ಶಿರಾ
ತಾಲ್ಲೂಕಿನ ಗಡಿಭಾಗವಾದ ಗೌಡಗೆರೆ ಹೋಬಳಿಯ ದಂಡಿಕೆರೆ ಸಮೀಪದ ರೈತರ ಜಮೀನಿನಲ್ಲಿ ಅಕ್ರಮ ಗ್ಯಾಸ್ ಪೈಪ್‍ಲೈನ್ ಕಾಮಗಾರಿ ಕೈಗೊಳ್ಳುವ ನೆಪದಲ್ಲಿ ರೈತರ ಜಮೀನಿನ ಬೆಳೆಯನ್ನು ನಾಶಗೊಳಿಸಿ ರೈತರನ್ನು ಖಾಸಗಿ ಕಂಪನಿಯೊಂದು ವಂಚಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ಮಂಗಳೂರಿನಿಂದ ಆಂಧ್ರ ಪ್ರದೇಶದ ಚರ್ಲಪಲ್ಲಿಗೆ ಖಾಸಗಿ ಕಂಪನಿಯೊಂದು ಗ್ಯಾಸ್ ಪೈಪ್‍ಲೈನ್ ಕಾಮಗಾರಿ ನಡೆಸುತ್ತಿದೆ. ಜಿಲ್ಲೆಯ ಗಡಿ ಪ್ರದೇಶವಾದ ಶಿರಾ ತಾಲ್ಲೂಕಿನ ದಂಡಿಕೆರೆ ಬಳಿಯ ರೈತರ ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನು ಗುರುವಾರ ಬೆಳಗ್ಗೆ ಜೆ.ಸಿ.ಬಿ. ಮೂಲಕ ಏಕಾಏಕಿ ನಾಶಗೊಳಿಸಿದ್ದನ್ನು ಕಂಡು ರೈತರು ಕಾಮಗಾರಿ ಕೈಗೊಂಡವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತರ ಜಮೀನಿನಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬೇಕಾದಲ್ಲಿ ಮೊದಲು ರೈತರ ಅನುಮತಿ ಅಗತ್ಯ. ಇದರೊಟ್ಟಿಗೆ ಜಿಲ್ಲಾಧಿಕಾರಿಗಳ, ಇಲ್ಲವೇ ಸ್ಥಳೀಯ ತಹಸೀಲ್ದಾರ್ ಅವರ ಅನುಮತಿ ಪಡೆದು, ರೈತರ ಸಭೆ ಸೇರಿಸಿ, ರೈತರ ಒಪ್ಪಿಗೆ ಪಡೆದ ನಂತರವೆ ಕಾಮಗಾರಿ ಕೈ ಗೊಳ್ಳಬೇಕು. ಇದಕ್ಕೆ ರೈತರಿಗೆ ಪರಿಹಾರವನ್ನೂ ನೀಡುವುದು ನಿಯಮ. ಆದರೆ ಇದಾವುದನ್ನೂ ಮಾಡದ ಖಾಸಗಿ ಕಂಪನಿಯೊಂದು ರೈತರ ಕಣ್ಣಿಗೆ ಮಣ್ಣೆರಚಿ ಕಾಮಗಾರಿ ಕೈ ಗೊಂಡಿರುವುದು ರೈತರು ಕೆರಳಲು ಕಾರಣವಾಗಿದೆ ಎನ್ನಲಾಗಿದೆ.
ಗುರುವಾರ ಬೆಳಗ್ಗೆ ದಂಡಿಕೆರೆ ರೈತರ ಸುಮಾರು 19 ಗುಂಟೆ ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನು ಜೆಸಿಬಿ ಮೂಲಕ ಕಿತ್ತು ಹಾಕಿದ ಖಾಸಗಿ ಕಂಪನಿಯೊಂದು ಪೈಪ್‍ಲೈನ್ ಅಳವಡಿಸುವ ಪ್ರಯತ್ನ ಮಾಡಿದಾಗ, ರೈತರು ಕಾಮಗಾರಿಯನ್ನು ಅಡ್ಡಿಪಡಿಸಿ ನ್ಯಾಯ ಕೇಳಿದ್ದಾರೆ ಎನ್ನಲಾಗಿದೆ.
ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ರೈತರ ಸಭೆ ಸೇರಿಸಿ ರೈತರ ಅನುಮತಿ ಪಡೆಯಲಾಗಿದೆ ಎಂದು ಸಬೂಬು ಹೇಳಿದ ಕಂಪನಿಯ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು, ಸ್ಥಳೀಯ ಮುಖಂಡರಾದ ರವಿಕುಮಾರ್ ಕಲ್ಕೆರೆ ಅವರಿಗೆ ಫೋನಾಯಿಸಿ ಸ್ಥಳಕ್ಕೆ ಕರೆದಿದ್ದು, ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಕಂಪನಿ ಗುತ್ತಿಗೆದಾರರನ್ನು ಕಾಮಗಾರಿ ನಿಲ್ಲಿಸಲು ಒತ್ತಾಯಿಸಿದರು. ಅಲ್ಲದೆ ಅಗತ್ಯ ದಾಖಲೆ ನೀಡಲು ಒತ್ತಾಯಿಸಿದ ಕೂಡಲೆ ಕಾಮಗಾರಿ ಕೈಗೊಳ್ಳುತ್ತಿದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ರವಿಕುಮಾರ್ ಕಲ್ಕೆರೆ ಪತ್ರಕರ್ತರೊಂದಿಗೆ ಮಾತನಾಡಿ, ದಂಡಿಕೆರೆಯ ಬಳಿ ನನ್ನದೂ ಜಮೀನಿದೆ. ಕೆಲ ತಿಂಗಳ ಹಿಂದೆ ಕಾಮಗಾರಿ ಕೈಗೊಳ್ಳುವ ಮಧ್ಯವರ್ತಿಯೊಬ್ಬ ನನ್ನ ಪಹಣಿಯನ್ನೂ ಪಡೆದಿದ್ದನಲ್ಲದೆ, ಈ ಭಾಗದ ಹಲವು ರೈತರ ಪಹಣಿಗಳನ್ನು ಪಡೆದುಕೊಂಡು ರೈತರ ಸಭೆ ಕರೆದು, ಜಿಲ್ಲಾಧಿಕಾರಿ ಅನುಮತಿಯಂತೆ ಪರಿಹಾರ ಕೊಡಿಸುವುದಾಗಿ ಹೇಳಿದ್ದನು. ಆದರೆ ಇದಾವುದನ್ನೂ ಮಾಡದೆ ಏಕಾಏಕಿ ರೈತರ ಜಮೀನಿನಲ್ಲಿದ್ದ ಶೇಂಗಾ ಬೆಳೆ ನಾಶಗೊಳಿಸಿ ಪೈಪ್‍ಲೈನ್ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದರು.
ಗ್ಯಾಸ್ ಪೈಪ್‍ಲೈನ್ ಕಾಮಗಾರಿಗೆ ಬಳಿಸಿದ ಜಮೀನಿನ ಬದಲು ನಮಗೆ ಪರ್ಯಾಯವಾಗಿ ಶಿರಾ ನಗರ ಇಲ್ಲವೆ, ಜವನಗೊಂಡನ ಹಳ್ಳಿಯ ಬಳಿ ಸರ್ಕಾರ ಜಮೀನು ನೀಡಬೇಕು. ಈ ಕೂಡಲೆ ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ದಂಡಿಕರೆ ಸೇರಿದಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.ಜಿಲ್ಲಾಧಿಕಾರಿಗಳಿಗಾಗಲಿ, ಸ್ಥಳೀಯ ತಹಸೀಲ್ದಾರ್‍ಗಳಿಗಾಗಲಿ ತಿಳಿಸದೆ, ಅಕ್ರಮವಾಗಿ ಗ್ಯಾಸ್ ಪೈಪ್‍ಲೈನ್ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಹಸೀಲ್ದಾರ್ ಕಚೆರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
