ಬೆಂಗಳೂರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಗೆ ಹೊಂದಿಕೊಂಡಿರುವ 4000 ಚದರ ಅಡಿ ಪಾಲಿಕೆ ಸ್ವತ್ತನ್ನು ಸದ್ದಿಲ್ಲದೇ ಕಾಂಗ್ರೆಸ್ ಪಕ್ಷ ಕಬಳಿಸಿದ್ದು, ಈ ಕುರಿತು ಬಿಎಂಎಎಫ್‍ಗೆ ದೂರು ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಸರ್ಕಾರಿ ಜಾಗ ಕಬಳಿಕೆ, ಅತಿಕ್ರಮ ಪ್ರವೇಶ, ವಂಚನೆ, ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರದ ಕ್ವೀನ್ಸ್ ರಸ್ತೆಯ ?ಮಿಲ್ಲರ್ ಕೆರೆ? ಪ್ರದೇಶದಲ್ಲಿರುವ ಕೆಪಿಸಿಸಿ ಕಚೇರಿಗೆ ಹೊಂದಿಕೊಂಡಂತಿರುವ 12 ಕೋಟಿ ರೂ. ಗೂ ಹೆಚ್ಚು ಮೌಲ್ಯದ 4,000 ಚ. ಅಡಿ ಪಾಲಿಕೆ ಸ್ವತ್ತನ್ನು ಸದ್ದಿಲ್ಲದೇ ಕಬಳಿಸಲಾಗಿದೆ. 1876 ರಲ್ಲಿ ಲಾರ್ಡ್ ಮಿಲ್ಲರ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ, ಬೆಂಗಳೂರು ಉತ್ತರ ತಾಲೂಕು, ಕಸಬಾ ಹೋಬಳಿಯ ಬಿಳೇಕಳ್ಳಿ ಗ್ರಾಮದ ಸರ್ವೆ ನಂ. 16,17,18 ಮತ್ತು 19 ರ 41 ಎಕರೆ ಸರ್ಕಾರಿ ಬಿ ಕರಾಬು ಜಾಗದಲ್ಲಿ ಬ್ರಿಟಿಷ್ ಅಧಿಕಾರಿಗಳು, ನೌಕರರ ಮತ್ತು ಸುತ್ತಲಿನ ನಾಗರಿಕರ ಬಳಕೆಗಾಗಿ ಮಿಲ್ಲರ್ ಕೆರೆ ನಿರ್ಮಿಸಿದ್ದರು.
ಆದರೆ, ಬೆಂಗಳೂರು ನಗರ ಬೆಳೆದಂತೆಯೇ, ಮಿಲ್ಲರ್ ಕೆರೆ ಬತ್ತಿ ಹೋಗಿದ್ದು, ಕೆರೆಯ ಭೂಮಿಯಲ್ಲಿ 24 ಎಕರೆಗಳಷ್ಟು ಜಾಗವನ್ನು 28 ವಿವಿಧ ಸಂಘ – ಸಂಸ್ಥೆಗಳಿಗೆ 30 ರಿಂದ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ ಪಾಲಿಕೆ ಆದೇಶ ಹೊರಡಿಸಿದೆ. ಉಳಿದ 17 ಎಕರೆಗಳಷ್ಟು ವಿಸ್ತೀರ್ಣದ ಸುಮಾರು 2,200 ಕೋಟಿ ಮೌಲ್ಯದ ಪಾಲಿಕೆ ಸ್ವತ್ತು, ಸರ್ಕಾರಿ ಭೂಗಳ್ಳರ ಪಾಲಾಗಿದೆ. 43 ಮಂದಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದು, ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇವರಲ್ಲಿ ಬಹುತೇಕರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ. ಮಾಜಿ ಸಚಿವ ರೋಷನ್ ಬೇಗ್, ಶಾಸಕ ಎನ್.ಎ.ಹ್ಯಾರಿಸ್, ಮಾಜಿ ಪಾಲಿಕೆ ಸದಸ್ಯ ಎಂ.ಬಿ. ಗೋವಿಂದರಾಜು ವಿರುದ್ಧ ಕೂಡ ಎಫ್‍ಐಆರ್ ದಾಖಲಾಗಿದೆ ಎಂದರು.
ಮಿಲ್ಲರ್ ಟ್ಯಾಂಕ್ ಬಡ್ ಏರಿಯಾದಲ್ಲಿ ಪ್ರತಿ ಚ. ಅಡಿ ನೆಲಕ್ಕೆ 30,000 ಗಳಿಂದ 40,000 ರೂ. ಮೌಲ್ಯವಿದೆ. ಈ ಪ್ರದೇಶದ 12,024 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು ಪರಿಶಿಷ್ಟ ಜಾತಿ, ಪಂಗಡದ ಪದವೀಧರರ ಸಂಘಟನೆಗೆ 1977ರ ಜುಲೈ 6ರಂದು 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಈ ಸಂಘಟನೆ ಗುತ್ತಿಗೆಯ ಷರತ್ತನ್ನು ಉಲ್ಲಂಘಿಸಿದ್ದು, ಅದನ್ನು ಮರಳಿ ಪಡೆಯಲು ಪಾಲಿಕೆ ಕಾನೂನು ಪ್ರಕರಣ ದಾಖಲಿಸಿದೆ ಎಂದು ಅವರು ಮಾಹಿತಿ ನೀಡಿದರು.
ಲೂಟಿಕೋರ ನಾಯಕರಿಂದಲೇ ಕಾಂಗ್ರೆಸ್ ಪಕ್ಷವು ತುಂಬಿ ಹೋಗಿದೆ. ಬಿಬಿಎಂಪಿ ಈ ಕೂಡಲೇ ವಿವಾದಿತ ಪ್ರದೇಶದ ಸರ್ವೆ ನಡೆಸಬೇಕು. ಈ ಕುರಿತು ಮಾಹಿತಿ ಇದ್ದರೂ ಯಾವುದೆ ಕ್ರಮ ಕೈಗೊಳ್ಳದ ಪೂರ್ವ ವಲಯದ ಉಪ ಆಯುಕ್ತರು ಮತ್ತು ಶಿವಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಸಮಾಜಕ್ಕೆ ಮೌಲ್ಯಗಳನ್ನು ಸಾರಬೇಕಾದ ರಾಜಕೀಯ ಪಕ್ಷವೊಂದು ಸ್ವತಃ ತಾನೇ 12 ಕೋಟಿ ಮೌಲ್ಯದ ಪಾಲಿಕೆಯ ಸ್ವತ್ತನ್ನು ಕಬಳಿಸಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು. ಬೇರೊಂದು ಸಂಸ್ಥೆಗೆ ಗುತ್ತಿಗೆಗೆ ನೀಡಿರುವ ಸ್ವತ್ತನ್ನು ರಾತ್ರೋರಾತ್ರಿ ಕಬಳಿಸಿರುವ ಪಕ್ಷಕ್ಕೆ ನೀಡಿರುವ 2 ಸ್ವತ್ತುಗಳ ಗುತ್ತಿಗೆಯನ್ನು ರದ್ದು ಪಡಿಸಿ, ಪಾಲಿಕೆಯ ವಶಕ್ಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.