ದಾವಣಗೆರೆ:
ಸ್ಥಳೀಯರ ವಿರೋಧದ ನಡುವೆಯು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಪಡೆದು ಗುರುವಾರ ಬೆಳ್ಳಂಬೆಳಗ್ಗೆ ರಾಜಕಾಲುವೆ ಒತ್ತುವರಿ ತೆರೆವು ಕಾರ್ಯಾಚರಣೆ ನಡೆಸಿದರು.ಇಲ್ಲಿನ ವಿವೇಕಾನಂದ ಬಡಾವಣೆಯಲ್ಲಿ ಸ್ಥಳೀಯರು ರಾಜಕಾಲುವೆಯನ್ನೇ ಒತ್ತುವರಿ ಮಾಡಿದ್ದರು. ರಾಜಕಾಲುವೆಗಳ ಒತ್ತುವರಿ ಯಿಂದಾಗಿ ಮಳೆ ನೀರಿನ ಹರಿವಿಗೆ ತಡೆಯಾಗಿ, ಪ್ರಮುಖ ರಸ್ತೆಗಳು ಜಲಾವೃತವಾಗುತ್ತಿದ್ದವು. ಪ್ರತಿಸಲ ಜೋರು ಮಳೆ ಬಂದಾಲೆಲ್ಲಾ ಪ್ರವಾಹದೋಪಾದಿಯಲ್ಲಿ ನೀರು ಹರಿಯುವುದು ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಗೊಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜಕಾಲುವೆ ಒತ್ತುವರಿ ತೆರವಿಗಾಗಿ 20 ಕೋಟಿ ರೂ. ಹಣ ಕಾಯ್ದಿರಿಸಲಾಗಿದ್ದು, ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಪಡೆದು ರಾಜಕಾಲುವೆಯನ್ನು ಅತಿಕ್ರಮಿಸಿಕೊಂಡು ಅಕ್ರಮವಾಗಿ ನಿರ್ಮಿಸಿದ್ದ ಮನೆ, ಕಟ್ಟಡಗಳನ್ನು ತೆರವುಗೊಳಿಸಿದರು.
ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗಿಳಿದ ಅಧಿಕಾರಿಗಳೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸಿದರು. ಯಾವುದೇ ನೊಟೀಸ್ ನೀಡದೇ ತೆರವುಗೊಳಿಸುತ್ತಿರುವುದು ಸರಿಯಲ್ಲ ಎಂದು ಸ್ವತ್ತುಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಒತ್ತುವರಿ ತೆರವು ಮುಂದುವರೆಯಿತು. ಒಟ್ಟು 8 ಕಿ.ಮೀ. ದೂರದ ರಾಜಕಾಲುವೆ ಒತ್ತುವರಿ ತೆರವಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕೆಲವರು ಸ್ವಯಂ ಪ್ರೇರಿತರಾಗಿ ಒತ್ತುವರಿ ಕಾರ್ಯಾಚರಣೆಗೆ ಸಹಕರಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು.ಸಧ್ಯ ವಿವೇಕಾನಂದ ಬಡಾವಣೆಯಲ್ಲಿ 3 ಕಿ.ಮೀ.ನಷ್ಟು ಅಕ್ರಮ ಒತ್ತುವರಿ ತೆರವುಗೊಳಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ