ತುಮಕೂರು

ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣ ತಾಲ್ಲೂಕಿನ ಕಸಬಾ ಹೋಬಳಿಯ ಹಾಲನೂರು ಗ್ರಾಮದಲ್ಲಿ ಅವಿರತವಾಗಿ ನಡೆಯುತ್ತಿದೆ.
ಮಲ್ಲಸಂದ್ರ ಗ್ರಾಮ ಪಂಚಾಯತಿ ಸದಸ್ಯ ಎಚ್ ಜಿ ರಘು ಗಂಗಹುಚ್ಚಯ್ಯ,ನರಸಿಂಹರಾಜು ದೊಡ್ಡ ಕೆಂಪಯ್ಯ ಹಾಗೂ ರಾಜಣ್ಣ ನಂಜುಂಡಯ್ಯ ಎಂಬುವವರೇ ತಮ್ಮ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.
ಸುಮಾರು 600 ಮನೆಗಳನ್ನೊಳಗೊಂಡ ಹಾಲನೂರು ಗ್ರಾಮದಲ್ಲಿ ಇದರಿಂದಾಗಿ ಕುಡುಕರ ಉಪಟಳ ಹೆಚ್ಚಾಗಿದ್ದು ಮಹಿಳೆಯರು ರಸ್ತೆಯಲ್ಲಿ ಓಡಾಡಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮದ ಪ್ರಮುಖ ರಸ್ತೆ ಪಕ್ಕದ ಸೇತುವೆಗಳ ಮೇಲೆಯೇ ಹೊತ್ತುಗೊತ್ತು ಇಲ್ಕದಂತೆ ಕುಡಿಯುತ್ತಾ ಕುಳಿತುಕೊಂಡು ಹೋಗಿ ಬರುವವರನ್ನೆಲ್ಲಾ ಕಿಚಾಯಿಸಿಕೊಂಡು ತೊಂದರೆ ಕೊಡುತ್ತಿದ್ದಾರೆ.ಯಾರಾದರೂ ಪ್ರಶ್ನಿಸಿದರೆ ಕುಡಿದ ಮತ್ತಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.
ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಅಬಕಾರಿ ಇಲಾಖೆಗೆ ದೂರು ನೀಡಿ ಬಂದರೆ ಅವರು ಅಕ್ರಮ ಮದ್ಯ ಸರಬರಾಜುದಾರರಿಗೆ ಮಾಹಿತಿ ನೀಡುತ್ತಾರೆ.ದೂರುದಾರರು ಸುಮ್ಮನಾಗಲಿ ಅಂತಾ ಅಕ್ರಮ ಮಾರಾಟಗಾರರ ಮನೆಗಳ ಮೇಲೆ ದಾಳಿ ನಡೆಸುವ ನಾಟಕ ಆಡುತ್ತಾರೆ.
ಮೊದಲೇ ಮಾಹಿತಿ ಪಡೆದ ಮಾರಾಟಗಾರರು ಅಕ್ರಮ ಮದ್ಯವನ್ನು ಬೇರೆಡೆಗೆ ಸಾಗಿಸಿ ಏನೂ ಇಲ್ಲವೆಂಬಂತೆ ನಾಟಕವಾಡಿ ಬಂದ ಅಬಕಾರಿ ಪೊಲೀಸರಿಗೆ ಕೈ ಬಿಸಿ ಮಾಡಿ ಕಳುಹಿಸುತ್ತಿದ್ದಾರೆಂದು ಗ್ರಾಮಸ್ಥರ ಆರೋಪವಾಗಿದೆ .ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ
