಗಾರೆ ನರಸಯ್ಯನ ಕಟ್ಟೆಯ ಜಾಗ ಒತ್ತುವರಿ ಆಗಿದ್ದು, ಒತ್ತುವರಿಯನ್ನು ತೆರವುಗೊಳಿಸಬೇಕು ಹಾಗೂ ಆ ಒತ್ತುವರಿ ಜಾಗದಲ್ಲಿರುವ ಖಾತೆಗಳನ್ನು ರದ್ದುಗೊಳಿಸಬೇಕು ಎಂಬ ಮಹತ್ವದ ತೀರ್ಮಾನವೊಂದನ್ನು ತುಮಕೂರು ಮಹಾನಗರ ಪಾಲಿಕೆ ಕೈಗೊಂಡಿದೆ.
    ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸಭೆಯು ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್- ಅರಳೀಮರದ ಪಾಳ್ಯ- ಜೆಡಿಎಸ್) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದು, ಆ ಸಭೆಯಲ್ಲಿ ಪಕ್ಷೇತರ ಸದಸ್ಯ ವಿಷ್ಣುವರ್ಧನ್ (30 ನೇ ವಾರ್ಡ್ -ವಿಜಯನಗರ) ಈ ವಿಷಯ ಮಂಡಿಸಿದಾಗ ಸಭೆಯು ಸಮ್ಮತಿ ನೀಡಿದೆ.
    ಈ ಕಟ್ಟೆಯು ಸರ್ವೆ ನಂಬರ್ 21 ರಲ್ಲಿದೆ. ಇದನ್ನು ಸಮಗ್ರವಾಗಿ ಸರ್ವೆ ಮಾಡಿಸಬೇಕು. ಕಟ್ಟೆಗೆ ಸೇರಿದ ಜಾಗದಲ್ಲಿ ಒತ್ತುವರಿ ಆಗಿರುವುದು ಕಂಡುಬಂದಿದ್ದು, ಅದನ್ನು ತೆರವು ಮಾಡಿಸಬೇಕು. ಅಲ್ಲದೆ ಇಲ್ಲಿ ಮಾಡಲಾಗಿರುವ ಖಾತೆಗಳನ್ನು ವಜಾ ಮಾಡಬೇಕು ಎಂದು ವಿಷ್ಣುವರ್ಧನ್ ಒತ್ತಾಯಿಸಿದ್ದರು. ಇದಲ್ಲದೆ 30 ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ, ಫೆನ್ಸಿಂಗ್ ಹಾಕಬೇಕು ಎಂದೂ ಅವರು ಆಗ್ರಹಿsಸಿದ್ದರು. ಇದಕ್ಕೆ ಸಭೆ ಸಮ್ಮತಿಸಿದೆ.
ಉಪ್ಪಾರಹಳ್ಳಿಯಲ್ಲೂ ಒತ್ತುವರಿ
    ಇದಕ್ಕೆ ಪೂರಕವಾಗಿ ಮತ್ತೋರ್ವ ಪಕ್ಷೇತರ ಸದಸ್ಯ ಶಿವರಾಂ (24 ನೇ ವಾರ್ಡ್-ಉಪ್ಪಾರಹಳ್ಳಿ) ಸಹ ದನಿಯೆತ್ತಿದ್ದಾರೆ. ಉಪ್ಪಾರಹಳ್ಳಿಯ ಕೆರೆಕಟ್ಟೆ ಸರ್ವೆ ನಂಬರ್ 44 ರಲ್ಲಿ 8 ಎಕರೆ 11 ಗುಂಟೆ ಜಮೀನಿದ್ದು ಅದನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಬೇಕು ಎಂದು ಒತ್ತಾಯಿಸಿದ್ದು, ಇದಕ್ಕೆ ಸಭೆ ಒಪ್ಪಿದೆ. 
    ಇದೇ ಉಪ್ಪಾರಹಳ್ಳಿಯ ಸರ್ವೆ ನಂಬರ್ 16/1 ರಲ್ಲಿರುವ 1 ಎಕರೆ 24 ಗುಂಟೆ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿಸಿ ಅದು ಪಾಲಿಕೆಯದ್ದೆಂದು ಕಂಡುಬಂದಲ್ಲಿ, ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಬೇಕು. ಸರ್ವೆ ನಂಬರ್ 6 ರಲ್ಲಿ ರಾಯಗಾಲುವೆ ಹಾದುಹೋಗಿದ್ದು, ಅದರ ಒತ್ತುವರಿಯನ್ನು ತೆರವುಗೊಳಿಸಲು ಕಂದಾಯ ಶಾಖೆಯು ವರದಿ ನೀಡಬೇಕು ಎಂದು ಶಿವರಾಂ ಕೋರಿದ ಹಿನ್ನೆಲೆಯಲ್ಲಿ ಸಭೆಯು ಸಹಮತ ವ್ಯಕ್ತಪಡಿಸಿ ತೀರ್ಮಾನ ಕೈಗೊಂಡಿದೆ.
    ಜೆಡಿಎಸ್ ಸದಸ್ಯ ಬಿ.ಎಸ್.ಮಂಜುನಾಥ್ (17 ನೇ ವಾರ್ಡ್- ಶಾಂತಿನಗರ) ಸಭೆಯಲ್ಲಿ ಮಾತನಾಡಿ, ಉಪ್ಪಾರಹಳ್ಳಿಯ ಸರ್ವೆ ನಂಬರ್ 38 ರಲ್ಲಿ ರಾಯಗಾಲುವೆ ಹಾದುಹೋಗಿದ್ದು, ಆ ಜಾಗದಲ್ಲೇ ಬಡಾವಣೆಯನ್ನು ರೂಪಿಸಲಾಗಿದೆ ಎಂದು ದೂರಿದರಲ್ಲದೆ, ಈ ಬಗ್ಗೆ ಸರ್ವೆ ಮಾಡಿಸಿ ರಾಯಗಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಇದೇ ರೀತಿ ಮರಳೂರಿನ ಸರ್ವೆ ನಂಬರ್ 44/1 ರಲ್ಲಿ ಸಿಡಿಪಿ ಪ್ರಕಾರ ರಸ್ತೆ ಇದ್ದು, ಈ ರಸ್ತೆ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದು ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಭೆ ಒಪ್ಪಿತು. 
    ನಗರದ 28 ನೇ ವಾರ್ಡ್ ವ್ಯಾಪ್ತಿಯ ಸರ್ವೆ ನಂಬರ್ 87 ರ ಜಾಗದ ಬಗ್ಗೆ ಜೆಡಿಎಸ್ ಸದಸ್ಯ ಧರಣೇಂದ್ರ ಕುಮಾರ್ (28 ನೇ ವಾರ್ಡ್- ಸದಾಶಿವನಗರ) ಸಭೆಯ ಗಮನ ಸೆಳೆದಾಗ, ಸದರಿ ಜಾಗವು ಮಹಾನಗರ ಪಾಲಿಕೆಯ ಸ್ವತ್ತಾಗಿದ್ದು, ಅದನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
    ನಗರದ ವಿಜಯನಗರ ಬಡಾವಣೆಯ ಕ್ರಿಶ್ಚಿಯನ್ ಸ್ಮಶಾನದ ಪಕ್ಕ ಇರುವ ಸರ್ಕರಿ ಜಾಗ ಒತ್ತುವರಿಯಾಗಿದ್ದರೆ, ಸರ್ವೆ ಮಾಡಿಸಿ ಸರ್ಕಾರಿ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆದುಕೊಳ್ಳಲು ಮತ್ತು ತುಮಕೂರು ಅಮಾನಿಕೆರೆಯ ಸರ್ವೆ ನಂಬರ್ 252 ರ ಖರಾಬು ಜಾಗ 19 ಗುಂಟೆಯನ್ನು ಸರ್ವೆ ಮಾಡಿಸಿ, ಒತ್ತುವರಿಯಾಗಿದ್ದಲ್ಲಿ ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲು ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ನಗರಾದ್ಯಂತ ಕ್ರಮ
       ರಾಯಗಾಲುವೆ ವಿಷಯದಲ್ಲಿ ಎಲ್ಲ ಸದಸ್ಯರಿಂದ ದೂರು ಬಂದ ಹಿನ್ನೆಲೆಯಲ್ಲಿ ತುಮಕೂರು ನಗರದ ಎಲ್ಲ 35 ವಾರ್ಡ್‍ಗಳಲ್ಲೂ ರಾಯಗಾಲುವೆಗಳು ಒತ್ತುವರಿ ಆಗಿದ್ದಲ್ಲಿ ಈ ಬಗ್ಗೆ ಸರ್ವೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಲು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link